ಸಾರಾಂಶ
ಗೃಹಜ್ಯೋತಿ ಸೌಲಭ್ಯಕ್ಕೆ ನೋಂದಣಿ ಮಾಡಿಕೊಳ್ಳದೇ ಇರುವುದಕ್ಕೆ ಕೆಲವು ಕಾರಣಗಳಿವೆ. ಹಲವರು ಊರ ಹೊರಭಾಗದಲ್ಲಿ ಇರುವುದರಿಂದ ಅರ್ಜಿ ಸಲ್ಲಿಸಲು ಬಂದಿಲ್ಲ. ಇದರ ಜತೆಯಲ್ಲಿ ಕೆಲವು ಬಾಡಿಗೆ ಮನೆಗಳವರಿಗೆ ಅವಕಾಶ ಸಿಗದೇ ನೋಂದಾಯಿಸಿಕೊಂಡಿಲ್ಲ ಎನ್ನಲಾಗಿದೆ.
ಮಂಜುನಾಥ ಸಾಯೀಮನೆ
ಶಿರಸಿ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಗೃಹಜ್ಯೋತಿ ಯೋಜನೆ ಚಾಲನೆಗೊಂಡು ಮೂರು ತಿಂಗಳಾದರೂ ತಾಲೂಕಿನಲ್ಲಿ (ಶಿರಸಿ ಹೆಸ್ಕಾಂ ವಿಭಾಗ) ಇನ್ನೂ 12 ಸಾವಿರ ಗ್ರಾಹಕರು ಈ ಉಚಿತ ಸೌಲಭ್ಯಕ್ಕಾಗಿ ಅರ್ಜಿಯನ್ನೇ ಸಲ್ಲಿಸಿಲ್ಲ!
ಸೆಪ್ಟೆಂಬರ್ ಕೊನೆಯವರೆಗಿನ ಅಂಕಿ-ಸಂಖ್ಯೆ ಪ್ರಕಾರ ವಿಭಾಗದ ಶಿರಸಿ, ಸಿದ್ದಾಪುರ, ಮುಂಡಗೋಡ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿ ಒಟ್ಟು ೧೨,೭೧೨ ವಿದ್ಯುತ್ ಗೃಹಬಳಕೆದಾರರು ಗೃಹಜ್ಯೋತಿ ಅರ್ಜಿಯನ್ನೇ ಹಾಕಿಲ್ಲ.ಹೆಸ್ಕಾಂ ವಿಭಾಗದಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಸೇರಿ ೧,೩೪,೫೦೯ ಗೃಹಬಳಕೆ ಮೀಟರ್ ಇದೆ. ಆದರೆ ಇದರಲ್ಲಿ ಗೃಹಬಳಕೆ ವ್ಯಾಪ್ತಿಯಲ್ಲಿದ್ದರೂ ದೇವಸ್ಥಾನ, ಮಸೀದಿ, ಚಚರ್ ಶಾಲೆ, ಕಾಲೇಜು, ಸರ್ಕಾರಿ ಕಚೇರಿ ಸೇರಿ ೨೫೫೯ ಸ್ಥಾವರಗಳಿಗೆ ಗೃಹಜ್ಯೋತಿ ಯೋಜನೆಗೆ ಸೌಲಭ್ಯ ನೀಡುವಂತಿಲ್ಲ. ಇದರ ಜತೆಯಲ್ಲಿ ೧೬೦೬ ಗ್ರಾಹಕರು ೨೦೦ ಯುನಿಟ್ ಬಳಕೆಗೂ ಮೀರಿದ ಗ್ರಾಹಕರಾಗಿದ್ದಾರೆ. ಈ ಎಲ್ಲ ಕಾರಣದಿಂದ ೪೨೦೩ ಮೀಟರ್ ನೋಂದಣಿಗೆ ಆಸಕ್ತಿ ತೋರಿಲ್ಲ.
ಗೃಹಜ್ಯೋತಿ ಸೌಲಭ್ಯಕ್ಕೆ ನೋಂದಣಿ ಮಾಡಿಕೊಳ್ಳದೇ ಇರುವುದಕ್ಕೆ ಕೆಲವು ಕಾರಣಗಳಿವೆ. ಹಲವರು ಊರ ಹೊರಭಾಗದಲ್ಲಿ ಇರುವುದರಿಂದ ಅರ್ಜಿ ಸಲ್ಲಿಸಲು ಬಂದಿಲ್ಲ. ಇದರ ಜತೆಯಲ್ಲಿ ಕೆಲವು ಬಾಡಿಗೆ ಮನೆಗಳವರಿಗೆ ಅವಕಾಶ ಸಿಗದೇ ನೋಂದಾಯಿಸಿಕೊಂಡಿಲ್ಲ ಎನ್ನಲಾಗಿದೆ.ಸೌಲಭ್ಯ ತಿರಸ್ಕರಿಸಿದ ಗ್ರಾಹಕರು:
ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಜುಲೈನಲ್ಲಿ ಗೃಹಜ್ಯೋತಿ ಯೋಜನೆ ಜಾರಿಗೊಳಿಸಿದೆ. ಇದರಲ್ಲಿ 200 ಯುನಿಟ್ ವರೆಗೆ ಎಲ್ಲ ವರ್ಗದವರಿಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ಶಿರಸಿ ಹೆಸ್ಕಾಂ ವಿಭಾಗದ 38 ಗ್ರಾಹಕರು ನಮಗೆ ಸರ್ಕಾರದಿಂದ ಯಾವುದೇ ಉಚಿತ ಯೋಜನೆಗಳು ಬೇಡ. ನಾವು ಬಳಸಿದ ವಿದ್ಯುತ್‌ಗೆ ಬಿಲ್ ಪಾವತಿಸುತ್ತೇವೆ ಎಂದು ಹೇಳಿದ್ದಾರೆ. ಇವರೆಲ್ಲ ಶಿರಸಿ ನಗರ ವ್ಯಾಪ್ತಿಯ ಗ್ರಾಹಕರಾಗಿದ್ದಾರೆ ಎನ್ನುವುದು ವಿಶೇಷ. ಇನ್ನೂ ಕೆಲವರು ತಾಂತ್ರಿಕ ಕಾರಣಗಳಿಂದ ಯೋಜನೆಗೆ ಹೆಸರು ನೋಂದಾಯಿಸದೆ ದೂರ ಉಳಿದಿದ್ದಾರೆ. ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವಂತೆ ಗ್ರಾಹಕರಿಗೆ ಹೇಳಿದ್ದೇವೆ. ಮನೆ-ಮನೆಗೆ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸಿದ್ದೇವೆ ಎಂದು ಶಿರಸಿ ಹೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಟಿ. ಅಪ್ಪಣ್ಣವರ್ ತಿಳಿಸಿದ್ದಾರೆ.