ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ರೇಷ್ಮೆ ಬೆಳೆಯನ್ನು ಪುನಶ್ಚೇತನಗೊಳಿಸಲು ಸರ್ಕಾರದ ವತಿಯಿಂದ ಸಿಲ್ಕ್ ರೀಲರ್‌ಗಳಿಗೆ ನೀಡಲು ₹೧೫ ಕೋಟಿ ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾಹಿತಿ ನೀಡಿದರು.ಈಚೆಗೆ ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಾಂಬಳ್ಳಿ ಗ್ರಾಮ ದಿವಂಗತ ಸಿದ್ದಮಾದಯ್ಯ, ಕೆಂಪಮ್ಮ, ಬಿ ಬಸವಯ್ಯ, ಎಸ್ ಜಯಣ್ಣ ಸೇರಿದಂತೆ ಇನ್ನಿತರ ಶಾಸಕರನ್ನು ಕೊಟ್ಟ ಗ್ರಾಮ. ಈ ಗ್ರಾಮದ ಬಹುತೇಕರು ಸಿಲ್ಕ್ ಫಿಲೇಚರ್‌ಗಳನ್ನು ಅವಲಂಬಿಸಿದ್ದಾರೆ. ಸಿಲ್ಕ್ ರೀಲರ್ ಗಳ ಸಂಘದಲ್ಲಿ ಸುಮಾರು ಒಂದು ಸಾವಿರ ಸದಸ್ಯರಿದ್ದು ೭೦೦ ರಿಂದ ೮೦೦ ಮಂದಿ ಪ.ಜಾತಿ,ಪಂಗಡದವರೇ ಇದ್ದಾರೆ. ಇಲ್ಲಿ ರೇಷ್ಮೆ ಕಾರ್ಖಾನೆ ಪುನರಾರಂಭಿಸಿದರೆ, ೭,೦೦೦ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಲಿವೆ ಎಂದರು.ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ, ಯಳಂದೂರು, ಮಾಂಬಳ್ಳಿ, ಹನೂರು ಭಾಗದಲ್ಲಿ ದಲಿತರು, ಹಿಂದುಳಿದವರು ಅಲ್ಪಸಂಖ್ಯಾತರು ಹೆಚ್ಚಾಗಿ ಇರುವುದರಿಂದ ಅವರ ಅಭಿವೃದ್ಧಿಗಾಗಿ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ೩೬೦೦ ಕೋಟಿ ರು.ಗಳ ಯೋಜನೆಗಳನ್ನು ರೂಪಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಅನುದಾನದಲ್ಲಿ ಈ ಭಾಗದ ಜನರ ಅನುಕೂಲಕ್ಕಾಗಿ ಅಗತ್ಯ ಇರುವ ಸಾಕಷ್ಟು ಯೋಜನೆಗಳನ್ನು ಕೈಗೊಳ್ಳಲಾಗುವುದು. ಸುವರ್ಣವತಿ ಜಲಾಶಯ ಅಭಿವೃದ್ಧಿಯಾದರೆ ೮೦೦೦ ಎಕರೆ ನೀರಾವರಿಗೆ ಅನುಕೂಲವಾಗಲಿದೆ. ಈ ಭಾಗದ ಜನರಗೆ ನೀರು ಕೊಡುವ ಉದ್ದೇಶದಿಂದ ವಿಸ್ತೃತ ವರದಿ ಸಿದ್ಧಪಡಿಸುಂತೆ ಶಾಸಕ ಎ.ಆರ್. ಕೃಷ್ಣಮೂರ್ತಿ ರವರಿಗೆ ಹೇಳಿದ್ದೇನೆ. ಇದಲ್ಲದೆ ೬ ದೊಡ್ಡ ಕೆರೆಗಳ ಅಭಿವೃದ್ಧಿಗೆ ೫೦ ಕೋಟಿ ರೂ ಮಂಜೂರು ಮಾಡಿದೆ. ಅಂಬೇಡ್ಕರ್ ವೋಟಿನ ಹಕ್ಕು ನೀಡದಿದ್ದರೆ ನಾವೆಲ್ಲ ಈ ರೀತಿ ಇಲ್ಲಿ ಕುಳಿತುಕೊಳ್ಳಲು ಆಗುತ್ತಿರಲಿಲ್ಲ, ನಾನು ಸಚಿವನಾಗಲು ಸಾಧ್ಯವಾಗುತ್ತಿರಲಿಲ್ಲ. ಅಂಬೇಡ್ಕರ್ ನಮಗೆ ಸ್ಪೂರ್ತಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಕ್ಕು ಹಾಗೂ ಸಮಾನತೆ ಕೊಡಿಸಲು ತ್ಯಾಗ ಹೋರಾಟ ಮಾಡಿದ್ದಾರೆ. ಅಂಬೇಡ್ಕರ್ ರವರ ೭೦ ವರ್ಷಗಳ ಸಂವಿಧಾನವನ್ನು ನೂರಾರು ತಿದ್ದುಪಡಿ ಮಾಡಿದ್ದಾರೆ. ಆದರೆ ಸಂವಿಧಾನದ ಮೂಲ ಆಶಯವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ನಮ್ಮ ಸಂವಿಧಾನಕ್ಕಿರುವ ತಾಕತ್ತು ಎಂದರು.ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ ಈ ಗ್ರಾಮಕ್ಕೆ ನಮ್ಮ ತಂದೆ ದಿ.ಬಿ.ರಾಚಯ್ಯರವರ ಕೊಡುಗೆ ಸಾಕಷ್ಟಿದೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಇಲ್ಲಿಗೆ ಪ್ರೌಢಶಾಲೆಯನ್ನು ಆರೋಗ್ಯ ಸಚಿವರಾಗಿದ್ದಾಗ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು, ರೇಷ್ಮೆ ಸಚಿವರಾಗಿದ್ದ ವೇಳೆ ಸಿಲ್ಕ್ ಫಿಲೇಚರ್ ಅನ್ನು ಮಂಜೂರು ಮಾಡಿಸಿಕೊಟ್ಟಿದ್ದರು ಎಂದರು. ಇದಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಅದ್ದೂರಿಯಾಗಿ ವಿವಿಧ ಕಲಾತಂಡಗಳೊಂದಿಗೆ ಮರವಣಿಗೆ ಮಾಡಲಾಯಿತು. ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮಿಜಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಧಮೇಂದ್ರ, ಗ್ರಾಪಂ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷೆ ಮುಬಾರಕ್‌ಉನ್ನೀಸಾ ದೊಡ್ಡ ಯಜಮಾನರಾದ ಬಸವರಾಜುಬುದ್ದಿ, ಮಹಾದೇವು, ಪುರುಷೋತ್ತಮ್, ದಾಸ್, ಶಿವಪ್ರಕಾಶ್, ಪ್ರತಾಪ್, ಶೀಲಾ, ಪರಶಿವಮೂರ್ತಿ, ಎನ್. ಸೋಮಣ್ಣ, ಬಸವರಾಜು, ಪುಟ್ಟಸ್ವಾಮಿ, ನಂಜುಂಡಸ್ವಾಮಿ ಸೇರಿದಂತೆ ಗ್ರಾಮದ ಇನ್ನಿತರರು ಹಾಜರಿದ್ದರು.