ಬೆಳೆಗಾರರು ಮತ್ತು ಗ್ರಾಹಕರ ನೇರ ಸಂಪರ್ಕ, ಬೆಳೆಗಾರರು, ಗ್ರಾಹಕರು ಮತ್ತು ವಿಜ್ಞಾನಿಗಳನ್ನು ಒಂದೇ ವೇದಿಕೆಗೆ ತರುವುದು, ಒಣಮೆಣಸಿನಕಾಯಿ ಬೇಸಾಯದಲ್ಲಿನ ಹೊಸ ಸಂಶೋಧನೆಗಳ ಮಾಹಿತಿಯನ್ನು ಬೆಳೆಗಾರರಿಗೆ ಒದಗಿಸುವ ಉದ್ದೇಶವನ್ನು ಮೇಳ ಹೊಂದಿದೆ.
ಹುಬ್ಬಳ್ಳಿ:
ನಗರದ ಮೂರು ಸಾವಿರ ಮಠದ ಹೈಸ್ಕೂಲ್ ಮೈದಾನದಲ್ಲಿ ಫೆ. 6ರಿಂದ 8ರ ವರೆಗೆ 14ನೇ ಒಣಮೆಣಸಿನಕಾಯಿ ಮೇಳ ಆಯೋಜಿಸಲಾಗಿದೆ ಎಂದು ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಅಂದಾಜು 79,152 ಹೆಕ್ಟೇರ್ ಪ್ರದೇಶದಲ್ಲಿ ಒಣಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿದ್ದು, ಅಂದಾಜು 1.58 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷೆ ಹೊಂದಲಾಗಿದೆ. ರಾಜ್ಯದಲ್ಲಿ ಬ್ಯಾಡಗಿ ಡಬ್ಬಿ ಹಾಗೂ ಬ್ಯಾಡಗಿ ಕಡ್ಡಿ ತಳಿಯ ಒಣಮೆಣಸಿನಕಾಯಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಲವಾರು ದೇಶಗಳಲ್ಲಿ ಈ ತಳಿಗಳಿಗೆ ಬೇಡಿಕೆಯಿದೆ. ಬಳ್ಳಾರಿ, ಗದಗ, ಧಾರವಾಡ, ಬಾಗಲಕೋಟ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಒಣಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಯ ರೈತರು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. 13ನೇ ಒಣಮೆಣಸಿನಕಾಯಿ ಮೇಳದಲ್ಲಿ ಸುಮಾರು 89 ರೈತರು ಭಾಗವಹಿಸಿದ್ದರು. ಅಲ್ಲದೇ ಸುಮಾರು 203 ಕ್ವಿಂಟಲ್ ಒಣಮೆಣಸಿನಕಾಯಿ ಮಾರಾಟದಿಂದ ₹71 ಲಕ್ಷ ವಹಿವಾಟು ನಡೆದಿತ್ತು. ಈ ಬಾರಿ 100ಕ್ಕೂ ಅಧಿಕ ರೈತರು ಭಾಗವಹಿಸಿ, ಅಧಿಕ ವಹಿವಾಟು ನಡೆಸುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಬೆಳೆಗಾರರು ಮತ್ತು ಗ್ರಾಹಕರ ನೇರ ಸಂಪರ್ಕ, ಬೆಳೆಗಾರರು, ಗ್ರಾಹಕರು ಮತ್ತು ವಿಜ್ಞಾನಿಗಳನ್ನು ಒಂದೇ ವೇದಿಕೆಗೆ ತರುವುದು, ಒಣಮೆಣಸಿನಕಾಯಿ ಬೇಸಾಯದಲ್ಲಿನ ಹೊಸ ಸಂಶೋಧನೆಗಳ ಮಾಹಿತಿಯನ್ನು ಬೆಳೆಗಾರರಿಗೆ ಒದಗಿಸುವ ಉದ್ದೇಶ ಹೊಂದಲಾಗಿದೆ. ಮೇಳದಲ್ಲಿ ಭಾಗವಹಿಸುವ ಆಸಕ್ತ ರೈತರು ರೈತರು ಪಹಣಿ ಪತ್ರಿಕೆ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ತಾಲೂಕು ತೋಟಗಾರಿಕೆ ಕಚೇರಿ ಹಾಗೂ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮಂಡಳಿಯ 0836- 2375030, ಹುಬ್ಬಳ್ಳಿಯ ತೋಟಗಾರಿಕೆ ಇಲಾಖೆ ಕಚೇರಿ 0836- 2355138, ಧಾರವಾಡ- (0836-2746334), ನವಲಗುಂದ- (08380-229170) ಸಂಪರ್ಕಿಸುವಂತೆ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಡಾ. ರಾಮಚಂದ್ರ ಮಡಿವಾಳ ಇದ್ದರು.
ಫೆ. 6ರಂದು ಮೇಳಕ್ಕೆ ಚಾಲನೆ:ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಅಮರಶಿವ ರೈತ ಉತ್ಪಾದಕ ಸಂಸ್ಥೆ, ಸಂಶಿ ಹಾಗೂ ಉಳವಾಯೋಗಿ ರೈತ ಉತ್ಪಾದಕ ಸಂಸ್ಥೆ ಸಹಯೋಗದಲ್ಲಿ ಈ ಮೇಳ ಆಯೋಜಿಸಲಾಗಿದೆ. ಫೆ. 6ರಂದು ಬೆಳಗ್ಗೆ 11ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜ. ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗಿಂದ್ರ ಶ್ರೀಗಳು ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕಾರ್ಯಕ್ರಮ ಉದ್ಘಾಟಿಸುವರು. ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಳಿಗೆ ಉದ್ಘಾಟಿಸುವರು. ವಿಪ ಸರ್ಕಾರಿ ಮುಖ್ಯಸಚೇತಕ ಸಲೀಂ ಅಹ್ಮದ್, ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷ ಭರಮಗೌಡ (ರಾಜು) ಅಲಗೌಡ ಕಾಗೆ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮಪೀರ ಖಾದ್ರಿ ಸೇರಿದಂತೆ ಶಾಸಕರು, ವಿಪ ಸದಸ್ಯರು, ಮೇಯರ್, ಅಧಿಕಾರಿಗಳು ಪಾಲ್ಗೊಳ್ಳುವರು. ಶಾಸಕ ಅಬ್ಬಯ್ಯ ಪ್ರಸಾದ ಅವರು ಅಧ್ಯಕ್ಷತೆ ವಹಿಸುವರು ಎಂದರು.