ಸಾರಾಂಶ
ಬೆಂಕಿ ಬಸಣ್ಣ, ನ್ಯೂ ಯಾರ್ಕ್
ನ್ಯೂ ಯಾರ್ಕ್: ಅಮೆರಿಕದ ವರ್ಜೀನಿಯ ರಾಜ್ಯದಲ್ಲಿರುವ ರಿಚ್ಮೊಂಡ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಅದ್ಧೂರಿಯಾಗಿ ಪ್ರಾರಂಭವಾಯಿತು.
ಅಕ್ಕ ಸಂಸ್ಥೆಯ ಅಧ್ಯಕ್ಷ ರವಿ ಬೋರೇಗೌಡ, ಅಕ್ಕ ಸಂಸ್ಥೆಯ ಛೇರ್ಮನ್ ಡಾ.ಅಮರನಾಥ ಗೌಡ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ವಿಧಾನ ಪರಿಷತ್ತಿನ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ, ಥಟ್ ಅಂತ ಹೇಳಿ ಖ್ಯಾತಿಯ ಡಾಕ್ಟರ್ ನಾ.ಸೋಮೇಶ್ವರ ಮುಂತಾದ ಗಣ್ಯರು ದೀಪ ಬೆಳಗಿ ಉದ್ಘಾಟನೆ ಮಾಡಿದರು.
ಅಕ್ಕ ಸಂಸ್ಥೆಯು ಸ್ಥಳೀಯ ರಿಚ್ಮೊಂಡ್ ಕನ್ನಡ ಸಂಘ ಮತ್ತು ವಾಷಿಂಗ್ಟನ್ ಕಾವೇರಿ ಕನ್ನಡ ಸಂಘ ಇವರ ಸಹಯೋಗದಲ್ಲಿ ಈ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸುತ್ತಿದೆ. ಇದರಲ್ಲಿ ದೇಶ ವಿದೇಶಗಳಿಂದ ಆಗಮಿಸಿರುವ ಸುಮಾರು 5000 ಕನ್ನಡಿಗರು ಭಾಗವಹಿಸುತ್ತಿದ್ದಾರೆ.ಇಲ್ಲಿಯ ಸ್ಥಳೀಯ ಕನ್ನಡ ಕಲಾವಿದರು ನಿರ್ಮಿಸಿರುವ ಕನ್ನಡ ಭುವನೇಶ್ವರಿಯ ತ್ರೀಡಿ ಮೂರ್ತಿ, ಮೈಸೂರು ಅರಮನೆ, ಚನ್ನಕೇಶವ ದೇವಸ್ಥಾನದ ಪ್ರತಿಕೃತಿಗಳು (ಟ್ಯಾಬ್ಲೋಗಳು) ಎಲ್ಲರನ್ನೂ ಆಕರ್ಷಿಸಿದವು.
ಸ್ಥಳೀಯ ಕನ್ನಡ ಸಂಘಗಳು ನಡೆಸಿಕೊಟ್ಟ ಸ್ವಾಗತ ನೃತ್ಯ, ಹುಲಿ ಕುಣಿತ, ಕಾಂತಾರ ಯಕ್ಷಗಾನ ಕುಣಿತಗಳು ಪ್ರೇಕ್ಷಕರ ಮನಸೂರೆಗೊಂಡವು. ಸಂಗೀತ ಸಂಜೆ ಪ್ರೈಮ್ ಟೈಮ್ ಶೋನಲ್ಲಿ ನವೀನ್ ಸಜ್ಜು ಅವರ ತಂಡ ಕಾರ್ಯಕ್ರಮ ನೀಡಿತು.