ಸಾರಾಂಶ
ನಗರಸಭೆಯ ಪೌರಾಯುಕ್ತ ರಾಯಪ್ಪ ಅವರು ಈ ಅನಾಥ ಶವಗಳ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಲ್ಲದೆ, ಶವಗಳನ್ನು ಹೊತ್ತು ಸಾಗಿಸಲು ಕೈಜೋಡಿಸಿದರು. ಪೌರಾಯುಕ್ತರ ಈ ಮಾನವೀಯತೆ ಸಾರ್ವಜನಿಕ ವಲಯದಲ್ಲಿಯೂ ಪ್ರಶಂಸೆ ವ್ಯಕ್ತವಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಅಜ್ಜರಕಾಡು ಸರ್ಕಾರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಎರಡು ಅನಾಥ, ಅಪರಿಚಿತ ಶವಗಳ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಸೋಮವಾರ ಗೌರವಯುತವಾಗಿ ನಡೆಸಲಾಯಿತು.
ನಗರಸಭೆಯ ಪೌರಾಯುಕ್ತ ರಾಯಪ್ಪ ಅವರು ಈ ಅನಾಥ ಶವಗಳ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಲ್ಲದೆ, ಶವಗಳನ್ನು ಹೊತ್ತು ಸಾಗಿಸಲು ಕೈಜೋಡಿಸಿದರು. ಪೌರಾಯುಕ್ತರ ಈ ಮಾನವೀಯತೆ ಸಾರ್ವಜನಿಕ ವಲಯದಲ್ಲಿಯೂ ಪ್ರಶಂಸೆ ವ್ಯಕ್ತವಾಗಿದೆ.ಖಾಸಗಿ ಸ್ಥಳದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಒಂದು ಶವ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಅಪರಿಚಿತ ರೋಗಿಯ ಇನ್ನೊಂದು ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತು. ಮೃತರ ವಾರಸುದಾರರಿಗೆ ಮಾಧ್ಯಮದಲ್ಲಿ ಪ್ರಕಟಣೆ ನೀಡಲಾಗಿತ್ತು. ಆದರೆ ವಾರಸುದಾರರು ಬಾರದೆ ಇರುವುದರಿಂದ, ಕಾನೂನು ಪ್ರಕ್ರಿಯೆಗಳು ನಡೆಸಿದ ಬಳಿಕ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಈ ಅಂತ್ಯಸಂಸ್ಕಾರದ ನೇತೃತ್ವ ವಹಿಸಿದ್ದರು. ನಗರ ಠಾಣೆಯ ಪೊಲೀಸರು ಕಾನೂನು ಪ್ರಕ್ರಿಯೆ ನಡೆಸಿದರು. ಜಿಲ್ಲಾಸ್ಪತ್ರೆ, ನಗರಸಭೆ ಅಂತ್ಯಸಂಸ್ಕಾರ ಕಾರ್ಯಕ್ಕೆ ಸಹಕಾರ ನೀಡಿತು. ವಿಕಾಸ್ ಶೆಟ್ಟಿ, ಪ್ರದೀಪ್ ಅಚ್ಚರಕಾಡು, ಸೋನಿ ಅಜ್ಜರಕಾಡು, ಫ್ಲವರ್ ವಿಷ್ಣು, ಅಣ್ಣಪ್ಪ ಪೂಜಾರಿ ಕರಂಬಳ್ಳಿ ನೆರವಾದರು.