ಹೊಸಪೇಟೆ: ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಕಳೆದ 10-15 ದಿನಗಳಿಂದ ಹಂಪಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿರುವ ಪೌರ ಕಾರ್ಮಿಕರು ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ 134 ಜನ ಪೌರ ಕಾರ್ಮಿಕರಿಗೆ ಹಂಪಿ ಬೈ ಸ್ಕೈನಲ್ಲಿ ಹೆಲಿಕಾಪ್ಟರ್‌ನಲ್ಲಿ ಹಂಪಿ ವೀಕ್ಷಿಸುವಂತಹ ಅವಕಾಶ ಕಲ್ಪಿಸಲಾಗಿತ್ತು.
134 ಜನ ನಿರಂತರ ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯ ನಡೆಸಿದ್ದರಿಂದ ಸ್ಥಳೀಯ ಶಾಸಕ ಎಚ್.ಆರ್. ಗವಿಯಪ್ಪ ಅವರು ಪೌರ ಕಾರ್ಮಿಕರು ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿ, ಹಂಪಿಯ ಸ್ಮಾರಕಗಳನ್ನು ನೋಡಲು ವೈಯಕ್ತಿಕವಾಗಿ ಪೌರಕಾರ್ಮಿಕರಿಗಾಗಿ ಒಂದು ಲಕ್ಷ ಧನಸಹಾಯ ಮಾಡಿದ್ದಾರೆ. ಉಳಿದ ಹಣವನ್ನು ಜಿಲ್ಲಾಡಳಿತ ನೀಡಿ 134 ಜನ ಪೌರ ಕಾರ್ಮಿಕರಿಗೆ ಹೆಲಿಕಾಪ್ಟರ್ ಹತ್ತಿಸಿ, ಹಂಪಿಯ ಸ್ಮಾರಕಗಳನ್ನು ಆಕಾಶದಿಂದ ನೋಡುವಂತಹ ಭಾಗ್ಯ ಒದಗಿಸಿಕೊಟ್ಟಿದೆ.ಹಂಪಿ, ಕಮಲಾಪುರ, ಹೊಸಪೇಟೆ, ಮರಿಯಮ್ಮನಹಳ್ಳಿ, ಕೂಡ್ಲಿಗಿ, ಹಡಗಲಿ, ಹರಪನಹಳ್ಳಿ ಸೇರಿದಂತೆ ಇತರೆ ಗ್ರಾಮ ಪಂಚಾಯಿತಿಗಳ ಪೌರ ಕಾರ್ಮಿಕರನ್ನು ಹಂಪಿ ಉತ್ಸವದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಹಂಪಿ ಉತ್ಸವ ಮುಗಿದ ಬಳಿಕ ಸೋಮವಾರ 134 ಪೌರ ಕಾರ್ಮಿಕರಿಗೆ ಹೆಲಿಕಾಪ್ಟರ್‌ನಲ್ಲಿ ಸಂಚರಿಸಿ ಆಗಸದಿಂದಲೇ ಹಂಪಿಯ ಸ್ಮಾರಕಗಳನ್ನು ನೋಡುವಂತಹ ಅವಕಾಶವನ್ನು ಸ್ಥಳೀಯ ಶಾಸಕ ಎಚ್.ಆರ್. ಗವಿಯಪ್ಪ ಮತ್ತು ಜಿಲ್ಲಾಡಳಿತ ವ್ಯವಸ್ಥೆಗೊಳಿಸಿದ್ದರಿಂದ ಪೌರ ಕಾರ್ಮಿಕರು ಸಂತಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಎಲ್ಲ ಪೌರ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.