ಬೈಕ್ ವ್ಹೀಲಿಂಗ್ ಮಾಡಿದ್ದ ಯುವಕನಿಗೆ 15,500 ರು. ದಂಡ

| Published : Jan 10 2024, 01:45 AM IST

ಸಾರಾಂಶ

ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿ, ಬೈಕ್‌ನಲ್ಲಿ ವ್ಹೀಲಿಂಗ್‌ ಮಾಡಿದ್ದ ಯುವಕನಿಗೆ ಕೋರ್ಟ್‌ ₹15,500 ದಂಡ ವಿಧಿಸಿದೆ. ಅಲ್ಲದೇ, ಆತನ ಸಾಹಸಕ್ಕೆ ಸಹಕರಿಸಿ, ವಿಡಿಯೋ ಚಿತ್ರೀಕರಣ ಮಾಡಿದ್ದಾತನಿಗೂ ₹5000 ದಂಡ ವಿಧಿಸಿ, ಆದೇಶ ನೀಡಿದೆ.

ಶಿವಮೊಗ್ಗ: ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ ಯುವಕನಿಗೆ ಶಿವಮೊಗ್ಗದ ನ್ಯಾಯಾಲಯ ₹15,500 ದಂಡ ವಿಧಿಸಿದೆ. ಅಲ್ಲದೇ, ವ್ಹೀಲಿಂಗ್ ಮಾಡುವ ವಿಡಿಯೋ ಚಿತ್ರೀಕರಿಸಲು ಮತ್ತೊಂದು ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ ₹5 ಸಾವಿರ ದಂಡ ವಿಧಿಸಲಾಗಿದೆ.

ನಗರದ ಕಾಮಾಕ್ಷಿ ಬೀದಿಯ ಯುವಕನೊಬ್ಬ ಶಿವಮೊಗ್ಗದ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡಿ ಅವರ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪಶ್ಚಿಮ ಸಂಚಾರ ಠಾಣೆಯ ಎಚ್.ಸಿ. ಸಂದೀಪ್ ಬೈಕ್‌ಗಳನ್ನು ಪತ್ತೆ ಹಚ್ಚಿದ್ದರು. ತನಿಖೆ ನಡೆಸಿದ ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 5ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವ್ಹೀಲಿಂಗ್ ಮಾಡಿದ ಬೈಕ್ ಸವಾರ ಮತ್ತು ಹಿಂಬದಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಗಿದ್ದ ಬೈಕ್ ಸವಾರನಿಗೆ ದಂಡ ವಿಧಿಸಿದೆ. ವ್ಹೀಲಿಂಗ್ ಮಾಡಿದ್ದ ಬೈಕ್ ಸವಾರ ರೇಸಿಂಗ್, ಡಿ.ಎಲ್. ರಹಿತ ಚಾಲನೆ, ನಿರ್ಲಕ್ಷ್ಯದ ಚಾಲನೆ, ಬೈಕ್‌ನಲ್ಲಿ ಸೈಡ್ ಮಿರರ್‌ಗಳು ಇಲ್ಲದಿರುವುದಕ್ಕೆ ದಂಡ ವಿಧಿಸಲಾಗಿದೆ.

- - - (-ಸಾಂದರ್ಭಿಕ ಚಿತ್ರ.)