ಸಾರಾಂಶ
ಹಾಸ್ಟೆಲ್ ಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಪೊಲೀಸರು, 11 ಹಾಸ್ಟೆಲ್ ಗಳಲ್ಲಿ ತಪಾಸಣಾ ಕಾರ್ಯ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ನಗರ ಪೊಲೀಸರು, 12 ಮಂದಿ ಮಾದಕ ವಸ್ತು ವ್ಯಸನಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಬುಧವಾರ ರಾತ್ರಿ ಉದಯಗಿರಿ, ಎನ್.ಆರ್. ಮೊಹಲ್ಲಾ ಸೇರಿದಂತೆ ಹಲವೆಡೆ 130 ಮಂದಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಒಬ್ಬನನ್ನು ಬಂಧಿಸಲಾಗಿದ್ದು, ಆತನಿಂದ 860 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ, ಹಾಸ್ಟೆಲ್ ಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಪೊಲೀಸರು, 11 ಹಾಸ್ಟೆಲ್ ಗಳಲ್ಲಿ ತಪಾಸಣಾ ಕಾರ್ಯ ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್, ಎಸಿಪಿಗಳು, ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.ಎಂಡಿಎಂಎ ಮಾದಕ ವಸ್ತು ಮಾರಾಟ: ಆರೋಪಿ ಬಂಧನ
ಇನ್ನೂ ನಜರ್ ಬಾದ್ ಪೊಲೀಸ್ ಠಾಣೆ ಸನಿಹದಲ್ಲೇ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕಿರಾಣಿ ಅಂಗಡಿ ಮಾಲೀಕನನ್ನು ಸಿಸಿಬಿ ಪೊಲೀಸರು ಬಂಧಿಸಿ. 65 ಗ್ರಾಂ ತೂಕದ ಎಂಡಿಎಂಎ ವಶಪಡಿಪಡಿಸಿಕೊಂಡಿದ್ದಾರೆ. ಕಿರಾಣಿ ಅಂಗಡಿ ಮಾಲೀಕ ಸೋಯಲ್ ಜೈನ್ ಬಂಧಿತನಾಗಿದ್ದು, ಮತ್ತೊಬ್ಬ ಆರೋಪಿ ಬಬೀಲ್ ಎಂಬಾತ ಪರಾರಿಯಾಗಿದ್ದಾನೆ. ಕೇರಳದಿಂದ ಮಾದಕ ವಸ್ತು ಮಾರಾಟ ತಂದು ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಅಕ್ವೇರಿಯಂನಲ್ಲಿ ಇರಿಸಿದ್ದ 65 ಗ್ರಾಂ ತೂಕದ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.