ಕಳೆದ ವರ್ಷ ಗಂಗಾವತಿಯಲ್ಲಿ ಎರಡು ದಿನಗಳ ಕಾಲ 13ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ಮಾಡಲಾಗಿತ್ತು

ಕುಷ್ಟಗಿ:ತಾಲೂಕಿನ ಗಡಿ ಗ್ರಾಮ ಮುದೇನೂರು ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವು ಏಪ್ರಿಲ್ ಮೊದಲನೇಯ ವಾರದಲ್ಲಿ ನಡೆಯಲಿದೆ.

ತಾಲೂಕಿನ ಮುದೇನೂರು ಗ್ರಾಮದ ವರದ ಉಮಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ಮುದೇನೂರು ಗ್ರಾಮಸ್ಥರು ಹಾಗೂ ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ ಪಾಟೀಲ ನೇತೃತ್ವದಲ್ಲಿ ಭಾನುವಾರ ಸಂಜೆ ನಡೆದ ಪೂರ್ವ ಭಾವಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ ಮಾತನಾಡಿ, ಕಳೆದ ವರ್ಷ ಗಂಗಾವತಿಯಲ್ಲಿ ಎರಡು ದಿನಗಳ ಕಾಲ 13ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ಮಾಡಲಾಗಿತ್ತು.ಈ ವರ್ಷ ಜಿಲ್ಲೆಯ 14ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮಸ್ಥರ ಅಭಿಪ್ರಾಯದ ಮೇರೆಗೆ ಗ್ರಾಮದಲ್ಲಿ ಆಯೋಜನೆ ಮಾಡಲು ಮುಂದಾಗಿದೆ ಎಂದರು.

ಶಾಸಕ ದೊಡ್ಡನಗೌಡ ಪಾಟೀಲ್ ಗಮನಕ್ಕೆ ತಂದು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಸಾಹಿತ್ಯ ಸಮ್ಮೇಳನ ಮಾಡಲಾಗುತ್ತದೆ. ಗ್ರಾಮಸ್ಥರು ಹಾಗೂ ಸಾಹಿತಿಗಳು ಹಾಗೂ ಕನ್ನಡ ಅಭಿಮಾನಿಗಳು ಸಹಕಾರ ನೀಡಬೇಕು ಎಂದರು.

ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಮಾತನಾಡಿ, ಮುದೇನೂರು ಗ್ರಾಮಸ್ಥರ ಬೇಡಿಕೆಯಂತೆ 14ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ನಿರ್ಣಯ ಕೈಗೊಂಡಿದ್ದು, ಈ ಸಮ್ಮೇಳನ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು ಸಹಕಾರ ನೀಡುತ್ತಾರೆಂದು ವಿಶ್ವಾಸವಿದೆ ಎಂದರು.

ಕಸಾಪ ಕೋಶಾಧ್ಯಕ್ಷ ಅಬ್ದುಲ್ ಕರೀಂ ವಂಟೇಳಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ಕುಷ್ಟಗಿ ತಾಲೂಕಿನಲ್ಲಿ ನಡೆಯುತ್ತಿರುವದು ಸಂತಸದ ಸಂಗತಿಯಾಗಿದೆ ಎಂದ ಅವರು, ಮುದೇನೂರು ಗ್ರಾಮಸ್ಥರು ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಊಟ ಮತ್ತು ಉಪಹಾರ ಹಾಗೂ ಮೆರವಣಿಗೆ ಸೇರಿದಂತೆ ಸಣ್ಣಪುಟ್ಟ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮ್ಮೇಳನ ಯಶಸ್ವಿ ಮಾಡಬೇಕು ಎಂದರು.

ಗ್ರಾಮಸ್ಥರ ಪರ ಮುಖಂಡರಾದ ಸುರೇಶ ಪಾಟೀಲ್ ಹಾಗೂ ಆದಪ್ಪ ಉಳ್ಳಾಗಡ್ಡಿ ಮಾತನಾಡಿ, ನಮ್ಮ ಮುದೇನೂರು ಗ್ರಾಮದಲ್ಲಿ 14ನೇ ಕೊಪ್ಪಳ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ. ಸಮ್ಮೇಳನದ ಯಶಸ್ವಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದರು.

ರವೀಂದ್ರ ಬಾಕಳೆ ಕುಷ್ಟಗಿ ತಾಲೂಕಿನ ಗಡಿ ಗ್ರಾಮದ ಮುದೇನೂರಿನಲ್ಲಿ ಚಂದ್ರಶೇಖರ ಶ್ರೀಗಳು ಹಾಗೂ ಶಶಿಧರ ಶ್ರೀಗಳು ನೆಲೆಸಿರುವ ಪುಣ್ಯದ ನೆಲವಾಗಿದ್ದು, ಅಷ್ಟೆ ಅಲ್ಲದೆ ಇದು ಸಾಂಸ್ಕೃತಿಕ ಗ್ರಾಮವಾಗಿದ್ದು, ಇಲ್ಲಿ ಸಮ್ಮೇಳನ ನಡೆಸುವದು ಯೋಗ್ಯವಾಗಿದ್ದು ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ, ಗೋಷ್ಠಿಗಳು, ಸಾಹಿತ್ಯಾಸಕ್ತರಿಗೆ ಸೂಕ್ತ ವೇದಿಕೆ ನಿರ್ಮಿಸಿಕೊಡುವ ಕೆಲಸ ಮಾಡೋಣ ಎಂದರು.

ಈ ಸಂದರ್ಭದಲ್ಲಿ ದೋಟಿಹಾಳ ಕಸಾಪ ಅಧ್ಯಕ್ಷ ನಿಂಗಪ್ಪ ಸಜ್ಜನ, ಹನುಮೇಶ ಗುಮಗೇರಿ, ಮಂಜುನಾಥ ಗುಳೇದಗುಡ್ಡ, ನಾಗರಾಜ ಬಡಿಗೇರ, ಅನಿಲಕುಮಾರ ಕಮ್ಮಾರ, ಸಂಗಮೇಶ ಲೂತಿಮಠ, ಪರಶಿವಮೂರ್ತಿ ದೋಟಿಹಾಳ, ಯೋಗರಾಜ ಹಾವಿನಾಳ, ಶ್ರೀಧರ ಹಳೇಗೌಡ್ರು, ಶರಣಬಸವ ಗಂಗನಾಳ, ಶರಣಪ್ಪ ಹಾವಿನಾಳ, ಶ್ರೀಧರ ಹಾವಿನಾಳ, ಬಸವರಾಜ ಗೊರೆಬಾಳ, ಬಸುರೆಡ್ಡಿ ಗೊರೆಬಾಳ, ಸಂಗಯ್ಯ ಹಿರೇಮಠ, ಶರಣಬಸವ ಸಮತರ ಸೇರಿದಂತೆ ಅನೇಕರು ಇದ್ದರು.