ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯಲ್ಲಿ ಬೀಡು ಬಿಟ್ಟಿದ್ದ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ‘ಆಪರೇಷನ್ ಮುಕ್ತ’ ಹೆಸರಿನಲ್ಲಿ ಶನಿವಾರ ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಟ್ ಫೀಲ್ಡ್ ವಿಭಾಗದ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿದ್ದು, 15 ಮಂದಿ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ. ವಶಕ್ಕೆ ಪಡೆದಿರುವ ಈ ಬಾಂಗ್ಲಾ ಪ್ರಜೆಗಳನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಓಓ) ಮುಂದೆ ಹಾಜರುಪಡಿಸಿ ಗಡಿಪಾರಿಗೆ ಪೊಲೀಸರು ವರದಿ ಸಲ್ಲಿಸಿದ್ದಾರೆ. ಬಳಿಕ ಎಫ್‌ಆರ್‌ಓಓ ಸೂಚನೆ ಮೇರೆಗೆ ವಿದೇಶಿಯರ ನಿರ್ಬಂಧನಾ ಕೇಂದ್ರಕ್ಕೆ ಪೊಲೀಸರು ಕಳುಹಿಸಿದ್ದಾರೆ.ಇತ್ತೀಚಿಗೆ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಪೊಲೀಸರು ಮೃದು ಧೋರಣೆ ತಾಳಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ ಇದೇ ವಿಚಾರವಾಗಿ ಹೈಕೋರ್ಟ್ ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ಪ್ರಜೆಗಳ ಪತ್ತೆಗೆ ‘ಆಪರೇಷನ್ ಮುಕ್ತ’ ಹೆಸರಿನಲ್ಲಿ ಕಾರ್ಯಾಚರಣೆಗೆ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಚಿಸಿದ್ದರು.
ಶನಿವಾರ ಬೆಳಗ್ಗೆ 5 ಗಂಟೆಗೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎ.ನಾರಾಯಣ್ ಹಾಗೂ ವೈಟ್ ಫೀಲ್ಡ್ ಉಪ ವಿಭಾಗದ ಪೊಲೀಸರು ದಾಳಿ ನಡೆಸಿ, ಸಾವಿರಾರು ಜನರ ತಪಾಸಣೆ ಬಳಿಕ 15 ಅಕ್ರಮ ಬಾಂಗ್ಲಾ ವಲಸಿಗರು ಖಾಕಿ ಬಲೆಗೆ ಬಿದ್ದಿದ್ದಾರೆ.ಎಲೆಕ್ಟ್ರಾನಿಕ್ ಸಿಟಿಯಲ್ಲಿ 1900 ಜನರ ತಪಾಸಣೆ:
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ವ್ಯಾಪ್ತಿಯಲ್ಲಿನ ನಿರ್ಮಾಣ ಹಂತದ ಕಟ್ಟಡಗಳು ಹಾಗೂ ಶೆಡ್‌ಗಳು ಸೇರಿ 29 ಸ್ಥಳಗಳಲ್ಲಿ 295 ಅಧಿಕಾರಿ-ಸಿಬ್ಬಂದಿ ಪ್ರತ್ಯೇಕವಾ ತಂಡ ರಚಿಸಿ ದಾಳಿ ನಡೆಸಲಾಯಿತು ಎಂದು ಡಿಸಿಪಿ ನಾರಾಯಣ್ ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ 1909 ಶಂಕಿತರನ್ನು ವಶಕ್ಕೆ ಪಡೆದ ನಂತರ ಅವರ ವೀಸಾ, ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯತೆಯ ನಿರೂಪಿಸುವ ಅಧಿಕೃತ ದಾಖಲೆಗಳನ್ನು ತಾಂತ್ರಿಕವಾಗಿ ಪರಿಶೀಲಿಸಲಾಯಿತು. ಆಗ ಬಾಂಗ್ಲಾದೇಶದ ಬಾಗೇರಹತ್ ಮತ್ತು ಖುಲ್ಲಾ ಜಿಲ್ಲೆಗಳಿಗೆ ಸೇರಿದ 15 ನಾಗರಿಕರು ಪತ್ತೆಯಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಅಕ್ರಮವಾಗಿ ಗಡಿ ದೇಶದೊಳಗೆ ನುಸುಳಿದ ತರುವಾಯ ನಗರಕ್ಕೆ ಬಂದು ಯಾವುದೇ ವೀಸಾ ಅಥವಾ ಪೌರತ್ವ ದಾಖಲೆಗಳಿಲ್ಲದೆ ಕಾನೂನುಬಾಹಿರವಾಗಿ ನೆಲೆಸಿದ್ದ ಬಾಂಗ್ಲಾದೇಶದ ನಾಗರಿಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಎಫ್‌ಆರ್‌ಓಓಗೆ ಈ ಪ್ರಜೆಗಳನ್ನು ಗಡಿಪಾರಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಆಶ್ರಯದಾತರ ವಿರುದ್ಧ ಕ್ರಮ
ಅಕ್ರಮ ಬಾಂಗ್ಲಾ ಪ್ರಜೆಗಳಿಗೆ ನೆರವಾಗಿದ್ದ ಖಾಸಗಿ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಡಿಸಿಪಿ ನಾರಾಯಣ್ ಎಚ್ಚರಿಕೆ ನೀಡಿದ್ದಾರೆ. ತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಇತರೆಡೆ ಬಾಂಗ್ಲಾ ಪ್ರಜೆಗಳು ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಆಶ್ರಯದಾತರ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ.ವೈಟ್‌ಫೀಲ್ಡ್‌ನಲ್ಲಿ ಒಬ್ಬರು ಇಲ್ಲ
ವೈಟ್ ಫೀಲ್ಡ್ ಉಪ ವಿಭಾಗದ ವ್ಯಾಪ್ತಿಯಲ್ಲಿ ಅಕ್ರಮ ಬಾಂಗ್ಲಾ ಪ್ರಜೆಗಳ ವಿರುದ್ಧ ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ‘ಆಪರೇಷನ್ ಮುಕ್ತಿ’ ಕಾರ್ಯಾಚರಣೆ ನಡೆಯಿತು. ಈ ವೇಳೆ ಕೆ.ಆರ್.ಪುರ, ಕಾಡುಗೋಡಿ, ಆವಲಹಳ್ಳಿ, ವೈಟ್‌ಫೀಲ್ಡ್ ಹಾಗೂ ಮಹದೇವಪುರ ಠಾಣೆಗಳ ಸರಹದ್ದಿನಲ್ಲಿ 1340 ಶಂಕಿತ ಜನರನ್ನು ವಶಕ್ಕೆ ಪಡೆದು ಪೊಲೀಸರು ಪರಿಶೀಲಿಸಿದರು. ಆದರೆ ಇದುವರೆಗೆ ಯಾರೊಬ್ಬರು ಅಕ್ರಮ ವಲಸಿಗರು ಪತ್ತೆಯಾಗಿಲ್ಲ. ಪರಿಶೀಲನಾ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಕಲಿ ದಾಖಲೆಗಳು ಪತ್ತೆ?
ಅಕ್ರಮ ಬಾಂಗ್ಲಾ ವಲಸಿಗರ ಬಳಿ ಕೆಲ ಸರ್ಕಾರಿ ನಕಲಿ ದಾಖಲೆಗಳು ಸಿಕ್ಕಿದ್ದು, ಈ ದಾಖಲೆಗಳ ಸೃಷ್ಟಿಕರ್ತರಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಠಾಣಾವಾರು ವಿವರ
ಠಾಣೆಪರಿಶೀಲನೆಪತ್ತೆಯಾದವರುಪರಪ್ಪನ ಅಗ್ರಹಾರ3557
ಹುಳಿಮಾವು2190ಬಂಡೆಪಾಳ್ಯ2440
ಬೇಗೂರು3398ಎಲೆಕ್ಟ್ರಾನಿಕ್ ಸಿಟಿ5500
ಹೆಬ್ಬಗೋಡಿ2020ಒಟ್ಟು190915