ಧರ್ಮಸ್ಥಳ ಗ್ರಾಮದಲ್ಲಿ ಎಸ್‌ಐಟಿ ತನಿಖೆ ಚುರುಕು

| Published : Jul 28 2025, 12:31 AM IST

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಅನಾಮಿಕ ವ್ಯಕ್ತಿಯನ್ನು ಎರಡನೇ ದಿನವಾದ ಭಾನುವಾರವೂ ವಿಶೇಷ ತನಿಖಾ ತಂಡ ಮಂಗಳೂರಿನ ಕಚೇರಿಯಲ್ಲಿ ವಿಚಾರಣೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಅನಾಮಿಕ ವ್ಯಕ್ತಿಯನ್ನು ಎರಡನೇ ದಿನವಾದ ಭಾನುವಾರವೂ ವಿಶೇಷ ತನಿಖಾ ತಂಡ ಮಂಗಳೂರಿನ ಕಚೇರಿಯಲ್ಲಿ ವಿಚಾರಣೆ ನಡೆಸಿದೆ. ಎಸ್‌ಐಟಿ ಮುಖ್ಯಸ್ಥ, ಡಿಜಿಪಿ ಪ್ರಣವ್‌ ಮೊಹಾಂತಿ ಭಾನುವಾರ ಮಂಗಳೂರಿಗೆ ಆಗಮಿಸಿದ್ದು, ಮಲ್ಲಿಕಟ್ಟೆಯ ಎಸ್ಐಟಿ ಕಚೇರಿಯಲ್ಲಿ ಸತತ 6 ತಾಸು ಅನಾಮಿಕ ವ್ಯಕ್ತಿಯ ವಿಚಾರಣೆ ನಡೆಸಿದರು.

ಶನಿವಾರ ಇಡೀ ದಿನ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಭಾನುವಾರವೂ ಅನಾಮಿಕನ ವಿಚಾರಣೆಯನ್ನು ಎಸ್‌ಐಟಿ ತಂಡ ಮುಂದುವರಿಸಿತು. ಡಿಜಿಪಿ ಪ್ರಣವ್‌ ಮೊಹಾಂತಿ ನೇತೃತ್ವದಲ್ಲಿ, ಡಿಐಜಿ ಅನುಚೇತ್, ಎಸ್ಪಿ ಜೀತೇಂದ್ರ ದಯಾಮ ಇವರ ಸಮ್ಮುಖದಲ್ಲಿ ಅನಾಮಿಕ ವ್ಯಕ್ತಿಯ ಹೇಳಿಕೆಗಳನ್ನು ದಾಖಲಿಸಲಾಯಿತು.

ಅನಾಮಿಕ ವ್ಯಕ್ತಿಯನ್ನು ಮೂವರು ವಕೀಲರು ಖಾಸಗಿ ಕಾರಿನಲ್ಲಿ ಮಂಗಳೂರಿನ ಎಸ್‌ಐಟಿ ಕಚೇರಿಗೆ ಬೆಳಗ್ಗೆ 10.30ಕ್ಕೆ ಕರೆ ತಂದರು. ಆತನನ್ನು ಕಪ್ಪುಬಣ್ಣದ ಮುಸುಕಿನಲ್ಲಿಯೇ ಕರೆ ತಂದು ಎಸ್‌ಐಟಿ ಕಚೇರಿಯಲ್ಲಿರುವ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮುಂದೆ ಹಾಜರುಪಡಿಸಲಾಯಿತು. ಸಂಜೆ 4.30ರವರೆಗೆ ಆತನ ವಿಚಾರಣೆ ನಡೆಯಿತು.ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಾಂತಿ ಅವರು ಮಂಗಳೂರಿನಲ್ಲಿ ತನಿಖೆ ನಡೆಸಿದ ಬಳಿಕ ಸಂಜೆ ವೇಳೆಗೆ ನೇರವಾಗಿ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ತೆರಳಿದರು. ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತಿದ್ದೇನೆ ಎಂದು ಆರೋಪಿಸಿರುವ ಅನಾಮಿಕನ ದೂರಿನ ಹಿನ್ನೆಲೆಯಲ್ಲಿ ಪ್ರಣವ್ ಮೊಹಂತಿಯವರ ಬೆಳ್ತಂಗಡಿ ಠಾಣಾ ಭೇಟಿ ನಡೆದಿದೆ.