೧೨ ಕಿ.ಮೀ ನಾಲಾ ಆಧುನೀಕರಣ ಕಾಮಗಾರಿ ಬಾಕಿ

| Published : Jun 20 2024, 01:10 AM IST

ಸಾರಾಂಶ

ವಿಶ್ವೇಶ್ವರಯ್ಯ ಮುಖ್ಯ ನಾಲೆ ಹಾಗೂ ಶಾಖಾ ನಾಲೆಗಳಲ್ಲಿ ನೀರಿನ ಹರಿಯುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ವಿಶ್ವೇಶ್ವರಯ್ಯ ನಾಲಾ ಜಾಲದ ಎರಡನೇ ಹಂತದ ಆಧುನೀಕಕರಣ ಕಾಮಗಾರಿಯಲ್ಲಿ ಇನ್ನೂ ೧೨ ಕಿ.ಮೀ ದೂರದ ಕಾಮಗಾರಿ ಬಾಕಿ ಉಳಿದಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯವಿಶ್ವೇಶ್ವರಯ್ಯ ಮುಖ್ಯ ನಾಲೆ ಹಾಗೂ ಶಾಖಾ ನಾಲೆಗಳಲ್ಲಿ ನೀರಿನ ಹರಿಯುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ವಿಶ್ವೇಶ್ವರಯ್ಯ ನಾಲಾ ಜಾಲದ ಎರಡನೇ ಹಂತದ ಆಧುನೀಕಕರಣ ಕಾಮಗಾರಿಯಲ್ಲಿ ಇನ್ನೂ ೧೨ ಕಿ.ಮೀ ದೂರದ ಕಾಮಗಾರಿ ಬಾಕಿ ಉಳಿದಿದೆ.ಒಟ್ಟು ೪೦ ಕಿ.ಮೀ ದೂರದ ನಾಲಾ ಆಧುನೀಕರಣ ಕಾಮಗಾರಿಯಲ್ಲಿ ೨೪ ಕಿ.ಮೀ ದೂರದ ಆಧುನೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ೪ ಕಿ.ಮೀ ದೂರದ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ ೧೨ ಕಿ.ಮೀ. ದೂರದ ಕಾಮಗಾರಿ ಬಾಕಿ ಉಳಿದುಕೊಂಡಿದೆ.ಕಾಮಗಾರಿಯ ಅಂದಾಜು ಪಟ್ಟಿಯನ್ನು ೩೦೦ ಕೋಟಿ ರು.ಗಳಿಗೆ ಸಿದ್ಧಪಡಿಸಿ ಅನುಮೋದನೆಗೆ ಸಲ್ಲಿಸಿದ್ದು, ೭ ಮಾರ್ಚ್ ೨೦೧೯ರಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ದೊರಕಿತ್ತು. ಮೈಸೂರು ದಕ್ಷಿಣ ವಲಯ ಮುಖ್ಯ ಇಂಜಿನಿಯರ್‌ರಿಂದ ತಾಂತ್ರಿಕ ಮಂಜೂರಾತಿಯೂ ದೊರಕಿತ್ತು.೨೦೧೫-೧೬ನೇ ಸಾಲಿನ ದರಪಟ್ಟಿ ಮಾದರಿಯಲ್ಲಿ ಅಂದಾಜುಪಟ್ಟಿ ತಯಾರಿಸಿದ್ದು, ೨೦೧೮-೧೯ನೇ ಸಾಲಿನಲ್ಲಿ ಹೆಚ್ಚುವರಿ ೩೦೪.೮೩ ಕೋಟಿ ರು.ಗಳಾಗಿದೆ. ಈ ಕಾಮಗಾರಿಯನ್ನು ಟೆಂಡರ್ ಆಧಾರದ ಮೇಲೆ ಸ್ಟಾರ್ ಬಿಲ್ಡರ್ಸ್‌ ಮತ್ತು ಡೆವಲಪರ್ಸ್‌ ಅವರಿಗೆ ೧೭ ಡಿಸೆಂಬರ್ ೨೦೧೯ರಲ್ಲಿ ೩೩೦.೪೮ ಕೋಟಿ ರು.ಗಳಿಗೆ ವಹಿಸಿಕೊಡಲಾಗಿದ್ದು, ಗುತ್ತಿಗೆದಾರರು ಕಾಮಗಾರಿಯನ್ನು ೧೬ ಜನವರಿ ೨೦೨೦ರಂದು ಆರಂಭಿಸಿದ್ದರು.ಕಾಲುವೆಯಲ್ಲಿ ನೀರು ಹರಿದು ಕೆಲವೊಂದು ಭಾಗಗಳಲ್ಲಿ ಕೊರೆತ ಉಂಟಾಗಿದ್ದು, ಕೆಲವು ಅಡ್ಡಮೋರಿ, ಸೋಪಾನಗಳು, ಇನ್‌ಲೆಟ್‌ಗಳ ಪುನರ್‌ನಿರ್ಮಾಣದ ಅವಶ್ಯಕತೆ ಕಂಡುಬಂದಿದ್ದರಿಂದ ೬೬.೧೩ ಕೋಟಿ ರು. ಹೆಚ್ಚುವರಿ ಆರ್ಥಿಕ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೂರು ವರ್ಷ ವಿಳಂಬ:ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿ ಮುಗಿಸಲು ೧೮ ತಿಂಗಳ ಕಾಲಮಿತಿ ನಿಗದಿಪಡಿಸಿದ್ದು, ಕಾಮಗಾರಿ ೧೫ ಜುಲೈ ೨೦೨೧ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ೨೦೨೦-೨೧ನೇ ಸಾಲಿನಲ್ಲಿ ಬೇಸಿಗೆ ಬೆಳೆಗೆ ನೀರನ್ನು ನಿಲ್ಲಿಸಿದ ನಂತರ ೨೦೨೦ ಜೂನ್ ತಿಂಗಳಲ್ಲಿ ಕಾಮಗಾರಿಯ ಪ್ರಾರಂಭಿಕ ಸರಪಳಿಗಳಾದ ೧.೧೩೦ ಕಿ.ಮೀ.ಯಿಂದ ೨.೧೫೦ ಕಿ.ಮೀ.ವರೆಗೆ ಕಾಂಕ್ರೀಟ್ ಲೈನಿಂಗ್‌ನ್ನು ಪೂರ್ಣಗೊಳಿಸಿದ್ದು ೫ ಬ್ಯಾಲೆನ್ಸಿಂಗ್ ಟ್ಯಾಂಕ್‌ಗಳ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಜುಲೈ ೨೦೨೦ರಲಲ್ಲಿ ಖಾರೀಫ್ ಬೆಳೆಗೆ ನೀರನ್ನು ಹರಿಸಿದ್ದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಲಾಗಿದೆ.ಸತತವಾಗಿ ಹರಿದ ನೀರು:ಜುಲೈ ೨೦೨೦ರಿಂದ ಮೇ ೨೦೨೨ರವರೆಗೆ ಸತತವಾಗಿ ನಾಲೆಯಲ್ಲಿ ನೀರನ್ನು ಹರಿಸಿದ್ದ ಕಾರಣ ಕಾಮಗಾರಿಯನ್ನು ಮುಂದುವರೆಸಲು ಸಾಧ್ಯವಾಗಿರುವುದಿಲ್ಲ. ೨೦೨೨ರ ಮೇ ಅಂತ್ಯದಲ್ಲಿ ನಾಲೆಯಲ್ಲಿ ನೀರು ಸ್ಥಗಿತಗೊಳಿಸಿದ್ದರಿಂದ ಪುನಃ ಕಾಮಗಾರಿಗೆ ಚಾಲನೆ ನೀಡಲಾಯಿತು. ಜುಲೈ ೨೦೨೨ರಲ್ಲಿ ರೈತರು ಬೆಳೆದುನಿಂತಿರುವ ಕಬ್ಬಿನ ಬೆಳೆಗೆ ನೀರನ್ನು ಹರಿಸಲು ಚಳವಳಿ ನಡೆಸಿದ್ದರಿಂದ ಜುಲೈ ೨೦೨೨ರ ಮೊದಲ ವಾರದಿಂದಲೇ ಕಾಲುವೆಯಲ್ಲಿ ನೀರನ್ನು ಹರಿಸಿದ ಪ್ರಯುಕ್ತ ಮತ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಜುಲೈ ೨೦೨೨ರಿಂದ ಡಿಸೆಂಬರ್ ೨೦೨೩ರವರೆಗೆ ನಾಲೆಯಲ್ಲಿ ನೀರನ್ನು ನಿರಂತರವಾಗಿ ಹರಿಸಿದ ಪರಿಣಾಮ ಕಾಮಗಾರಿಯನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.ಬೇಸಿಗೆ ಬೆಳೆಗೆ ನೀರು ನಿಲ್ಲಿಸಿ ಕಾಮಗಾರಿ:ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹಣೆ ಬಹಳ ಕಡಿಮೆಯಿದ್ದ ಕಾರಣ ೨೦ ಡಿಸೆಂಬರ್ ೨೦೨೩ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ೨೦೨೪ರ ಬೇಸಿಗೆ ಬೆಳೆಗೆ ನಾಲೆಗಳಲ್ಲಿ ನೀರು ನಿಲ್ಲಿಸಿ ಆಧುನೀಕರಣ ಕಾಮಗಾರಿಯನ್ನು ಮುಂದುವರೆಸುವುದಕ್ಕೆ ಅವಕಾಶ ನೀಡಲಾಗಿತ್ತು. ಅದರಂತೆ ೨೫ ಜನವರಿ ೨೦೨೪ರಿಂದ ನಾಲಾ ಆಧುನೀಕರಣ ಕಾಮಗಾರಿಯನ್ನು ಆರಂಭಿಸಲಾಯಿತು. ಮೇ ತಿಂಗಳಲ್ಲಿ ಎದುರಾದ ಅಕಾಲಿಕ ಮಳೆಯಿಂದ ಕಾಮಗಾರಿಯ ಪ್ರಗತಿ ಕುಂಠಿತಗೊಂಡಿದೆ. ೧೭ ಜೂನ್ ೨೦೨೪ರವರೆಗೆ ಗುತ್ತಿಗೆದಾರರು ಸಾಧಿಸಿರುವ ಪ್ರಗತಿಯ ವಿವರ ೧೧೧.೬೦ ಕೋಟಿ ರು.ಗಳಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಕಾಮಗಾರಿಯ ವಿವರಕಾಮಗಾರಿ ಒಟ್ಟು ಪೂರ್ಣ ಪ್ರಗತಿ ಬಾಕಿನಾಲಾ ಲೈನಿಂಗ್ (ಕಿ.ಮೀ.) ೪೦ ಕಿ.ಮೀ. ೨೪ ಕಿ.ಮೀ. ೪ ಕಿ.ಮೀ. ೧೨ ಕಿ.ಮೀ.ಬ್ಯಾಲೆನ್ಸಿಂಗ್ ಟ್ಯಾಂಕ್ಸ್ ೧೮ ೦೩ ೧೨ ೦೩ಸೇತುವೆಗಳು ೦೮ ೦೪ ೦೨ ೦೨ಸೋಪಾನ ಕಟ್ಟೆಗಳು ೬೭ ೨೮ ೧೧ ೨೮ಇಳಿಜಾರು (ರ್‍ಯಾಂಪ್ಸ್) ೪೦ ೧೩ ೧೨ ೧೫ಇನ್‌ಲೆಟ್‌ಗಳು ೧೭ ೦೫ ೧೦ ೦೨ವಿತರಣಾ ಹೆಡ್‌ವಾಲ್‌ಗಳು ೨೪ ೦೧ ೧೨ ೧೧ಇತರೆ ೬೬ ೦೦ ೦೦ ೬೬ಒಟ್ಟು ಕಾಮಗಾರಿ ೨೪೦ ೫೪ ೫೯ ೧೨೭ಆಧುನೀಕರಣದ ಉದ್ದೇಶವೇನು?ವಿಶ್ವೇಶ್ವರಯ್ಯ ನಾಲೆಯು ಕೃಷ್ಣರಾಜಸಾಗರ ಜಲಾಶಯದ ಎಡದಂಡೆಯಿಂದ ಪ್ರಾರಂಭಗೊಳ್ಳುತ್ತದೆ. ಈ ನಾಲಾ ಕಾಮಗಾರಿ ೧೯೩೧ರಲ್ಲಿ ಪೂರ್ಣಗೊಂಡಿರುತ್ತದೆ. ಮೈಸೂರು ಸಂಸ್ಥಾನದ ೧೯೩೨-೩೩ರ ಆಡಳಿತಾತ್ಮಕ ವರದಿಯ ಪ್ರಕಾರ ೧೯೩೨ರಲ್ಲಿ ಇರ್ವಿನ್ ನಾಲೆಯಲ್ಲಿ (ಈಗಿನ ವಿಶ್ವೇಶ್ವರಯ್ಯ ನಾಲೆ) ನೀರಾವರಿಗಾಗಿ ಮೊಟ್ಟ ಮೊದಲ ಬಾರಿಗೆ ಅಚ್ಚುಕಟ್ಟು ಪ್ರದೇಶಗಳಿಗೆ ನೀರನ್ನು ಹರಿಸಲಾಗಿರುತ್ತದೆ. ಈ ನಾಲೆಯ ಉದ್ದ ೪೬.೨೫ ಕಿ.ಮೀ. ಆಗಿದ್ದು ೨೯೯೮ ಕ್ಯುಸೆಕ್ ನೀರಿನ ಅರಿವಿನ ಸಾಮರ್ಥ್ಯವಿದೆ. ಈ ನಾಲಾ ವ್ಯಾಪ್ತಿಗೆ ೧೯೫೮೩೩ ಎಕರೆ ಅಚ್ಚುಕಟ್ಟು ಇರುತ್ತದೆ. ೧೯೭೯ರಲ್ಲಿ ವಿಶ್ವೇಶ್ವರಯ್ಯ ನಾಲೆಯ ೨೩ನೇ ಮೈಲಿಯಲ್ಲಿ ೮೦೦ ಕ್ಯುಸೆಕ್ ಸಾಮರ್ಥ್ಯಕ್ಕೆ ಸಂಪರ್ಕ ನಾಲೆಯನ್ನು ನಿರ್ಮಿಸಲಾಗಿದೆ. ಈ ನಾಲೆಯ ಅಡಿಯಲ್ಲಿ ೨ ಮುಖ್ಯ ಆಕ್ವೆಡೆಕ್ಟ್ ಇದ್ದು, ೫ನೇ ಮೈಲಿಯಲ್ಲಿ ಕಟ್ಟೇರಿ ಆಕ್ವೆಡೆಕ್ಟ್ ಮತ್ತು ೨೪ನೇ ಮೈಲಿಯಲ್ಲಿ ಲೋಕಪಾವನಿ ಆಕ್ವೆಡೆಕ್ಟ್ ಇದೆ. ಈ ಮೇಲ್ಗಾಲುವೆಯ ನಂತರ ಹುಲಿಕೆರೆ ಬಳಿ ೨೮೦೦ ಮೀ. ಉದ್ದದ ಸುರಂಗ ಮಾರ್ಗವನ್ನು ನೀರಿನ ಹರಿವಿಗೆ ನಿರ್ಮಿಸಲಾಗಿದ್ದು, ನಂತರ ಈ ನಾಲೆಯು ೨ ಕವಲುಗಳಾಗಿ ಹರಿಯುತ್ತದೆ. ಈ ಎರಡೂ ಕವಲುಗಳಿಗೆ ಮದ್ದೂರು ಮತ್ತು ಕಾವೇರಿ ಬ್ರಾಂಚ್ ಎಂದು ಹೆಸರಿಸಲಾಗಿದೆ. ನಾಲಾ ಜಾಲದ ಒಟ್ಟು ಉದ್ದ ೩೦೩ ಕಿ.ಮೀ. ಆಗಿದೆ. ವಿಶ್ವೇಶ್ವರಯ್ಯ ಮುಖ್ಯ ನಾಲೆಯ ನೀರಿನ ಸಾಮರ್ಥ್ಯ ೨೯೯೮ ಕ್ಯುಸೆಕ್‌ಗಳಾಗಿದ್ದು, ಹುಲಿಕೆರೆ ಸುರಂಗದ ಭಾಗದಲ್ಲಿ ೨೦೦ ಕ್ಯುಸೆಕ್ ನೀರಿನ ಸಾಮರ್ಥ್ಯದ ಅವಶ್ಯಕತೆ ಇದೆ. ಪ್ರಸ್ತುತ ನೀರಿನ ಹರಿವು ೧೮೦೦ ಕ್ಯುಸೆಕ್ ಇದ್ದು, ೪೦೦ ಕ್ಯುಸೆಕ್ ನೀರಿನ ಅಭಾವ ಉಂಟಾಗುತ್ತಿದೆ. ಇದರಿಂದ ನಾಲೆಯ ಕೊನೆಯ ಅಚ್ಚುಕಟ್ಟು ಭಾಗಕ್ಕೆ ನಿಗದಿತ ನೀರನ್ನು ಒದಗಿಸಲು ಸಾಧ್ಯವಾಗದೆ ಈ ಭಾಗದ ಅಚ್ಚುಕಟ್ಟುದಾರರಿಗೆ ತೊಂದರೆಯಾಗಿದ್ದರಿಂದ ನೀರಿನ ಹರಿಯುವಿಕೆಯನ್ನು ಹೆಚ್ಚಿಸಲು ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗಿದೆ.ಒಂದೊಂದು ಕಡೆ ಒಂದೊಂದು ರೀತಿ ಕಾಮಗಾರಿ:ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿಯನ್ನೊಮ್ಮೆ ವೀಕ್ಷಿಸಿಕೊಂಡು ಬಂದ ವೇಳೆ ಒಂದೊಂದು ಕಡೆ ಒಂದೊಂದು ರೀತಿಯ ಕಾಮಗಾರಿಯನ್ನು ನಡೆಸಿರುವುದು ಕಂಡುಬರುತ್ತಿದೆ. ಒಂದೆಡೆ ನಾಲಾ ಲೈನಿಂಗ್‌ನ ಮಣ್ಣಿಗೆ ಕಬ್ಬಿಣ ಕಟ್ಟಿ ಕಾಂಕ್ರೀಟ್ ಹಾಕಿದ್ದರೆ, ಮತ್ತೊಂದೆಡೆ ಮೊದಲು ಮಣ್ಣಿಗೆ ಕಾಂಕ್ರೀಟ್ ಹಾಕಿ ನಂತರ ಕಬ್ಬಿಣ ಕಟ್ಟಿರುವುದು ಕಂಡುಬರುತ್ತಿದೆ. ಸೇತುವೆ ಕೆಲಸಗಳು, ನಾಲಾ ಲೈನಿಂಗ್ ಕಾಮಗಾರಿ ಅಪೂರ್ಣಗೊಂಡಿವೆ. ಅವುಗಳಿಗೆ ಕಬ್ಬಿಣಕಟ್ಟಿ, ಕಾಂಕ್ರೀಟ್ ಹಾಕುವುದು, ಕ್ಯೂರಿಂಗ್ ಮಾಡುವುದು, ಹಲವೆಡೆ ಸೋಪಾನಕಟ್ಟೆಗಳ ಕೆಲಸವೂ ಬಾಕಿ ಉಳಿದಿದೆ. ನಾಲಾ ಆಧುನೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಕೂಲಿ ಕಾರ್ಮಿಕರ ಕೊರತೆ ಹೆಚ್ಚಾಗಿರುವುದೇ ಕಾಮಗಾರಿ ವಿಳಂಬಕ್ಕೆ ಕಾರಣವೆಂದೂ ಹೇಳಲಾಗುತ್ತಿದೆ. ಈಗಾಗಲೇ ಕಾಮಗಾರಿ ಮೂರು ವರ್ಷ ವಿಳಂಬವಾಗಿದೆ. ಇನ್ನೂ ೧೨ ಕಿ.ಮೀ. ಕಾಮಗಾರಿ ಬಾಕಿ ಇದೆ. ನೀರು ಹರಿಸುವುದಕ್ಕೆ ಇನ್ನೊಂದು ವಾರ ಬಾಕಿ ಇರಬಹುದು. ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳ್ಳುವುದು ಅಸಾಧ್ಯದ ಮಾತಾಗಿದೆ. ಬೇಸಿಗೆ ಬೆಳೆಗೆ ನೀರು ಹರಿಸದಿರುವುದರಿಂದ ಮುಂಗಾರು ಹಂಗಾಮಿಗೆ ರೈತರಿಗೆ ನೀರು ಹರಿಸಲೇಬೇಕಿದೆ. ಹೀಗಾಗಿ ಕಾಮಗಾರಿ ಮತ್ತೆ ಅರ್ಧಕ್ಕೆ ಸ್ಥಗಿತಗೊಳ್ಳುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ. ಹುಲಿಕೆರೆ ಸಮೀಪ ನಾಲೆಯ ಅಗಲವನ್ನೇ ಕಡಿಮೆ ಮಾಡಿರುವ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿಬಂದಿವೆ.