12 ಹಳ್ಳಿಗಳಲ್ಲಿ ಜೀವಜಲಕ್ಕೆ ಹಾಹಾಕಾರ

| Published : Mar 24 2024, 01:31 AM IST

ಸಾರಾಂಶ

ಕಳೆದ ವರ್ಷವೂ ಜೀವಜಲದ ಸಮಸ್ಯೆಗ ತುತ್ತಾದ ಗ್ರಾಮ ಪಂಚಾಯಿತಿಗಳು ಮತ್ತೆ ಅದೇ ಸಮಸ್ಯೆ ಎದುರಿಸುತ್ತಿವೆ.

ಓರ್ವಲ್‌ ಫರ್ನಾಂಡೀಸ್ಹಳಿಯಾಳ: ತಾಲೂಕಿನ 12 ಗ್ರಾಮ ಪಂಚಾಯಿತಿಗಳಲ್ಲಿ ಜೀವಜಲದ ಸಮಸ್ಯೆ ಎದುರಾಗಿದ್ದು, ತಾಪಂ, ಗ್ರಾಪಂ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯು ಜೀವಜಲದ ಸಮಸ್ಯೆಯನ್ನು ಬಗೆಹರಿಸಲು ತೀವ್ರ ಕಸರತ್ತು ನಡೆಸಿವೆ.

ಈ ಮಧ್ಯೆ ತಾಲೂಕಾಡಳಿತವು ಸಮಸ್ಯೆ ಬಗೆಹರಿಸಲು ಯತ್ನಿಸುವ ಜತೆಗೆ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿರುವುದರಿಂದ ನೀರನ್ನು ಹಿತಮಿತವಾಗಿ ಬಳಸಿ, ಅನಗತ್ಯವಾಗಿ ನೀರು ಪೋಲು ಮಾಡಬೇಡಿ ಎಂಬ ಜಲಜಾಗೃತಿ ಮೂಡಿಸುತ್ತಿದೆ.

ಜೀವಜಲಬಾಧಿತ ಗ್ರಾಮಗಳು: ಕಳೆದ ವರ್ಷವೂ ಜೀವಜಲದ ಸಮಸ್ಯೆಗ ತುತ್ತಾದ ಗ್ರಾಮ ಪಂಚಾಯಿತಿಗಳು ಮತ್ತೆ ಅದೇ ಸಮಸ್ಯೆ ಎದುರಿಸುತ್ತಿವೆ. ತಾಲೂಕಿನ 12 ಗ್ರಾಮ ಪಂಚಾಯಿತಿಗಳಾದ ಚಿಬ್ಬಲಗೇರಿ, ಮದ್ನಳ್ಳಿ, ಅರ್ಲವಾಡ, ಹವಗಿ, ತತ್ವಣಗಿ, ಸಾಂಬ್ರಾಣಿ, ನಾಗಶೆಟ್ಟಿಕೊಪ್ಪ, ಮುರ್ಕವಾಡ, ತಟ್ಟಿಗೆರೆ, ಭಾಗವತಿ, ಬಿ.ಕೆ. ಹಳ್ಳಿ ಮತ್ತು ಗುಂಡೊಳ್ಳಿ ಗ್ರಾಪಂಗಳ 22ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿ ಕಾಡಲಾರಂಭಿಸಿದೆ.

ಹಳಿಯಾಳಕ್ಕೆ ಕೊನೆಯ ಸ್ಥಾನ: ತಾಲೂಕು ಪಂಚಾಯಿತಿ ನೀಡಿದ ಮಾಹಿತಿಯಂತೆ ಜಿಲ್ಲೆಯಲ್ಲಿಯೇ ಅಂತರ್ಜಲ ಮಟ್ಟದ ಪ್ರಮಾಣದಲ್ಲಿ ಹಳಿಯಾಳ ತಾಲೂಕು ಕೊನೆಯ ಸ್ಥಾನದಲ್ಲಿದ್ದು, ತಾಲೂಕಿನಲ್ಲಿ ಅಂತರ್ಜಲ ಪ್ರಮಾಣ ಅತ್ಯಂತ ಕುಸಿದಿದೆ. ಭೂಮಿಯಲ್ಲಿ ನೀರಿನ ಸೆಲೆಗಳು ಬತ್ತಿವೆ. ಅದಕ್ಕಾಗಿ ಹೊಸ ಕೊಳವೆಬಾವಿ ಕೊರೆಯುವ ಬದಲು ನೀರಿನ ಪ್ರಮಾಣ ಹೆಚ್ಚಿರುವ ಕೊಳವೆಬಾವಿಗಳನ್ನು ಆಶ್ರಯಿಸಲು ತಾಲೂಕಾಡಳಿತ ಮುಂದಾಗಿದೆ.

ಜೀವಜಲದ ಸಮಸ್ಯೆ ಯಾಕೆ?: ಮಹತ್ವಾಕಾಂಕ್ಷೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನೂವರೆಗೆ ಪೂರ್ಣಗೊಳ್ಳದೇ ಕುಂಟುತ್ತಾ ಸಾಗಿರುವುದೇ ಗ್ರಾಮೀಣ ಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾಗಲು ಮೂಲ ಕಾರಣವೆಂದು ಹೇಳಲಾಗುತ್ತಿದೆ. 2019ರಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆರಂಭವಾಗಿದೆ. ಸರ್ಕಾರ ನಿಗದಿಪಡಿಸಿದಂತೆ 2021ರ ಸೆಪ್ಟೆಂಬರ್‌ನಲ್ಲಿಯೇ ಯೋಜನೆ ಲೋಕಾರ್ಪಣೆ ಆಗಬೇಕಾಗಿತ್ತು. ಆದರೆ ಕೆಲವು ಆಡಳಿತಾತ್ಮಕ ಕಾರಣಗಳಿಂದ ಮತ್ತು ಲಾಕ್‌ಡೌನ್‌ ಪರಿಣಾಮ ಯೋಜನೆಯು ಮೂರು ವರ್ಷ ವಿಳಂಬವಾಗಿದ್ದು, ಈ ವರ್ಷದ ಡಿಸೆಂಬರ್‌ನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸುವ ಭರವಸೆಯನ್ನು ಯೋಜನಾ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಇಲಾಖೆಯು ನೀಡಿದೆ.

ಕೊಳವೆಬಾವಿಯಿಂದ ಪೂರೈಕೆ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತಾಲೂಕಾಡಳಿತವು ಜಂಟಿಯಾಗಿ ಗ್ರಾಪಂ ಮಟ್ಟದಲ್ಲಿ ಸಭೆ ನಡೆಸುತ್ತಿದೆ. ಹೆಚ್ಚಿನ ನೀರಿನ ಸಾಮರ್ಥ್ಯ ಹೊಂದಿರುವ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ, ಅದರ ಮಾಲೀಕರನ್ನು ಕರೆಯಿಸಿ ಅವರ ಮನವೊಲಿಸಿ ಕೊಳವೆಬಾವಿಯಿಂದ ನೀರು ಪೂರೈಸಲಾರಂಭಿಸಿದ್ದಾರೆ. ಸದ್ಯ ತಾಲೂಕಿನ ಗ್ರಾಮಾತರ ಭಾಗಗಳಲ್ಲಿ 51 ರೈತರ ಹೊಲಗಳಲ್ಲಿರುವ ಕೊಳವೆಬಾವಿಗಳಿಂದ ನೀರನ್ನು ಪೂರೈಸಲಾಗುತ್ತಿದೆ.

ಅಧಿಕಾರಿಗಳ ನೇಮಕ: ತಹಸೀಲ್ದಾರರು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇ ಜತೆ ಕಾಲಕಾಲಕ್ಕೆ ಗ್ರಾಪಂ ಮಟ್ಟದಲ್ಲಿ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು, ವಾಟರ್‌ಮನ್‌ಗಳ ಸಭೆ ನಡೆಸಿ ನೀರಿನ ಸಮಸ್ಯೆಯನ್ನು ನೀಗಿಸಲು ಪ್ರಯತ್ನಿಸುತ್ತಿದ್ದೇವೆ. ನೀರಿನ ಹಿತಮಿತ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ನೀರಿನ ಸಮಸ್ಯೆ ನಿರ್ವಹಣೆಗೆ ಗ್ರಾಪಂ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಾಪಂ ಇಒ ಪರಶುರಾಮ ಘಸ್ತೆ ತಿಳಿಸಿದರು.