ಶನಿವಾರಸಂತೆ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ ಉದ್ಘಾಟನೆ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಅರಕಲಗೂಡು ಅನಕೃ ವೃತ್ತದಲ್ಲಿ ಶಾಸಕ ಎ. ಮಂಜು ಅವರೊಂದಿಗೆ ಹಳೆಯ ಬಸ್ ನಿಲ್ದಾಣವನ್ನು ಪರಿಶೀಲಿಸಿದ ಸಚಿವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹಳೆಯ ಬಸ್ ನಿಲ್ದಾಣವು ಸುಮಾರು 0.75 ಎಕರೆ ವಿಸ್ತೀರ್ಣ ಹೊಂದಿದ್ದು, ಬಸ್ ನಿಲ್ದಾಣದ ಕಾರ್ಯಾಚರಣೆಗೆ ಸಹಕಾರಿಯಾಗುವಂತೆ ಶಾಸಕ ಎ. ಮಂಜು ತಮ್ಮದೇ 1 ಎಕರೆ ಜಮೀನನ್ನು ಸೇರಿಸಲಾಗಿದೆ ಎಂದು ವಿವರಿಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಪಟ್ಟಣದ ಹಳೆಯ ಬಸ್ ನಿಲ್ದಾಣದ ಜಾಗವನ್ನು ಪಟ್ಟಣ ಪಂಚಾಯಿತಿಗೆ ವರ್ಗಾವಣೆ ಮಾಡುವಂತೆ ಶಾಸಕ ಎ. ಮಂಜು ಮನವಿ ಮಾಡಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.ಶನಿವಾರಸಂತೆ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ ಉದ್ಘಾಟನೆ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಅರಕಲಗೂಡು ಅನಕೃ ವೃತ್ತದಲ್ಲಿ ಶಾಸಕ ಎ. ಮಂಜು ಅವರೊಂದಿಗೆ ಹಳೆಯ ಬಸ್ ನಿಲ್ದಾಣವನ್ನು ಪರಿಶೀಲಿಸಿದ ಸಚಿವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹಳೆಯ ಬಸ್ ನಿಲ್ದಾಣವು ಸುಮಾರು 0.75 ಎಕರೆ ವಿಸ್ತೀರ್ಣ ಹೊಂದಿದ್ದು, ಬಸ್ ನಿಲ್ದಾಣದ ಕಾರ್ಯಾಚರಣೆಗೆ ಸಹಕಾರಿಯಾಗುವಂತೆ ಶಾಸಕ ಎ. ಮಂಜು ತಮ್ಮದೇ 1 ಎಕರೆ ಜಮೀನನ್ನು ಸೇರಿಸಲಾಗಿದೆ ಎಂದು ವಿವರಿಸಿದರು. ಈಗ ಹೊಸ ಬಸ್ ನಿಲ್ದಾಣ ಹಾಗೂ ಎರಡು ಡಿಪೋಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ಹಳೆಯ ಜಾಗವು ಕೆಎಸ್‌ಆರ್‌ಟಿಸಿಗೆ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.ಸ್ಥಳೀಯ ಪಟ್ಟಣ ಪಂಚಾಯತಿ ಈ ಜಾಗವನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಜಾಗವನ್ನು ಹೆಚ್ಚುವರಿ ಎಂದು ಪರಿಗಣಿಸಿದರೆ, ಮಂಡಳಿ ಮೂಲಕ ಪ್ರಸ್ತಾವನೆ ಸಲ್ಲಿಸಿ ಸಚಿವ ಸಂಪುಟದ ಅನುಮೋದನೆ ಪಡೆದು ಅಧಿಕೃತವಾಗಿ ಪುರಸಭೆಗೆ ವರ್ಗಾವಣೆ ಮಾಡುವ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.ವಿದ್ಯಾರ್ಥಿಗಳಿಗೆ ಬಸ್ ಕೊರತೆ:

ಶಾಲೆ ಮತ್ತು ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ಬಸ್ ಕೊರತೆಯಿಂದ ತೊಂದರೆ ಅನುಭವಿಸುತ್ತಿರುವುದನ್ನು ಈ ವೇಳೆ ಪ್ರಸ್ತಾಪಿಸಲಾಯಿತು. ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ವಿವಿಧ ಮಾರ್ಗಗಳಲ್ಲಿ ಸಂಚರಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಯಾವ ಮಾರ್ಗಗಳಲ್ಲಿ ಹೆಚ್ಚು ಸಮಸ್ಯೆ ಇದೆ ಎಂಬ ವಿವರಗಳನ್ನು ನೀಡಿದರೆ, ಅಗತ್ಯವಿದ್ದಲ್ಲಿ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸುವುದಾಗಿ ಶಾಸಕ ಎ. ಮಂಜು ಭರವಸೆ ನೀಡಿದರು.ಭದ್ರತಾ ಕ್ರಮಗಳ ಚರ್ಚೆ:

ಸಾರಿಗೆ ಕೇಂದ್ರಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಚರ್ಚೆಯಾಯಿತು. ಕೆಎಸ್‌ಆರ್‌ಟಿಸಿ ಭದ್ರತಾ ಸಿಬ್ಬಂದಿಯ ಜೊತೆಗೆ ಸ್ಥಳೀಯ ಪೊಲೀಸರ ಹಾಜರಾತಿಯನ್ನು ಹೆಚ್ಚಿಸಲು ಸಲಹೆ ನೀಡಲಾಯಿತು. ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜು ಶೆಟ್ಟಿಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನರಸೇಗೌಡ, ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜ್, ಮಾಜಿ ಸದಸ್ಯರಾದ ಕೃಷ್ಣಯ್ಯ, ಮಂಜು ಹಾಗೂ ಹಲವರು ಹಾಜರಿದ್ದರು.