ಕಾರಟಗಿಯಲ್ಲಿ ಪರೀಕ್ಷೆ ಬರೆದ ೧೪೪೫ ವಿದ್ಯಾರ್ಥಿಗಳು

| Published : Mar 26 2024, 01:06 AM IST

ಕಾರಟಗಿಯಲ್ಲಿ ಪರೀಕ್ಷೆ ಬರೆದ ೧೪೪೫ ವಿದ್ಯಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನಿಂದ ಪ್ರಾರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾಲೂಕಿನ ಐದು ಕೇಂದ್ರದಲ್ಲಿ ಸುಸೂತ್ರವಾಗಿ ನಡೆಯಿತು.

ಶಾಂತಿಯುತ, ಸುಸೂತ್ರವಾಗಿ ನಡೆದ ಪರೀಕ್ಷೆ

ಕನ್ನಡಪ್ರಭ ವಾರ್ತೆ ಕಾರಟಗಿ

ಇಂದಿನಿಂದ ಪ್ರಾರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾಲೂಕಿನ ಐದು ಕೇಂದ್ರದಲ್ಲಿ ಸುಸೂತ್ರವಾಗಿ ನಡೆಯಿತು.

ಮೊದಲ ದಿನವಾದ ಸೋಮವಾರ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತಾಲೂಕಿನ ಕೇಂದ್ರಗಳಿಗೆ ಹಾಜರಾಗುವ ಮೂಲಕ ಶಾಂತಿಯುತವಾಗಿ ಪರೀಕ್ಷೆ ಬರೆದಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕಿನ ಸಿದ್ದಾಪುರ, ರವಿನಗರ ಮತ್ತು ಪಟ್ಟಣದಲ್ಲಿ ಕೆಪಿಎಸ್ ಶಾಲೆ, ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಶಾಲೆ ಮತ್ತು ನ್ಯಾಷನಲ್ ಶಾಲೆ ಸೇರಿ ಒಟ್ಟು ೫ ಪರೀಕ್ಷಾ ಕೇಂದ್ರಗಳಿದ್ದು, ೧೪೬೬ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲು ಅವಕಾಶ ಕೋರಿದ್ದರು. ಆದರೆ, ಕೇವಲ ೧೪೪೫ ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಉಳಿದ ೨೧ ವಿದ್ಯಾರ್ಥಿಗಳು ಗೈರಾಗಿದ್ದರು. ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ ಒಟ್ಟು ೩೪೩ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು ಶೇ.೧೦೦ರಷ್ಟು ಹಾಜರಾತಿ ಇತ್ತು. ಇನ್ನು ಪರೀಕ್ಷೆಗೆ ಯಾವುದೇ ಅಡ್ಡಿಯಾಗದೆ ಸುಸೂತ್ರವಾಗಿ ನಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇನ್ನು ಪರೀಕ್ಷೆಗೆ ವಿದ್ಯಾರ್ಥಿಗಳು ಮೊಬೈಲ್ ಫೋನ್, ಸ್ಮಾರ್ಟ್‌ವಾಚ್‌ನಂತಹ ಎಲೆಕ್ಟ್ರಾನಿಕ್ ಸಾಧನ ತರದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿತ್ತು.

ಇನ್ನು ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಲ್ಲದೇ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್‌ ಬಂದ್‌ ಆಗಿದ್ದವು.

ಪೆನ್‌ ವಿತರಣೆ:

ತಾಲೂಕಿನ ಸಿದ್ದಾಪುರ ಗ್ರಾಮದ ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿನ ೯ ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಹಾಜರಾಗಿದ್ದ ೨೧೬ ವಿದ್ಯಾರ್ಥಿಗಳಿಗೆ ಶಾಲೆ ಮುಖ್ಯಗುರು ಚಂದ್ರಶೇಖರ ಗಣವಾರಿ ಪೆನ್‌ ವಿತರಿಸಿ ಉತ್ತಮವಾಗಿ ಪರೀಕ್ಷೆ ಬರೆಯುವಂತೆ ಶುಭ ಕೋರಿದರು.