ಸ್ವಚ್ಛತೆಯೇ ಸೇವೆ, ಸ್ವಚ್ಛತೆಯಲ್ಲೇ ಪಾವಿತ್ರ್ಯ ಎಂಬ ಸಂದೇಶ ಸಾರುತ್ತಾ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯಾದ್ಯಂತ 14,590 ಶ್ರದ್ಧಾಕೇಂದ್ರಗಳಲ್ಲಿ ಸ್ವಚ್ಛತಾ ಸಪ್ತಾಹವನ್ನು ಯಶಸ್ವಿಯಾಗಿ ನಡೆಸಲಾಯಿತು.
ಬೆಳ್ತಂಗಡಿ: ಸ್ವಚ್ಛತೆಯೇ ಸೇವೆ, ಸ್ವಚ್ಛತೆಯಲ್ಲೇ ಪಾವಿತ್ರ್ಯ ಎಂಬ ಸಂದೇಶ ಸಾರುತ್ತಾ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯಾದ್ಯಂತ 14,590 ಶ್ರದ್ಧಾಕೇಂದ್ರಗಳಲ್ಲಿ ಸ್ವಚ್ಛತಾ ಸಪ್ತಾಹವನ್ನು ಯಶಸ್ವಿಯಾಗಿ ನಡೆಸಲಾಯಿತು.ಶ್ರೀಕ್ಷೇತ್ರ ಧರ್ಮಸ್ಥಳ ಚತುರ್ವಿಧ ದಾನಗಳ ಪರಂಪರೆಯೊಂದಿಗೆ ಸ್ವಚ್ಛತೆಗೂ ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ಸ್ವಚ್ಛ ಧಾರ್ಮಿಕ ಕ್ಷೇತ್ರವಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಧರ್ಮಸ್ಥಳದ ಸ್ವಚ್ಛತಾ ಪರಿಕಲ್ಪನೆಯನ್ನು ರಾಜ್ಯದ ಶ್ರದ್ಧಾಕೇಂದ್ರಗಳಿಗೂ ವಿಸ್ತರಿಸುವ ಉದ್ದೇಶದಿಂದ ‘ನಮ್ಮೂರು ನಮ್ಮ ಶ್ರದ್ಧಾ ಕೇಂದ್ರ’ ವಿನೂತನ ಕಾರ್ಯಕ್ರಮವನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಯೋಜಿಸಿದ್ದಾರೆ.ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜನರಲ್ಲಿ ತಮ್ಮೂರಿನ ಶ್ರದ್ಧಾಕೇಂದ್ರಗಳ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬ ಅರಿವು ಮೂಡಿಸಲಾಗುತ್ತಿದೆ. 2016 ರಿಂದ ನಿರಂತರ ನಡೆಯುತ್ತಿರುವ ಈ ಅಭಿಯಾನದಲ್ಲಿ ಸ್ವಸಹಾಯ ಸಂಘಗಳ ಸದಸ್ಯರು, ಸಂಘ-ಸಂಸ್ಥೆಗಳ ಕಾರ್ಯಕರ್ತರು ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳುತ್ತಿದ್ದಾರೆ.ಈ ಬಾರಿ 80ನೇ ಸ್ವಾತಂತ್ರೋತ್ಸವದ ಅಂಗವಾಗಿ ಆ.7ರಿಂದ 14ರವರೆಗೆ ರಾಜ್ಯಾದ್ಯಂತ ಸ್ವಚ್ಛತಾ ಸಪ್ತಾಹ ಹಮ್ಮಿಕೊಂಡಿದ್ದು, ಒಟ್ಟು 14,590 ಶ್ರದ್ಧಾಕೇಂದ್ರಗಳನ್ನು ಗುರುತಿಸಿ, ಸುಮಾರು 3,46,547 ಸ್ವಯಂಸೇವಕರು ಅಭಿಯಾನದಲ್ಲಿ ಪಾಲ್ಗೊಂಡರು. ದೇವಾಲಯದ ಆಡಳಿತ ಮಂಡಳಿ, ಊರಿನ ಗಣ್ಯರು, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಗ್ರಾಪಂ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು. ಸ್ವಚ್ಛತಾ ಸೇನಾನಿಗಳು, ಸಂಘ ಸಂಸ್ಥೆಗಳ ಕಾರ್ಯಕರ್ತರು ಕೈಜೋಡಿಸಿದರು.ಅಭಿಯಾನದಡಿ 13,638 ದೇವಸ್ಥಾನಗಳು, 40 ಬಸದಿ, 324 ಮಸೀದಿ, 182 ಚರ್ಚ್‌ಗಳು ಹಾಗೂ 406 ಇತರ ಸಾರ್ವಜನಿಕ ಸ್ಥಳಗಳು, ಶಾಲೆಗಳು ನಿಲಾ ಮತ್ತು ಅಂಗನವಾಡಿ ಕೇಂದ್ರಗಳು ಸೇರಿದಂತೆ ಕೇಲ ಒಟ್ಟು 14,590 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಜಾಗೃತಿ ಫಲಕ ಅಳವಡಿಕೆ: ಶ್ರದ್ಧಾ ಕೇಂದ್ರಗಳ ಸುತ್ತಮುತ್ತಲಿನ ಗಿಡಗಂಟೆ ತೆರವುಗೊಳಿಸಿ, ಆವರಣ ಹಾಗೂ ಒಳಾಂಗಣ ಸ್ವಚ್ಛಗೊಳಿಸಲಾಯಿತು. ಕಲ್ಯಾಣಿ, ಸಭಾಭವನ, ಅಶ್ವತ್ಥ ಕಟ್ಟೆ, ಅರಳಿ ಕಟ್ಟಿ ಹಾಗೂ ಧಾರ್ಮಿಕ ಕೇಂದ್ರಗಳ ಪರಿಕರಗಳನ್ನು ಶುಚಿಗೊಳಿಸಲಾಯಿತು. ಸಾರ್ವಜನಿಕ ಶೌಚಾಲಯ, ಬೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತೆಗೂ ಆದ್ಯತೆ ನೀಡಲಾಯಿತು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ಡಸ್ಟ್ ಬಿನ್ ಅಳವಡಿಸಿ, ಭಕ್ತಾದಿಗಳಿಗೆ ಜಾಗೃತಿ ಮೂಡಿಸುವ ಫಲಕಗಳನ್ನು ಹಾಕಲಾಯಿತು.ರಾಜ್ಯಾದ್ಯಂತ ಈವರೆಗೆ 2,16,666 ಸ್ವಚ್ಛತಾ ಕಾರ್ಯಕ್ರಮಗಳು ನಡೆದಿದ್ದು, 65,95,912 ಸ್ವಯಂಸೇವಕರು ಪಾಲ್ಗೊಂಡಿದ್ದಾರೆ. -ಅನಿಲ್ ಕುಮಾರ್ ಎಸ್.ಎಸ್. ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ, ಧ.ಗ್ರಾ. ಯೋಜನೆ