೭೧ ಸಾವಿರ ರೈತರಿಗೆ ೧೪ ಕೋಟಿ ರು. ಬೆಳೆ ಪರಿಹಾರ: ಜಿಲ್ಲಾಧಿಕಾರಿ ಡಾ.ಕುಮಾರ

| Published : Apr 30 2024, 02:06 AM IST

೭೧ ಸಾವಿರ ರೈತರಿಗೆ ೧೪ ಕೋಟಿ ರು. ಬೆಳೆ ಪರಿಹಾರ: ಜಿಲ್ಲಾಧಿಕಾರಿ ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಬರ ಪರಿಸ್ಥಿತಿಯಿಂದ ಭೂಮಿ ಬಾಯಿಬಿಟ್ಟಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ, ನಾಲೆ ಗಳಿಗೆ ನೀರು ಹರಿಸಿ ಎಂದು ಒತ್ತಡ ಮಾಡುತ್ತಿದ್ದರೂ ಸರ್ಕಾರ ಮೌನ ವಹಿಸಿದೆ, ಚಿಕ್ಕದೇವರಾಯ ನಾಲೆ, ರಾಮಸ್ವಾಮಿ ನಾಲೆಗೆ ನೀರು ನೀರು ಹರಿಸಿದ್ದರೂ ಯಾವುದೇ ಮಾಹಿತಿ ಇಲ್ಲ. ವಿಶ್ವೇಶ್ವರಯ್ಯ ನಾಲೆಗೆ ತಕ್ಷಣದಿಂದಲೇ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ೭೧,೦೦೦ ರೈತರಿಗೆ ೧೪ ಕೋಟಿ ಬೆಳೆ ನಷ್ಟ ಪರಿಹಾರ ಪಾವತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರೆ, ಬೆಳೆ ಪರಿಹಾರ ತಲುಪಿರುವ ಖಾತ್ರಿಯೇ ರೈತರಿಂದ ಸಿಗುತ್ತಿಲ್ಲ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಅವರನ್ನು ಭೇಟಿಯಾದ ರೈತ ಮುಖಂಡರು ಬೆಳೆ ಪರಿಹಾರ, ಕುಡಿಯುವ ನೀರಿನ ಅಭಾವ, ಮೈಷುಗರ್ ಕಾರ್ಖಾನೆ ಆರಂಭ, ನಾಲೆಗಳಿಗೆ ನೀರು ಹರಿಸುವುದೂ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು.

ಮಳೆ ಅಭಾವದಿಂದ ಬೆಳೆ ನಷ್ಟಕ್ಕೀಡಾದ ರೈತರಿಗೆ ಸರ್ಕಾರ ಬೆಳೆ ಪರಿಹಾರ ಪಾವತಿ ಮಾಡಿದೆ ಎಂದು ಹೇಳುತ್ತಿದ್ದರೂ ರೈತರಿಗೆ ತಲುಪಿರುವ ಬಗ್ಗೆ ಖಾತ್ರಿ ಸಿಗುತ್ತಿಲ್ಲ ಎಂದು ಜಿಲ್ಲಾಧಿಕಾರಿಯವರಿಗೆ ತಿಳಿಸಿದಾಗ, ೭೧ ಸಾವಿರ ರೈತರಿಗೆ ೧೪ ಕೋಟಿ ರು. ಹಣವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ. ಅದರ ತಾಲೂಕುವಾರು ದಾಖಲೆಗಳನ್ನು ನೀಡುವುದಾಗಿ ಜಿಲ್ಲಾಧಿಕಾರಿಗಳು ರೈತ ಮುಖಂಡರಿಗೆ ತಿಳಿಸಿದರು.

ಜಿಲ್ಲೆಯಲ್ಲಿ ನೀರಿನ ಅಭಾವದಿಂದ ೩೬೦೦ ಕೋಟಿ ಬೆಳೆ ನಷ್ಟವಾಗಿರುವ ಬಗ್ಗೆ ಅಂದಾಜು ಮಾಡಲಾಗಿತ್ತು, ಇದೀಗ ಅದರ ಮೊತ್ತ ೫೦೦೦ ಕೋಟಿ ರು.ಗೆ ಹೆಚ್ಚಳವಾಗಿದೆ, ಸರ್ಕಾರ ನೀಡಲಾಗಿದೆ ಎಂದು ಹೇಳುತ್ತಿರುವ ೧೪ ಕೋಟಿ ರು. ಪರಿಹಾರ ಏತಕ್ಕೆ ಸಾಕಾಗಲಿದೆ ಎಂದು ಪ್ರಶ್ನಿಸಿದರು.

ಬರ ಪರಿಸ್ಥಿತಿಯಿಂದ ಭೂಮಿ ಬಾಯಿಬಿಟ್ಟಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ, ನಾಲೆ ಗಳಿಗೆ ನೀರು ಹರಿಸಿ ಎಂದು ಒತ್ತಡ ಮಾಡುತ್ತಿದ್ದರೂ ಸರ್ಕಾರ ಮೌನ ವಹಿಸಿದೆ, ಚಿಕ್ಕದೇವರಾಯ ನಾಲೆ, ರಾಮಸ್ವಾಮಿ ನಾಲೆಗೆ ನೀರು ನೀರು ಹರಿಸಿದ್ದರೂ ಯಾವುದೇ ಮಾಹಿತಿ ಇಲ್ಲ. ವಿಶ್ವೇಶ್ವರಯ್ಯ ನಾಲೆಗೆ ತಕ್ಷಣದಿಂದಲೇ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು.

ಜೂನ್‌ನಲ್ಲಿ ಮೈಸೂರು ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭಿಸಬೇಕು. ಆದರೆ, ಈ ಬಗ್ಗೆ ಪೂರ್ವ ಸಿದ್ಧತೆ ಕೈಗೊಂಡಿಲ್ಲ, ಅಲ್ಲಿನ ವ್ಯವಸ್ಥಾಪಕ ನಿರ್ದೇಶಕರು ನಿರ್ಲಕ್ಷ್ಯ ತೋರಿದ್ದಾರೆ ಎಂಬುದನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ, ಆದಷ್ಟು ಶೀಘ್ರವಾಗಿ ಸಭೆ ಕರೆದು ಚರ್ಚೆಗೆ ಕಾರ್ಖಾನೆ ಆರಂಭಕ್ಕೆ ತುರ್ತು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇರ್ಖ, ವಕೀಲ ತುಳಸಿರ್ಧ, ಮುದ್ದೆಗೌಡ, ಕನ್ನಡ ಸೇನೆ ಮಂಜುನಾಥ್, ಕೃಷ್ಣಪ್ರಕಾಶ್, ಕರವೇ ಶಂಕರೇಗೌಡ, ತಾಯಮ್ಮ, ಮೊತ್ತಹಳ್ಳಿ ಕೆಂಪೇಗೌಡ. ಫಯಾಜ್ ಇತರರಿದ್ದರು.