ಸಾರಾಂಶ
ರಿಯಾಜಅಹ್ಮದ ಎಂ ದೊಡ್ಡಮನಿ
ಡಂಬಳ: ಆಹಾರ ಇಲಾಖೆ ಅಧಿಕಾರಿಗಳು ಅನರ್ಹ ಬಿಪಿಎಲ್ ಕಾರ್ಡ್ ಗುರುತಿಸುವ ಪ್ರಕ್ರಿಯೆ ತೀವ್ರಗೊಳಿಸಿದ್ದು, ಮುಂಡರಗಿ ತಾಲೂಕಿನಲ್ಲಿಯೂ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಕಳೆದ ಐದಾರು ತಿಂಗಳಿಂದ ರೇಷನ್ ಪಡೆಯದವರು, ಆದಾಯ ತೆರಿಗೆದಾರರು, ಸಾಲ ಸೌಲಭ್ಯ ಪಡೆದವರು ಸೇರಿದಂತೆ ಸರ್ಕಾರದ ಮಾರ್ಗಸೂಚಿ ಆಧಾರದಲ್ಲಿ ಕಾರ್ಡ್‌ಗಳ ರದ್ಧತಿ ಅಥವಾ ಬದಲಾವಣೆಗೆ ಇಲಾಖೆ ಕಾರ್ಯೋನ್ಮುಖವಾಗಿದೆ.ಮುಂಡರಗಿ ತಾಲೂಕಿನಲ್ಲಿ 5125 ಅಂತ್ಯೋದಯ, 30547 ಬಿಪಿಎಲ್, 2222 ಎಪಿಎಲ್ ಕಾರ್ಡ್‌ಗಳಿವೆ. ವಿವಿಧ ಕಾರಣಗಳಿಗೆ ಅನರ್ಹಗೊಂಡಿರುವ ಸುಮಾರು 1211 ಕುಟುಂಬಗಳನ್ನು ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಗುರುತಿಸಿದ್ದಾರೆ. ಎಚ್‌ಆರ್‌ಎಂಎಸ್ ವ್ಯಾಪ್ತಿಗೆ ಬರುವ 9 ಕುಟುಂಬಗಳು, ತೆರಿಗೆ ಪಾವತಿದಾರರ ವ್ಯಾಪ್ತಿಗೆ ಬರುವ 72 ಕುಟುಂಬಗಳು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆ ಮಾಡಲಾಗುತ್ತಿದೆ. ವಾರ್ಷಿಕ 1.20 ಲಕ್ಷ ಆದಾಯ ಮೀರಿದ ಕುಟುಂಬಗಳನ್ನು ಗುರುತಿಸಲು ಮುಂದಾಗಿದೆ. ಅಲ್ಲದೆ, 6 ತಿಂಗಳಿಂದ ಪಡಿತರ ಪಡೆಯದವರ ಚೀಟಿಗಳನ್ನು ರದ್ದುಗೊಳಿಸಲಾಗಿದೆ.
ಅಧಿಕಾರಿಗಳ ವಿರುದ್ಧ ಆಕ್ರೋಶಸರ್ಕಾರದ ಆದೇಶ ಪಾಲನೆ ಮಾಡುತ್ತಿರುವ ಅಧಿಕಾರಿಗಳಿಗೆ ಹೊಸ ರೀತಿ ಸಂಕಟ ಶುರುವಾಗಿದೆ. ಬಿಪಿಎಲ್‌ನಿಂದ ಏಕಾಏಕಿ ಕುಟುಂಬವನ್ನು ಎಪಿಎಲ್ ವ್ಯಾಪ್ತಿಗೆ ತಂದ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಘರ್ಷಣೆ ಉಂಟಾಗುತ್ತಿದೆ. ಈ ಬಗ್ಗೆ ಮಾಹಿತಿ ಇಲ್ಲದ ಸಾರ್ವಜನಿಕರು ತಾಲೂಕು ಕಚೇರಿ ಸೇರಿದಂತೆ ಜಿಲ್ಲಾಮಟ್ಟದ ಕಚೇರಿಗೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪರಿಶೀಲನೆ
ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಸತತ ಆರು ತಿಂಗಳಿನಿಂದ ರೇಷನ್ ಪಡೆಯದಿರುವ ಸೇರಿ ತಾಲೂಕಿನಲ್ಲಿ 1211 ಅನರ್ಹ ಬಿಪಿಎಲ್ ಕಾರ್ಡ್‌ದಾರರನ್ನು ಗುರುತಿಸಿ ರದ್ದು ಮಾಡಲಾಗಿದೆ. ಕೆಲ ಸಮಸ್ಯೆ ಇರುವ ಕುಟುಂಬಗಳ ಕುರಿತು ಕೂಲಂಕಷವಾಗಿ ಪರಿಶೀಲನೆ ನಡೆಸಿ ಸರಕಾರದ ಮಾರ್ಗಸೂಚಿಯಂತೆ ಮತ್ತೆ ಪ್ರಾರಂಭ ಮಾಡುವಂತಿದ್ದರೆ ಆರಂಭಿಸಲು ಸೂಚಿಸಲಾಗುವುದು.ಪಿ.ಎಸ್. ಎರಿಸ್ವಾಮಿ
ಮುಂಡರಗಿ ತಹಸೀಲ್ದಾರ್