ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಇತಿಹಾಸ ಪ್ರಸಿದ್ಧವಾದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯು ಮಾ.12ರಿಂದ 16 ರವರೆಗೆ 5 ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಕೋಟೆ ಶ್ರೀಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗದ ಮಾರಿಕಾಂಬ ಜಾತ್ರೆ ಅತ್ಯಂತ ಪ್ರಸಿದ್ಧವಾಗಿದ್ದು, ಜಿಲ್ಲಾ ಕೇಂದ್ರವಾದ ಶಿವಮೊಗ್ಗದಲ್ಲಿ ನಡೆಯುತ್ತಿರುವ ಅತ್ಯಂತ ದೊಡ್ಡ ಜಾತ್ರೆಯಾಗಿದೆ. ಈ ಜಾತ್ರೆಗೆ ಸುಮಾರು 500 ವರ್ಷಗಳ ಇತಿಹಾಸವಿದೆ. ಅಂದು ಮಲೆನಾಡಿನ ಪ್ರಾಂತ್ಯದ ಆಡಳಿತ ನಡೆಸುತ್ತಿದ್ದ ಶಿವಪ್ಪ ನಾಯಕ ಎಂಬ ಅರಸರು ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿಯೇ ಯುದ್ಧಕ್ಕೆ ಹೊರಡುತ್ತಿದ್ದರು. ಬಯಲು ಮಾರಿ ಎಂದೇ ಜನರಿಂದ ಕರೆಯಲ್ಪಡುತ್ತಿದ್ದ ಶ್ರೀ ಮಾರಿಕಾಂಬೆ ಗದ್ದುಗೆ ಬಳಿ ಬಂದ ಶ್ರೀ ಶ್ರೀಧರಸ್ವಾಮಿ ಅವರು ಇದು ಶಕ್ತಿಪೀಠವಾಗಿದೆ. ಈ ಮಹಾತಾಯಿಗೆ ನೆರಳು ಮಾಡಿ ಎಂದು ಊರಿನ ಪುರಪಿತೃಗಳಿಗೆ ತಿಳಿಸಿ, ಸಾಗರದ ಕಡೆಗೆ ಪಯಾಣ ಬೆಳೆಸಿದರು ಎಂಬ ಇತಿಹಾಸವಿದೆ ಎಂದು ತಿಳಿಸಿದರು. ಕಾಲಕ್ರಮೇಣ ಕಾರ್ಯಪ್ರವೃತರಾದ ನಗರದಲ್ಲಿನ ಅನೇಕ ಗಣ್ಯರುಗಳು ಸೇರಿ ಸಮಿತಿ ರಚಿಸಿಕೊಂಡು ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು ಕಾಲಕಾಲಕ್ಕೆ ನಡೆಸಿಕೊಂಡು ಬರುತ್ತಿದ್ದಾರೆ. ನೂರಾರು ವರ್ಷಗಳಿಂದ 2 ವರ್ಷಕೊಮ್ಮೆ ನಡೆಯುವ ಶ್ರೀ ಮಾರಿಕಾಂಬೆ ಜಾತ್ರೆಯನ್ನು ಇತ್ತೀಚಿನ ವರ್ಷಗಳಿಂದ ಸಂಪ್ರದಾಯ ಮತ್ತು ಅರ್ಥಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ವಿಶೇಷ ಆಚರಣೆ ಹೇಗೆ?:ಈ ಬಾರಿ ಮಾ.12ರಂದು ಮಂಗಳವಾರ ಬೆಳಗಿನ ಜಾವ 5 ಗಂಟೆಗೆ ಸಮಿತಿ ವತಿಯಿಂದ ಮಂಗಳವಾದ್ಯದೊಂದಿಗೆ ಬಿ.ಬಿ. ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ. ಆ ಕುಟುಂಬದ ಮುತ್ತೈದೆಯರು ಮಂಗಳದ್ರವ್ಯಾದಿಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದೊಂದಿಗೆ ಗಾಂಧಿಬಜಾರಿನ ತವರು ಮನೆಯಲ್ಲಿರುವ ಶ್ರೀ ಮಾರಿಕಾಂಬೆಗೆ ಉಡಿ ತುಂಬಿ, ಪೂಜೆ ಸಲ್ಲಿಸುತ್ತಾರೆ. ತದನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆ ಆರಂಭಿಸುತ್ತಾರೆ. ಮಂಗಳವಾರ ರಾತ್ರಿ ೧೦ ಗಂಟೆಯವರೆಗೂ ಲಕ್ಷಾಂತರ ಮುತ್ತೈದೆಯರು ಶ್ರೀ ಮಾರಿಕಾಂಬೆಗೆ ಮಡಿಲಕ್ಕಿ ಸಲ್ಲಿಸುತ್ತಾರೆ ಎಂದು ತಿಳಿಸಿದರು.
ಇದೇ ದಿನ ಮಾರಿ ಗದ್ದುಗೆಯಲ್ಲಿ ಬೆಳಗ್ಗೆ 5ರಿಂದ ಎಡೆಪೂಜೆ ಆರಂಭವಾಗುತ್ತದೆ. ಮಂಗಳವಾರ ರಾತ್ರಿ 9ರ ನಂತರ ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ, ಮೆರವಣಿಗೆಯಲ್ಲಿ ಉಪ್ಪಾರ ಸಮಾಜ ಬಾಂಧವರು ಗದ್ದುಗೆಗೆ ತಂದು ಪ್ರತಿಷ್ಠಾಪಿಸುತ್ತಾರೆ. ಈ ಮಧ್ಯೆ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗೆ ಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗಂಗಾಮತಸ್ಥ ಸಮಾಜದವರು ಪೂಜೆ ಸಲ್ಲಿಸುತ್ತಾರೆ ಎಂದು ಮಾಹಿತಿ ನೀಡಿದರು.ಮಾ.13ರಂದು ಬುಧವಾರ ಬೆಳಗಿನ ಜಾವ 4ಕ್ಕೆ ಸುಮಾರಿಗೆ ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಸಮಾಜ ಬಾಂಧವರು ಬೇವಿನ ಉಡುಗೆಯೊಂದಿಗೆ ಆಗಮಿಸಿ, ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಗೆ ಪ್ರತಿಷ್ಠಾಪಿಸಲಾಗುತ್ತದೆ. ಬಳಿಕ ಕುರುಬ ಜನಾಂಗದ ಗುತ್ಯಮ್ಮ ದೇವಾಲಯದ ಅರ್ಚಕರಾದ ಚೌಡಿಕೆ ಕುಟುಂಬದವರು ನೈವೇದ್ಯ ಮಾಡಿ, ಪೂಜೆ ಸಲ್ಲಿಸುತ್ತಾರೆ. ಬುಧವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ ವಾಲ್ಮೀಕಿ ಸಮಾಜದವರು, ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಉಪ್ಪಾರ ಸಮಾಜದವರು, ತದನಂತರ ರಾತ್ರಿ 11 ಗಂಟೆವರೆಗೆ ಮಡಿವಾಳ ಸಮಾಜದವರು ಸರದಿಯಂತೆ 4 ದಿನಗಳ ಕಾಲ ಗದ್ದಗೆಯಲ್ಲಿ ಅಮ್ಮನವರಿಗೆ ಪೂಜೆ ಸಲ್ಲಿಸುತ್ತಾರೆ ಎಂದು ವಿವರಿಸಿದರು.
ಮಾ.16ರಂದು ರಾತ್ರಿ 7 ಗಂಟೆಗೆ ಸಮಿತಿ ವತಿಯಿಂದ ದೇವಿಗೆ ಮಹಾಮಂಗಳಾರತಿ ಸಲ್ಲಿಸಿದ ನಂತರ ಶ್ರೀ ಮಾರಿಕಾಂಬೆಯ ಉತ್ಸವ ವಿವಿಧ ಜಾನಪದ ತಂಡಗಳ ಮೆರುಗಿನೊಂದಿಗೆ ಲಕ್ಷಾಂತರ ಮಂದಿ ಭಕ್ತರು ಅತ್ಯಂತ ಸಂಭ್ರಮದಿಂದ ಅಮ್ಮನವರನ್ನು ವನಪ್ರವೇಶಕ್ಕೆ ಕಳಿಸಿಕೊಡುವ ಮೂಲಕ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ತೆರೆ ಎಳೆಯಲಾಗುತ್ತದೆ ಎಂದರು. ದಸರಾ ಮಾದರಿಯಲ್ಲೆ ಅಲಂಕಾರ: ಶ್ರೀ ಕೋಟೆ ಮಾರಿಕಾಂಬಾ ಜಾತ್ರೆ ಅಂಗವಾಗಿ ಸುಮಾರು 18ಕ್ಕೂ ಹೆಚ್ಚು ಉಪಸಮಿತಿಗಳನ್ನು ರಚಿಸಲಾಗಿದೆ. ಈ ಬಾರಿ ಹಬ್ಬದ ವಿಶೇಷವಾಗಿ ಹಳೇ ಶಿವಮೊಗ್ಗ ಭಾಗವೂ ಸೇರಿ ಹಳೇ ಮಂಡ್ಲಿ, ಪೊಲೀಸ್ ಚೌಕಿವರೆಗೂ ದಸರಾ ಮಾದರಿಯಲ್ಲೇ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ತಿಳಿಸಿದರು.ಅಲ್ಲದೇ, ಈ ಬಾರಿ ಜಾತ್ರೆಯ ವಿಶೇಷವಾಗಿ ಗಾಂಧಿಬಜಾರಿನ ಮುಖ್ಯದ್ವಾರದಲ್ಲಿ ಸುಮಾರು 43 ಅಡಿ ಎತ್ತರದಲ್ಲಿ ಚಾಮುಂಡಿ ವಿಗ್ರಹವನ್ನು ನಿರ್ಮಿಸಲಾಗುತ್ತದೆ. ಇದು ಚಲಿಸುವ ಸ್ಥಿತಿಯಲ್ಲಿರುತ್ತದೆ. ವಿಶೇಷವಾಗಿ ಹೂವಿನ ಅಲಂಕಾರವನ್ನು ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಅವರು ವಹಿಸಿಕೊಂಡಿದ್ದು, ಇದಕ್ಕಾಗಿ ಬೆಂಗಳೂರಿನಿಂದ 40 ಜನರು ಆಗಮಿಸಲಿದ್ದಾರೆ ಎಂದರು.
ಮಹಾನಗರ ಪಾಲಿಕೆ ಸುಮಾರು ₹10 ಲಕ್ಷ ನೀಡಿದೆ. ಅದನ್ನು ಬಿಟ್ಟರೆ ನಾವು ಯಾರ ಬಳಿಯೂ ಚಂದಾ ಎತ್ತುವುದಿಲ್ಲ. ಇದೊಂದು ಸರ್ವಜನಾಂಗದ ಹಬ್ಬವಾಗಿದೆ. ಅತಿ ಹೆಚ್ಚು ಬಾಬುದಾರರಿದ್ದಾರೆ. ಸುಮಾರು 8ಕ್ಕೂ ಹೆಚ್ಚು ಜನಾಂಗದವರು ಈ ಜಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಯಾವ ಪಕ್ಷದ ಭೇದವಿಲ್ಲದೇ ಎಲ್ಲ ಪಕ್ಷದವರೂ, ಎಲ್ಲ ಜನಾಂಗದವರು ಸೇರಿ ಈ ಜಾತ್ರೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.ಈ ಬಾರಿ ಗಾಂಧಿಬಜಾರಿನಲ್ಲಿ ಪ್ರತಿಷ್ಠಾಪಿಸುವ ಅಮ್ಮನವರ ದರ್ಶನಕ್ಕಾಗಿ ವಿಕಲಚೇತನರಿಗೆ ವಿಶೇಷ ಅವಕಾಶ ಕಲ್ಪಿಸಲಾಗುವುದು. ಜನಜಂಗುಳಿಯ ಒತ್ತಡ ಆಗದಂತೆ ದೇವಿ ದರ್ಶನಕ್ಕೆ ಸರಾಗ ವ್ಯವಸ್ಥೆ ಮಾಡಲಾಗುವುದು. ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕೂಡ ನಡೆಸಲಾಗುವುದು ಎಂದರು.
ಪ್ರತಿನಿತ್ಯ ಬೆಳಗ್ಗ 7ರಿಂದ ವಿಶೇಷ ಪೂಜೆಗಳು ನಡೆಯಲಿದ್ದು, ಪ್ರಸಾದ ವಿನಿಯೋಗ ನಿರಂತರವಾಗಿ ನಡೆಯುತ್ತದೆ. ಮಾ.13ರಂದು ಬೆಳಗ್ಗೆ ಮಾರಿಗದ್ದುಗೆಯಲ್ಲಿ ಎಡೆಪೂಜೆ ಆರಂಭವಾಗುತ್ತದೆ. ಆದರೆ, ಸಾರ್ವಜನಿಕರು ಎಡೆಯನ್ನು ಗದ್ದುಗೆಗೆ ಹಾಕಿ ಹಾಗೆ ಹೋಗಬಾರದು. ಆ ಎಡೆಯನ್ನು ತೆಗೆದುಕೊಂಡು ಸಾರ್ವಜನಿಕರಿಗೆ ವಿತರಿಸಬೇಕೆಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಎನ್. ಉಮಾಪತಿ, ಎಸ್. ಹನುಮಂತಪ್ಪ, ಡಿ.ಎಂ. ರಾಮಯ್ಯ, ಎಸ್.ಸಿ. ಲೋಕೇಶ್, ಎ.ಎಚ್. ಸುನೀಲ್, ಸೀತಾರಾಮಾ ನಾಯ್ಕ್, ಟಿ.ಎಚ್. ಚಂದ್ರಶೇಖರ್, ಸತ್ಯನಾರಾಯಣ್, ಪ್ರಭಾಕರ ಗೌಡ, ಎಚ್.ಡಿ. ಪ್ರಕಾಶ್, ತುಕ್ಕೋಜಿರಾವ್, ಎನ್.ರವಿಕುಮಾರ್ ಹಲವರಿದ್ದರು.
- - - ಬಾಕ್ಸ್3 ದಿನ ಕುಸ್ತಿ ಪಂದ್ಯಾವಳಿಕೋಟೆ ಶ್ರೀ ಮಾರಿಕಾಂಬಾ ಜಾತ್ರೆ ಅಂಗವಾಗಿ ಮಾ.15 ರಿಂದ 17ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಬಯಲುಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳ ಪ್ರಸಿದ್ಧ ಪೈಲ್ವಾನರು ಆಗಮಿಸುತ್ತಿದ್ದಾರೆ. ಪೈಲ್ವಾನರಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಜ್ಯ- ಅಂತರ ರಾಜ್ಯದ ಹೆಸರಾಂತ ಪೈಲ್ವಾನರಿಂದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನಡೆಸಲಾಗುತ್ತದೆ. ಮಾ.15ರಂದು ಮಧ್ಯಾಹ್ನ 3 ಗಂಟೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸುವರು. ವಿಧಾನ ಪರಿಷತ್ತು ಸದಸ್ಯ ಡಿ.ಎಸ್. ಅರುಣ್ ಬಹುಮಾನ ವಿತರಿಸುವರು. ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಆಗಮಿಸುವರು.
ಮಾ.17ರಂದು ಪಂದ್ಯಾವಳಿಯಲ್ಲಿ ಗೆದ್ದ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಎಂಐಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ್‌ಗೌಡ, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಆರ್.ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಭಾಗವಹಿಸಲಿದ್ದಾರೆ. ಅಖಾಡದ ಕೊನೆಯ ಕುಸ್ತಿ ಗೆದ್ದ ಪೈಲ್ವಾನರಿಗೆ ಬೆಳ್ಳಿ ಗದೆ ಮತ್ತು 50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.ಹಾಗೆಯೇ ದೇವಸ್ಥಾನ ಆವರಣದಲ್ಲಿ ಮಾ.14ರಿಂದ 16ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 14ರಂದು ಭರತನಾಟ್ಯ, 15ರಂದು ಸುಗಮ ಸಂಗೀತ, 16ರಂದು ಸಂಗೀತ ಸಂಜೆ ನಡೆಯಲಿದೆ.
- - - ಬಾಕ್ಸ್-2ಸಾರು ಹಾಕುವ ಕಾರ್ಯಕ್ರಮಕ್ಕೆ ಚಾಲನೆ ಮಾ.12ರಿಂದ 16ರವರೆಗೆ ನಡೆಯುವ ಕೋಟೆ ಶ್ರೀಮಾರಿಕಾಂಬ ಜಾತ್ರೆಗೆ ಮಂಗಳವಾರ ಸಾರು ಹಾಕಲಾಯಿತು. ಕೋಟೆ ಶ್ರೀಮಾರಿಕಾಂಬ ದೇವಸ್ಥಾನದಲ್ಲಿ ಶ್ರೀಮಾರಿಕಾಂಬ ಸೇವಾ ಸಂಸ್ಥೆ ಸದಸ್ಯರು ದೇವಿಗೆ ವಿಶೇಷ ಪೂಜೆ ನೆರವೇರಿಸಿ, ನಂತರ ಸಾರು ಸಾರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಾ.12 ರಿಂದ ಶಿವಮೊಗ್ಗದಲ್ಲಿ ಮಾರಿಕಾಂಬ ಜಾತ್ರೆ ಆರಂಭವಾಗಲಿದೆ. ಈ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದು ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ನಗಾರಿ ಬಾರಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು.5 ಆಟೋಗಳಲ್ಲಿ ಸಾರು ಹಾಕುವ, ಜಾತ್ರೆಗೆ ಭಾಗವಹಿಸುವಂತೆ ಆಹ್ವಾನಿಸಲಾಯಿತು. ಈ ಆಟೋಗಳು ನಗರದ ತುಂಬಾ ಪ್ರಚಾರ ಮಾಡಲಿವೆ. ಸಾರು ಹಾಕುವ ಉದ್ದೇಶದ ಬಗ್ಗೆ ಮಾತನಾಡಿದ ಎನ್.ಮಂಜುನಾಥ್, ಇದೊಂದು ಜಾತ್ರೆಯ ಪ್ರಕ್ರಿಯೆಯಾಗಿದೆ. ಸಾರು ಸಾರಿದ ಮೇಲೆ ಶಿವಮೊಗ್ಗದಲ್ಲಿರುವ ಮೂಲ ನಿವಾಸಿಗಳು ಯಾವುದೇ ಊರಿಗೆ, ಯಾವುದೇ ಕೆಲಸಕ್ಕೆ ಹೋದರು ಕೂಡ ಆ ದಿನವೇ ಮನೆಗೆ ಮರಳಿ ಬರಬೇಕು ಎಂಬ ಪದ್ಧತಿಯಿದೆ. ಹಾಗೆಯೇ ಸಾರು ಸಾರಿದ ಮೇಲೆ ಜಾತ್ರೆ ಮುಗಿಯುವವರೆಗೂ ಯಾವುದೇ ಮಂಗಳ ಕಾರ್ಯ ಮಾಡಬಾರದು ಎಂಬ ಉದ್ದೇಶವು ಇದರಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಉಮಾಪತಿ, ಡಿ.ಎಂ.ರಾಮಯ್ಯ, ಎನ್. ರವಿಕುಮಾರ್, ರಘುವೀರ ಸಿಂಗ್, ಮಂಜುನಾಥ್ ಬಾಬು ಮತ್ತಿತರರು ಇದ್ದರು.- - - -5ಎಸ್‌ಎಂಜಿಕೆಪಿ06:
ಶಿವಮೊಗ್ಗದ ಕೋಟೆ ಶ್ರೀಮಾರಿಕಾಂಬ ದೇವಸ್ಥಾನ ಆವರಣದಲ್ಲಿ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ನಗಾರಿ ಬಾರಿಸುವ ಮೂಲಕ ಜಾತ್ರೆ ಪ್ರಚಾರಕ್ಕೆ ಚಾಲನೆ ನೀಡಿದರು.- - --5ಎಸ್‌ಎಂಜಿಕೆಪಿ07:
ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮಾರಿಕಾಂಬ ಜಾತ್ರೆ ಮಹೋತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು.