ಕನ್ನಡಪ್ರಭ ವಾರ್ತೆ ವಿಜಯಪುರ/ಚಡಚಣ

ಆಸ್ತಿ ವಿವಾದದ ಹಿನ್ನೆಲೆ ಮೇ 29ರಂದು ಭೀಮಾತೀರದ ಚಡಚಣ ತಾಲೂಕಿನ ಗೋವಿಂದಪುರದಲ್ಲಿ ನಡೆದಿದ್ದ ಆರು ಜನರ ಭೀಕರ ಹತ್ಯೆಯ ಪ್ರಮುಖ 12 ಆರೋಪಿಗಳನ್ನು ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮಾಸಿದ್ದ ಬಿರಾದಾರ, ಮಹೇಶ ಬಿರಾದಾರ, ರಾಜಕುಮಾರ ಕೋಳಿ, ರಾಜು ಉಗಾರ, ಯಲ್ಲಪ್ಪ ಅರಕೇರಿ, ಕಲ್ಲನಗೌಡ ಪಾಟೀಲ, ಲಾಯಪ್ಪ ಬಿರಾದಾರ, ಸುಭಾಸ ಬಿರಾದಾರ, ರಾವಸಾಬ ಬಿರಾದಾರ, ಗಜಾನಂದ ಬಿರಾದಾರ, ಮಲಕಾರಿ ಕೋಳಿ, ಸಂಜು ಅರಕೇರಿ ಬಂಧಿತ ಆರೋಪಿಗಳು.ಬಂಧಿತರೆಲ್ಲರೂ ಗೋವಿಂದಪುರದವರು. ಹಗೆತನ ಸಾಧಿಸಿದ್ದ ಪಾಟೀಲ ಎಂಬ ಒಂದೇ ಕುಟುಂಬಕ್ಕೆ ಸೇರಿದ್ದು ಸಂಬಂಧಿಕರಾಗಿದ್ದಾರೆ. ಬಂಧಿತರೆಲ್ಲರನ್ನೂ ಸೋಮವಾರ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗಾರರಲ್ಲಿ ಈಗಾಗಲೇ 12 ಜನರನ್ನು ಬಂಧಿಸಿರುವ ವಿಜಯಪುರ ಹಾಗೂ ಚಡಚಣ ಠಾಣೆ ಪೊಲೀಸರು ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಭಯಾನಕ ಆರು ಜನರ ಹತ್ಯೆಯಲ್ಲಿ 21ಕ್ಕೂ ಅಧಿಕ ಆರೋಪಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಉಳಿದವರು ತಲೆ ಮರೆಸಿಕೊಂಡಿದ್ದಾರೆ.

ಆರು ಜನರ ಹತ್ಯೆ:

ಚಡಚಣದ ನಿವಾಸಿಗಳಾದ ನಿರಾಳೆ ಕುಟುಂಬದ ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ತಾಪಂ ಮಾಜಿ ಸದಸ್ಯ ಚಂದ್ರಕಾಂತ ನಿರಾಳೆ (55), ಶಿವಪುತ್ರನ ಮಕ್ಕಳಾದ ರಾಹುಲ ನಿರಾಳೆ(25), ಸಮರ್ಥ ನಿರಾಳೆ(23) ಹಾಗೂ ಇವರ ಜತೆಗೆ ಹೋಗಿದ್ದ ಶಬ್ಬಿರ ಅತ್ತಾರ(45) ಎಂಬಾತನ ಹತ್ಯೆ ನಡೆದಿತ್ತು.

ಘಟನೆಗೆ ಕಾರಣವೇನು..?:


ಕಳೆದ ಕೆಲವು ತಿಂಗಳ ಹಿಂದೆ ಗೋವಿಂದಪುರದಲ್ಲಿ ತೇಲಿ ಎಂಬ ಕುಟುಂಬದವರಿಂದ ಖರೀದಿಸಿದ್ದ 25 ಎಕರೆ ಜಮೀನಿಗೆ ತೆರಳಿದ್ದ ನಿರಾಳೆ ಕುಟುಂಬದವರು ಜಮೀನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ಮೇ 29ರಂದು ಮಧ್ಯಾಹ್ನ ಏಕಾಏಕಿ ಬೈಕ್‌ಗಳ ಮೇಲೆ ಬಂದಿದ್ದ ಹಲವರು ನಿರಾಳೆ ಕುಟುಂಬಸ್ಥರ ಮೇಲೆ ಫೈರಿಂಗ್‌ ಮಾಡಿ, ಕಣ್ಣಿಗೆ ಖಾರದಪುಡಿ ಎರಚಿ ಮನಸೋ ಇಚ್ಛೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದರು. ಇದರಲ್ಲಿ ನಿರಾಳೆ ಕುಟುಂಬದ ಐವರು ಹಾಗೂ ಇನ್ನೋರ್ವ ಮೃತಪಟ್ಟಿದ್ದರೆ, ಜೊತೆಗಿದ್ದ ಇಬ್ಬರಿಗೆ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಕಲ್ಲನಗೌಡ ಪಾಟೀಲ ಎಂಬಾತ ಹೊಂದಿದ್ದ ಲೈಸನ್ಸ್ ಉಳ್ಳ ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿದ್ದು ದೃಢವಾಗಿದೆ.

ಮೃತರಿಗೆ ಸಂತಾಪ: ಖಿಲಾರಿ ತಳಿ ಹೋರಿಗಳನ್ನು ಸಾಕುವುದರಲ್ಲಿ ಪ್ರಖ್ಯಾತಿ ಪಡೆದಿದ್ದ ನಿರಾಳೆ ಕುಟುಂಬವು ಹತ್ಯೆಯಾಗಿದ್ದರಿಂದ ನಿರಾಳೆ ಕುಟುಂಬದ ಸದಸ್ಯರ ಬಗ್ಗೆ ಮಹಾರಾಷ್ಟ್ರದಲ್ಲೂ ಸಂತಾಪ ವ್ಯಕ್ತವಾಗಿದೆ. ಖಿಲಾರಿ ಹೋರಿ ಬೆಳೆಸುವ ರೈತರು ಹಳೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

-------------

ಕೋಟ್.....

ಮೇ 29ರಂದು ಚಡಚಣ ತಾಲೂಕಿನ ಗೋವಿಂದಪುರದಲ್ಲಿ ನಡೆದಿದ್ದ ಆರು ಜನರ ಭೀಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಗೋವಿಂದಪುರದ 12 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಇನ್ನುಳಿದವರ ಬಂಧನವು ಶೀಘ್ರದಲ್ಲೆ ಆಗಲಿದೆ. ಕಲ್ಲನಗೌಡ ಪಾಟೀಲ ಎಂಬಾತನ ಡಬಲ್‌ ಬ್ಯಾರಲ್‌ ಗನ್‌ನಿಂದ ಹಾರಿಸಿದ್ದ ಗುಂಡುಗಳು ಮೃತರ ಇಬ್ಬರ ದೇಹದಲ್ಲಿ ಪತ್ತೆಯಾಗಿವೆ. ದೂರಿನಲ್ಲಿ ದಾಖಲಾಗಿರುವ 12 ಜನರಲ್ಲಿ 3 ಜನರು ಹಾಗೂ ದೂರು ಹೊರತುಪಡಿಸಿ 9 ಜನರನ್ನು ಬಂಧಿಸಲಾಗಿದೆ. 21ಕ್ಕೂ ಹೆಚ್ಚಿನ ಜನರು ಇರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.

- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ