ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಲಕ್ಷ ಮತದಾರರು

| Published : Jan 25 2024, 02:03 AM IST

ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಲಕ್ಷ ಮತದಾರರು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರಸ್ತುತ 6,04,466 ಪುರುಷರು ಮತ್ತು 6,02,961 ಮಹಿಳೆಯರು ಹಾಗೂ 6 ಇತರ ಸೇರಿದಂತೆ ಒಟ್ಟು 12,07,433 ಮತದಾರರು ಇದ್ದಾರೆ.

ಕಾರವಾರ:

ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರಸ್ತುತ 6,04,466 ಪುರುಷರು ಮತ್ತು 6,02,961 ಮಹಿಳೆಯರು ಹಾಗೂ 6 ಇತರ ಸೇರಿದಂತೆ ಒಟ್ಟು 12,07,433 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾಜಕೀಯ ಪಕ್ಷದ ಮುಖಂಡರಿಗೆ ಮತದಾರರ ಅಂತಿಮ ಪಟ್ಟಿಯನ್ನು ವಿತರಿಸಿ ಮಾತನಾಡಿದರು. ಅಂತಿಮ ಮತದಾರರ ಪಟ್ಟಿಯನ್ನು ಡಿ. 22ರಂದು ಜಿಲ್ಲೆಯ ಎಲ್ಲ ಮತದಾರರ ನೋಂದಣಾಧಿಕಾರಿಗಳ (ಸಹಾಯಕ ಆಯುಕ್ತರ) ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ (ತಹಸೀಲ್ದಾರ್) ಕಚೇರಿ ಹಾಗೂ ಆಯಾ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ. ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಪ್ರಕಟಿಸಲಾಗಿದ್ದು, ಯಾವುದೇ ಆಕ್ಷೇಪಗಳಿದ್ದರೆ ಫೆಬ್ರವರಿ ಅಂತ್ಯದೊಳಗೆ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಡಿ. 27ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 11,98,532 ಮತದಾರರಿದ್ದು, ಪ್ರಸ್ತುತ 8,901 ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 1,435 ಮತಗಟ್ಟೆಗಳಿಗೆ ಸಂಬಂಧಿಸಿದಂತೆ, ಹಳಿಯಾಳ ವಿಧಾನಸಭಾ ಕ್ಷೇತ್ರದ 215 ಮತಗಟ್ಟೆಯಲ್ಲಿ 91,869 ಪುರುಷ ಮತದಾರರು, 91,166 ಮಹಿಳಾ ಮತದಾರರು ಮತ್ತು 1 ಇತರ ಮತದಾರರು ಸೇರಿದಂತೆ ಒಟ್ಟು 1,83,036 ಮತದಾರರು ಇದ್ದಾರೆ.

ಕಾರವಾರ ವಿಧಾನಸಭಾ ಕ್ಷೇತ್ರದ 258 ಮತಗಟ್ಟೆಯಲ್ಲಿ 1,09,378 ಪುರುಷ ಮತದಾರರು, 1,12,786 ಮಹಿಳಾ ಮತದಾರರು ಮತ್ತು 1 ಇತರ ಮತದಾರರು ಸೇರಿದಂತೆ ಒಟ್ಟು 2,22,165 ಮತದಾರರು ಇದ್ದಾರೆ.

ಕುಮಟಾ ವಿಧಾನಸಭಾಕ್ಷೇತ್ರದ 215 ಮತಗಟ್ಟೆಯಲ್ಲಿ 94,624 ಪುರುಷ ಮತದಾರರು, 95,229 ಮಹಿಳಾ ಮತದಾರರು ಮತ್ತು 3 ಇತರ ಮತದಾರರು ಸೇರಿದಂತೆ ಒಟ್ಟು 1,89,856 ಮತದಾರರು ಇದ್ದಾರೆ.

ಭಟ್ಕಳ ವಿಧಾನಸಭಾ ಕ್ಷೇತ್ರದ 248 ಮತಗಟ್ಟೆಯಲ್ಲಿ 1,14,053 ಪುರುಷ ಮತದಾರರು, 1,11,075 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,25,128 ಮತದಾರರು ಇದ್ದಾರೆ.

ಶಿರಸಿ ವಿಧಾನಸಭಾ ಕ್ಷೇತ್ರದ 266 ಮತಗಟ್ಟೆಯಲ್ಲಿ 1,01,484 ಪುರುಷ ಮತದಾರರು, 1,01,163 ಮಹಿಳಾ ಮತದಾರರು ಮತ್ತು 1 ಇತರ ಮತದಾರರು ಸೇರಿದಂತೆ ಒಟ್ಟು 2,02,648 ಮತದಾರರು ಇದ್ದಾರೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ 233 ಮತಗಟ್ಟೆಯಲ್ಲಿ 93,058 ಪುರುಷ ಮತದಾರರು, 91,542 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,84,600 ಮತದಾರರಿದ್ದಾರೆ ಎಂದರು.

2024ರ ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ಒಟ್ಟು 29,229 ಹಿರಿಯ ನಾಗರಿಕ ಮತದಾರರು, 24,399 ಯುವ ಮತದಾರರು, ಹಾಗೂ 15,579 ವಿಕಲಚೇತನ ಮತದಾರರಿದ್ದಾರೆ.

ಚುನಾವಣಾ ಆಯೋಗದಿಂದ ಜಿಲ್ಲೆಗೆ ನಿಯೋಜಿಸಿದ ಮತದಾರರ ಪಟ್ಟಿ ವೀಕ್ಷಕರು ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸೇರ್ಪಡೆ, ತೆಗೆದು ಹಾಕುವಿಕೆ ಮುಂತಾದ ಅಂಶಗಳನ್ನು ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ಈಗಾಗಲೇ ವರದಿಯನ್ನು ಸಲ್ಲಿಸಿದ್ದು, ಜಿಲ್ಲೆಯ ಮತದಾರರು ತಮ್ಮ ಹೆಸರು ಮತ್ತು ವಿವರಗಳು ಸರಿ ಇವೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಸಂಬಂಧಪಟ್ಟ ಮತಗಟ್ಟೆ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವುದು ಅಥವಾ ಸಂಬಂಧಪಟ್ಟ ತಹಸೀಲ್ದಾರ್ ಕಚೇರಿಯಲ್ಲಿ ಸಹ ಪಡೆದುಕೊಳ್ಳಬಹುದಾಗಿದೆ ಎಂದರು.

2024ರ ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಗೆ ಒಟ್ಟು 1945 ಕಂಟ್ರೋಲ್ ಯುನಿಟ್, 2756 ಬ್ಯಾಲೆಟ್ ಯುನಿಟ್ ಹಾಗೂ 2035 ವಿವಿಪ್ಯಾಟ್‌ಗಳು ಹಂಚಿಕೆಯಾಗಿದ್ದು, ಪ್ರಥಮ ಹಂತದ ಪರಿಶೀಲನೆ ಪೂರ್ಣಗೊಳಿಸಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪವಿಭಾಗಾಧಿಕಾರಿ ಕನಿಷ್ಕ, ಕಾಂಗ್ರೆಸ್‌ನ ಸಮೀರ ನಾಯ್ಕ, ಬಿಜೆಪಿಯ ಮನೋಜ್ ಭಟ್ ಮತ್ತಿತರರು ಇದ್ದರು.