ಸಾರಾಂಶ
ಹೊಸಪೇಟೆ : ತುಂಗಭದ್ರಾ ಜಲಾಶಯದ ಒಳ ಹರಿವು 32,767 ಕ್ಯುಸೆಕ್ ಇರುವ ಹಿನ್ನೆಲೆ ಜಲಾಶಯದಿಂದ ಬುಧವಾರ ನದಿಗೆ 14,100 ಕ್ಯುಸೆಕ್ ನೀರು ಹರಿಬಿಡಲಾಗಿದೆ. ಜಲಾಶಯದ ಆರು ಕ್ರಸ್ಟ್ ಗೇಟ್‌ಗಳನ್ನು ತಲಾ 2 ಅಡಿ ಎತ್ತರಿಸಿ ನದಿಗೆ ನೀರು ಬಿಡಲಾಗಿದೆ. ಇನ್ನೂ ವಿದ್ಯುತ್ ಉತ್ಪಾದನಾ ಘಟಕದ ಮಾರ್ಗವಾಗಿ ಒಂದು ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ. ಜಲಾಶಯದಿಂದ ನದಿಗೆ ಒಟ್ಟು 15100 ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ.
ಜಲಾಶಯದ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಇದ್ದು, ಜಲಾಶಯದಲ್ಲಿ ಈಗ 77.144 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಕ್ರಸ್ಟ್‌ಗೇಟ್‌ಗಳು ಮುಕ್ಕಾಗಿವೆ ಎಂದು ವರದಿ ಬಂದಿರುವ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ ಈ ವರ್ಷ 80 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ.
ಜಲಾಶಯದ ಎಡದಂಡೆ ಕಾಲುವೆ ಮಾರ್ಗವಾಗಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಜೂ.30ರಂದು 2 ಸಾವಿರ ಕ್ಯುಸೆಕ್ ನೀರು ಹರಿಸಲಾಗಿತ್ತು. ಜು. 1ರಂದು 1 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಗಿತ್ತು. ಈಗ ಜಲಾಶಯದಲ್ಲೇ 77.144 ಟಿಎಂಸಿ ನೀರು ಸಂಗ್ರಹವಾಗಿರುವ ಹಿನ್ನೆಲೆ ಜಲಾಶಯದಿಂದ ನದಿಗೆ ಬುಧವಾರ ಆರಂಭದಲ್ಲಿ 2 ಗೇಟ್‌ಗಳನ್ನು ತಲಾ 2 ಅಡಿ ಎತ್ತರಿಸಿ 4,680 ಕ್ಯುಸೆಕ್ ನೀರು ಹರಿಸಲಾಯಿತು. ಇನ್ನೂ ಎರಡು ಗೇಟ್‌ಗಳನ್ನು ತಲಾ 2 ಅಡಿ ಎತ್ತರಿಸಿ ನೀರು ಹರಿಸಲಾಯಿತು. ಇದರಿಂದ 4 ಗೇಟ್‌ಗಳಿಂದ 9,400 ಕ್ಯುಸೆಕ್ ನೀರು ಹರಿಸಲಾಯಿತು. ಬಳಿಕ ಮತ್ತೆ 2 ಗೇಟ್‌ಗಳನ್ನು ತಲಾ 2 ಅಡಿ ಎತ್ತರಿಸಿ ನೀರು ಹರಿಸಲಾಯಿತು. ಒಟ್ಟು 6 ಗೇಟ್‌ಗಳನ್ನು ತಲಾ 2 ಅಡಿ ಎತ್ತರಿಸಿ ನದಿಗೆ 14,100 ಕ್ಯುಸೆಕ್ ನೀರು ಹರಿಸಲಾಯಿತು. ಜಲಾಶಯದ ಎಡದಂಡೆ ಕಾಲುವೆ ಮಾರ್ಗವಾಗಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಒಂದು ಸಾವಿರ ಕ್ಯುಸೆಕ್ ನೀರು ಹರಿಸಲಾಯಿತು.
ಜಲಾಶಯದ ಒಳ ಹರಿವು 32,767 ಕ್ಯುಸೆಕ್ ಇದ್ದು, 77.144 ಟಿಎಂಸಿ ನೀರು ಈಗಾಗಲೇ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 13,410 ಕ್ಯುಸೆಕ್ ಒಳ ಹರಿವು ಇದ್ದರೆ, 7.909 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ಹತ್ತು ವರ್ಷಗಳ ಸರಾಸರಿ ತೆಗೆದುಕೊಂಡರೆ, ಜಲಾಶಯದಲ್ಲಿ 22.889 ಟಿಎಂಸಿ ನೀರು ಸಂಗ್ರಹ ಇರಬೇಕಿತ್ತು. ಆದರೆ, ಈ ವರ್ಷ ಜಲಾಶಯದ ಮೇಲ್ಭಾಗದಲ್ಲಿ ಮಳೆ ಆಗಿರುವ ಹಿನ್ನೆಲೆ ಭಾರಿ ಪ್ರಮಾಣದಲ್ಲಿ ಜಲಾಶಯದ ಒಡಲಿಗೆ ನೀರು ಸೇರಿದೆ. ಹಾಗಾಗಿ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ. ಈ ವರ್ಷ ಜಲಾಶಯ ನೆಚ್ಚಿರುವ ರೈತರ ಮೊಗದಲ್ಲೂ ಹರ್ಷ ತಂದಿದೆ.