ಭದ್ರಾತಿಯಲ್ಲಿ 15 ಸಾವಿರ ಲಾಡು ವಿತರಣೆ, ಕರಸೇವಕರಿಗೆ ಸನ್ಮಾನ

| Published : Jan 23 2024, 01:48 AM IST

ಸಾರಾಂಶ

ಭದ್ರಾವತಿಯಲ್ಲಿಯೂ ಸೋಮವಾರ ಅಯೋಧ್ಯೆ ಹಬ್ಬದ ಸಂಭ್ರಮ. ರಾಮಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಎಲ್ಲೆಡೆ ಹಬ್ಬದ ವಾತಾವರಣ ಕಂಡುಬಂದಿತು. ದೇಗುಲಗಳಲ್ಲಿ ಅಭಿಷೇಕ, ವಿಶೇಷ ಪೂಜೆ, ಹೋಮ-ಹವನ ನಡೆದವು. 15 ಸಾವಿರ ಲಾಡು ವಿತರಣೆ ಹಾಗೂ ಕರಸೇವಕರಿಗೆ ಗೌರವ ಸಮರ್ಪಣೆ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ, ಭದ್ರಾವತಿ

ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗೂ ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಸೋಮವಾರ ಎಲ್ಲೆಡೆ ಹಬ್ಬದ ವಾತಾವರಣ ಕಂಡುಬಂದಿತು.

ದೇವಸ್ಥಾನಗಳ ಬಳಿ ಅದರಲ್ಲೂ ವಿಶೇಷವಾಗಿ ಶ್ರೀ ರಾಮ ದೇವಸ್ಥಾನ ಹಾಗೂ ಮಂದಿರಗಳ ಬಳಿ ಆಡಳಿತ ಮಂಡಳಿಯವರು, ಹಿಂದೂಪರ ಸಂಘಟನೆಗಳು, ಸೇವಾಕರ್ತರು, ದಾನಿಗಳು, ಭಕ್ತರು ಕೆಲವು ದಿನಗಳ ಹಿಂದೆಯೇ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸುವ ಮೂಲಕ ಐತಿಹಾಸಿಕ ದಿನ ಕಾತುರದಿಂದ ಎದುರು ನೋಡುತ್ತಿದ್ದರು.

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗೂ ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರುತ್ತಿದ್ದಂತೆ ಎಲ್ಲೆಡೆ ಹಬ್ಬದ ವಾತಾವರಣ ಕಂಡುಬಂದಿತು. ಅಭಿಷೇಕ, ವಿಶೇಷ ಪೂಜೆ, ಹೋಮ-ಹವನ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ವಿವಿಧ ಸಂಘಟನೆಗಳು, ದಾನಿಗಳು, ಭಕ್ತರು, ಸೇವಾಕರ್ತರಿಂದ ಪಾನಕ, ಮಜ್ಜಿಗೆ, ಕೋಸಂಬರಿ, ಲಾಡು ಹಾಗೂ ಅನ್ನಸಂತರ್ಪಣೆ ನೆರವೇರಿತು.

ಬೃಹತ್ ಎಲ್‌ಸಿಡಿ ವ್ಯವಸ್ಥೆ- ಕರ ಸೇವಕರಿಗೆ ಸನ್ಮಾನ:

ವಿಶ್ವ ಹಿಂದೂ ಪರಿಷದ್ ವತಿಯಿಂದ ಸಿದ್ಧಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ವಿರಕ್ತ ಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಹೋಮ ಹವನ, ಭಜನೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಕರಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಕ್ತರಿಗೆ ಐತಿಹಾಸಿಕ ಕ್ಷಣ ವೀಕ್ಷಣೆಗಾಗಿ ಬೃಹತ್ ಎಲ್‌ಸಿಡಿ ವ್ಯವಸ್ಥೆ ಕಲ್ಪಿಲಾಗಿತ್ತು.

ಸುಮಾರು 15 ಸಾವಿರ ಲಾಡು ವಿತರಣೆ:

ಪ್ರಮುಖ ಹಿಂದೂಪರ ಸಂಘಟನೆಗಳಲ್ಲಿ ಒಂದಾಗಿರುವ ಕೇಸರಿಪಡೆ ವತಿಯಿಂದ ಹಳೇನಗರದ ಕಂಚಿನಬಾಗಿಲು ವೃತ್ತದ ಬಳಿ ಪ್ರಭು ಶ್ರೀರಾಮ ಚಂದ್ರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೇಸರಿಪಡೆ ಪ್ರಮುಖರು, ಕಾರ್ಯಕತರು, ಸ್ಥಳೀಯ ನಿವಾಸಿಗಳು, ಭಕ್ತರು ಸಿಡಿಮದ್ದು ಸಿಡಿಸಿ, ಕಲಾತಂಡಗಳೊಂದಿಗೆ ಸಂಭ್ರಮಿಸಿ ಸುಮಾರು 15 ಸಾವಿರ ಲಾಡು ವಿತರಣೆ ಮೂಲಕ ಗಮನ ಸೆಳೆದರು.

- - - -ಡಿ22-ಬಿಡಿವಿಟಿ1: ವಿಶ್ವ ಹಿಂದೂ ಪರಿಷತ್ತು ವತಿಯಿಂದ ಭದ್ರಾವತಿಯಲ್ಲಿ ಕರಸೇವಕರನ್ನು ಸನ್ಮಾನಿಸಲಾಯಿತು. ಭಕ್ತರಿಗೆ ಐತಿಹಾಸಿಕ ಕ್ಷಣ ವೀಕ್ಷಣೆಗಾಗಿ ಬೃಹತ್ ಎಲ್‌ಸಿಡಿ ವ್ಯವಸ್ಥೆ ಕಲ್ಪಿಲಾಗಿತ್ತು. -ಡಿ22ಬಿಡಿವಿಟಿ೧(ಎ):

ಭದ್ರಾವತಿಯಲ್ಲಿ ಕೇಸರಿಪಡೆ ವತಿಯಿಂದ ಹಳೇನಗರದ ಕಂಚಿನಬಾಗಿಲು ವೃತ್ತದ ಬಳಿ ಪ್ರಭು ಶ್ರೀರಾಮ ಚಂದ್ರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಿಡಿಮದ್ದು ಸಿಡಿಸಿ, ಕಲಾತಂಡಗಳೊಂದಿಗೆ ಸಂಭ್ರಮಿಸಿ ಸುಮಾರು 15 ಸಾವಿರ ಲಾಡು ವಿತರಿಸಲಾಯಿತು.