ಸಾರಾಂಶ
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಸೋಮವಾರ ಮಹತ್ವದ ಬೆಳವಣಿಗೆಗಳು ನಡೆದಿವೆ. ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಲಿನ ಪ್ರದೇಶಗಳಲ್ಲಿ ಅನಾಮಿಕ ವ್ಯಕ್ತಿ ತಾನು ಮೃತದೇಹಗಳನ್ನು ಹೂತು ಹಾಕಿರುವ 13 ಸ್ಥಳಗಳನ್ನು ಗುರುತಿಸಿದ್ದಾನೆ.
ಪೊಲೀಸರು ಈ 13 ಸ್ಥಳಗಳಲ್ಲಿಯೂ ಇದೀಗ ನಂಬರ್ ನೀಡಿ ಗುರುತಿಸಿದ್ದಾರೆ. ಇಲ್ಲಿ ಸುತ್ತ ಟೇಪ್ ಕಟ್ಟಲಾಗಿದ್ದು, ಈ ಸ್ಥಳಗಳಲ್ಲಿ ರಾತ್ರಿ ಪೊಲೀಸ್ ಗಸ್ತನ್ನು ಏರ್ಪಡಿಸಲಾಗಿದೆ.
ಎಲ್ಲೆಲ್ಲಿ ಸ್ಥಳ ಗುರುತು?: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಪರಿಸರದಲ್ಲಿಯೇ ಈ 13 ಸ್ಥಳಗಳನ್ನು ಆತ ಗುರುತಿಸಿದ್ದಾನೆ. ಸ್ನಾನಘಟ್ಟದ ಒಳಗೆ ನದಿ ಬದಿಯಲ್ಲಿ ಮೊದಲ ಸ್ಥಳವನ್ನು ಆತ ಗುರುತಿಸಿದ್ದಾನೆ. ಅಲ್ಲಿಂದ ಮುಂದೆ ಅರಣ್ಯದೊಳಗೆ ಆತನೊಂದಿಗೆ ಎಸ್‌ಐಟಿ ತಂಡದವರು ತೆರಳಿದ್ದು, ಅಲ್ಲಿ ಆತ ಎಂಟು ಸ್ಥಳಗಳನ್ನು ಗುರುತಿಸಿದ್ದಾನೆ. ಈ ಎಲ್ಲ ಸ್ಥಳಗಳ ಸುತ್ತ ಟೇಪ್ ಕಟ್ಟಲಾಗಿದೆ.ಇದಾದ ಬಳಿಕ ನೇತ್ರಾವತಿ ಸ್ನಾನಘಟ್ಟದಿಂದ ನೂರು ಮೀಟರ್ ಮುಂದೆ ಧರ್ಮಸ್ಥಳ ಉಜಿರೆ ರಸ್ತೆಯ ಬದಿಯಲ್ಲಿ ಹೆದ್ದಾರಿಯಿಂದ ಎರಡು ಮೂರು ಮೀಟರ್ ದೂರದಲ್ಲಿ ಈತ ಮೂರು ಸ್ಥಳಗಳನ್ನು ಗುರುತಿಸಿದ್ದಾನೆ.
ಮುಂದೆ ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿಗೆ ಹೋಗುವ ರಸ್ತೆಯ ಬದಿಯಲ್ಲಿ ಕಿಂಡಿ ಅಣೆಕಟ್ಟಿಗೆ ತಾಗಿಕೊಂಡಿರುವ ಪ್ರದೇಶದಲ್ಲಿ ಈ ಮತ್ತೊಂದು ಸ್ಥಳವನ್ನು ಗುರುತಿಸಿದ್ದಾನೆ. ಇಲ್ಲಿ ದೊಡ್ಡದಾದ ಸ್ಥಳದ ಸುತ್ತ ಮಾರ್ಕ್ ಮಾಡಲಾಗಿದೆ.ಇದಾದ ಬಳಿಕ ಸಾಕ್ಷಿ ದೂರುದಾರ ಎಸ್‌ಐಟಿ ತಂಡವನ್ನು ಧರ್ಮಸ್ಥಳ ಕನ್ಯಾಡಿಯ ಒಳಪ್ರದೇಶದಲ್ಲಿ ಖಾಸಗಿ ಜಾಗವೊಂದಕ್ಕೆ ಕರೆದೊಯ್ದಿದ್ದು, ಅಲ್ಲಿ ಸ್ಥಳವೊಂದನ್ನು ತೋರಿಸಿದ್ದಾನೆ. ಈ ವೇಳೆಗೆ ಸಂಜೆಯಾಗಿದ್ದು ಮಳೆಯೂ ಬಂದ ಕಾರಣ ಇಲ್ಲಿ ಸ್ಥಳವನ್ನು ಗುರುತಿಸುವ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಅಲ್ಲಿಂದ ಎಸ್‌ಐಟಿ ತಂಡ ಇಂದಿನ ಕಾರ್ಯಾಚರಣೆಯನ್ನು ನಿಲ್ಲಿಸಿ ಬೆಳ್ತಂಗಡಿಯ ಕಚೇರಿಗೆ ಹಿಂತಿರುಗಿದ್ದಾರೆ.ಎಸ್‌ಐಟಿ ತಂಡ ಬೆಳಗ್ಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದು, 9 ಗಂಟೆಯ ಸುಮಾರಿಗೆ ಎಸ್.ಪಿ ಅನುಚೇತ್ ನೇತೃತ್ವ ತಂಡ ಬೆಳ್ತಂಗಡಿ ಕಚೇರಿಗೆ ಬಂದಿದೆ. ಅಲ್ಲಿ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಇದಾದ ಬಳಿಕ 11ರ ಸುಮಾರಿಗೆ ಸಾಕ್ಷಿ ದೂರುದಾರ ಎಸ್‌ಐಟಿ ಕಚೇರಿಗೆ ವಕೀಲರೊಂದಿಗೆ ಆಗಮಿಸಿದ್ದಾನೆ. ಸುಮಾರು 1 ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳು ಆತನಿಂದ ಮಾಹಿತಿ ಪಡೆದಿದ್ದಾರೆ.
ಬಳಿಕ ಮಧ್ಯಾಹ್ನ ೧ರ ಸುಮಾರಿಗೆ ಎಸ್‌ಐಟಿ ತಂಡದವರು ನೇತ್ರಾವತಿ ಸ್ನಾನಘಟ್ಟದ ಬಳಿಗೆ ಬಂದಿದ್ದಾರೆ. ಅಲ್ಲಿಂದ ಮೂರು ಗಂಟೆ ವರೆಗೆ ನಿರಂತರವಾಗಿ ಕಾರ್ಯಾಚರಣೆ ನಡೆದಿದೆ. ೩ ಗಂಟೆಗೆ ಧರ್ಮಸ್ಥಳ ಠಾಣೆಗೆ ಊಟಕ್ಕೆ ತೆರಳಿದ್ದು, ಬಳಿಕ ೪ ಗಂಟೆಯ ಸುಮಾರಿಗೆ ಕಾರ್ಯಾಚರಣೆ ಆರಂಭವಾಗಿ ಆರು ಗಂಟೆ ವರೆಗೂ ಮುಂದುವರಿದಿದೆ.
ಮಂಗಳವಾರವೂ ಸ್ಥಳ ಗುರುತಿಸುವ ಕಾರ್ಯ ಮುಂದುವರಿಯಲಿದೆ.ಇಂದು ಸುಮಾರು 13 ಸ್ಥಳಗಳನ್ನು ಸಾಕ್ಷಿ ದೂರುದಾರ ಗುರುತಿಸಿದ್ದಾನೆ. ರಾತ್ರಿ ಕಾರ್ಯಾಚರಣೆ ಮಾಡುವಂತಿಲ್ಲ. ಭಾರಿ ಮಳೆಯೂ ಇರುವ ಕಾರಣ ಇಂದಿನ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಮಂಗಳವಾರ ಬೆಳಗ್ಗಿನಿಂದಲೇ ಸ್ಥಳಗಳನ್ನು ಗುರುತಿಸುವ ಕಾರ್ಯವನ್ನು ಪುನರಾರಂಭಿಸಲಾಗುವುದು. ಬಳಿಕ ಮುಂದಿನ ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.