ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮನಹಳ್ಳಿ ಅಮ್ಮನವರ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದ ಹಕ್ಕು ಹೊಂದಿರುವ 12 ತತ್ತಿನ ಗ್ರಾಮಗಳ ಗ್ರಾಮಸ್ಥರಿಂದ ಶನಿವಾರ ನಡೆದ ವೈಭವದ ಬಿಸಿಲು ಕೊಂಡೋತ್ಸವಕ್ಕೆ ಜಿಲ್ಲೆ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು.ಚಿಣ್ಯ ಗ್ರಾಮದ ಮೂಲ ದೇವಸ್ಥಾನದಲ್ಲಿ ಸೋಮನಳಮ್ಮದೇವಿ ಸರ್ವಾಲಂಕೃತ ಅಶ್ವಾರೋಹಣ ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದ ನಂತರ, ಡೊಳ್ಳು ಕುಣಿತ, ಪೂಜಾ ಕುಣಿತ, ಸೋಮನಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಉತ್ಸವ ಮೂರ್ತಿಯನ್ನು ಸೋಮನಹಳ್ಳಿ ಕ್ಷೇತ್ರಕ್ಕೆ ಕರೆತರಲಾಯಿತು.
ಈ ವೇಳೆ ದೇವಾಲಯದ ಹಕ್ಕು ಹೊಂದಿರುವ ವಡ್ಡರಹಳ್ಳಿ, ಗುಡ್ಡೇನಹಳ್ಳಿ, ಸೋಮನಹಳ್ಳಿ, ಅಲ್ಪಹಳ್ಳಿ, ಜೋಡಿಹೊಸೂರು, ಗಂಗನಹಳ್ಳಿ, ಕನಗೋನಹಳ್ಳಿ, ಕುಪ್ಪಹಳ್ಳಿ, ಕೆಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲ 12 ಗ್ರಾಮಗಳಲ್ಲಿ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.ಬಳಿಕ, ತಂಬಿಟ್ಟಿನ ಆರತಿಯೊಂದಿಗೆ ಎಲ್ಲ ದೇವತೆಗಳನ್ನು ಕ್ಷೇತ್ರಕ್ಕೆ ಕರೆತಂದು ದೇವಾಲಯದ ಸುತ್ತ ಪ್ರದಕ್ಷಣೆ ನಡೆಸಿದ ನಂತರ ಸರತಿಯಂತೆ ಆಯಾ ಗ್ರಾಮಗಳ ದೇವಿಯ ಪೂಜೆ ಹೊತ್ತಿದ್ದ ದೇವರ ಗುಡ್ಡಪ್ಪನವರು ಕೊಂಡ ಹಾಯ್ದರು.
ನಂತರ ಕ್ಷೇತ್ರದ ಓಕಳಿ ಮಂಟಪದಲ್ಲಿ ಉತ್ಸವಮೂರ್ತಿ ಮುಂದೆ ನಡೆದ ಅರಿಶಿಣ, ಕುಂಕುಮ ಬೆರೆಸಿದ ಬಣ್ಣದ ನೀರಿನ ಓಕುಳಿಯಾಟ ಮನಮೋಹಕವಾಗಿತ್ತು. ಅಲ್ಪಹಳ್ಳಿ ಗ್ರಾಮದಿಂದ ಆಗಮಿಸಿದ್ದ ಕುರ್ಜುಬಂಡಿ ಉತ್ಸವವು ನೆರೆದಿದ್ದ ಸಹಸ್ರಾರು ಭಕ್ತರ ಗಮನಸೆಳೆಯಿತು.ದೇವಿಗೆ ಹರಕೆ ಹೊತ್ತ ಮಹಿಳೆಯರು ಬಾಯಿಬೀಗದೊಂದಿಗೆ ಪಾಲ್ಗೊಂಡು ತಮ್ಮ ಹರಕೆ ತೀರಿಸಿಕೊಂಡರು. ಕೊಂಡೋತ್ಸವಕ್ಕೆ ಆಗಮಿಸಿದ್ದ ಎಲ್ಲ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ಕೇಸರಿಬಾತ್, ಮೊಸರನ್ನ ಹಾಗೂ ಲಾಡು ವಿತರಣೆ ಮಾಡಲಾಯಿತು.
ಹರಿದುಬಂದ ಭಕ್ತಸಾಗರ:ಮಧ್ಯಾಹ್ನದ ವೇಳೆಯಲ್ಲಿ ನಡೆಯುವ ಸೋಮನಳಮ್ಮದೇವಿಯ ಬಿಸಿಲು ಕೊಂಡೋತ್ಸವವನ್ನು ನೋಡಿ ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯ ಭಕ್ತ ಸಮೂಹವೇ ಸೋಮನಹಳ್ಳಿ ಕ್ಷೇತ್ರಕ್ಕೆ ಹರಿದುಬಂದಿತ್ತು. ಕೊಂಡೋತ್ಸವ ನಡೆಯುತ್ತಿದ್ದ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು.
ತಾತ್ಕಾಲಿಕ ಆರೋಗ್ಯ ಕೇಂದ್ರ:ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಸೋಂಕು ಹರಡಬಾರದೆಂಬ ಉದ್ದೇಶದಿಂದ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಆರೋಗ್ಯ ಹೊರ ಕೇಂದ್ರವನ್ನು ತೆರೆಯಲಾಗಿತ್ತು. ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಆರೋಗ್ಯ ಇಲಾಖೆಯ ಸಿಬ್ಬಂದಿ, ಧ್ವನಿರ್ವರ್ದಕದ ಮೂಲಕ ಪ್ರಚಾರ ನಡೆಸಿದರು.
ಪೊಲೀಸ್ ಬಿಗಿ ಭದ್ರತೆ:ಜಾತ್ರಾ ಮಹೋತ್ಸವದ ಪ್ರಯುಕ್ತ ಸುತ್ತಮುತ್ತಲ 12 ಗ್ರಾಮಗಳಿಂದ ಕೊಂಡೋತ್ಸವ ನಡೆದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರವಿಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಜೇಬುಗಳ್ಳರು ಹಾಗೂ ಸರಗಳ್ಳರ ಬಗ್ಗೆ ಭಕ್ತಾದಿಗಳು ಎಚ್ಚರದಿಂದಿರುವಂತೆ ಪೊಲೀಸ್ ಸಿಬ್ಬಂದಿ ಪ್ರಚಾರ ನಡೆಸುತ್ತಿದ್ದರು.