ಮಂಗಗಳ ಹಾವಳಿ, 15 ಜನರಿಗೆ ಗಾಯ

| Published : Jun 30 2024, 12:49 AM IST

ಸಾರಾಂಶ

ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಮೂರು ದಿನಗಳಲ್ಲಿ ಸುಮಾರು 15 ಜನರಿಗೆ ಮಂಗವೊಂದು ಕಚ್ಚಿ ಗಂಭೀರ ಗಾಯ ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಮೂರು ದಿನಗಳಲ್ಲಿ ಸುಮಾರು 15 ಜನರಿಗೆ ಮಂಗವೊಂದು ಕಚ್ಚಿ ಗಂಭೀರ ಗಾಯ ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.

ಕಳೆದ ಒಂದು ವಾರದಿಂದ ನೀರಲೂಟಿ ಗ್ರಾಮದಲ್ಲಿ ಮಂಗಗಳು ಠಿಕಾಣಿ ಹೂಡಿದ್ದು, ಒಂದು ಮಂಗ ಸಿಕ್ಕಸಿಕ್ಕ ಜನರಿಗೆ ಕಚ್ಚುತ್ತಿದ್ದು, ಈ ಕುರಿತು ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಏಕಾಏಕಿ ಮಂಗ ದಾಳಿ ಮಾಡುತ್ತಿದೆ. ಹೀಗಾಗಿ ಗ್ರಾಮದ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದು, ಕೈಯಲ್ಲಿ ಕೋಲು ಹಿಡಿದುಕೊಂಡು ಹೊರಗೆ ತಿರುಗಾಡುತ್ತಿದ್ದಾರೆ. ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವ ಪರಿಣಾಮವಾಗಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಹಿತದೃಷ್ಟಿಯಿಂದ ಶನಿವಾರ ಶಾಲೆಗೆ ರಜೆ ನೀಡಲಾಗಿತ್ತು.

ದೇವಪ್ಪ ಕಮ್ಮಾರ, ಮಾಬುಸಾಬ ಪಿಂಜಾರ, ಶಂಕ್ರಮ್ಮ ಬೆಣಕಲ್, ಅಡಿವೆಪ್ಪ ಚಲವಾದಿ, ಮಲ್ಲಪ್ಪ ಅಗಸಿಮುಂದಿನ್, ಕರಿಯಪ್ಪ ಕೃಷ್ಣಾಪೂರು, ಹನಮೇಶ ಬಡಿಗೇರ ಸೇರಿದಂತೆ ಅನೇಕ ಜನರ ಮೇಲೆ ಮಂಗ ದಾಳಿ ಮಾಡಿದ್ದು, ಗಾಯಗೊಂಡವರನ್ನು ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಾಸಕ ಭೇಟಿ:

ಶಾಸಕ ದೊಡ್ಡನಗೌಡ ಪಾಟೀಲ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಮಂಗದ ದಾಳಿಗೆ ತುತ್ತಾದ ಜನರ ಆರೋಗ್ಯ ವಿಚಾರಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಜನರ ಮೇಲೆ ದಾಳಿ ಮಾಡುತ್ತಿರುವ ಮಂಗವನ್ನು ಕೂಡಲೇ ಹಿಡಿಯುವಂತೆ ಹಾಗೂ ದಾಳಿಗೊಳಗಾದ ಜನರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಸೂಚನೆ ನೀಡಿದರು.

ಕಳೆದ ಎರಡು ದಿನಗಳ ಹಿಂದೆ ವಿಷಯ ಗೊತ್ತಾಗಿದೆ. ನಮ್ಮ ಇಲಾಖೆ ಸಿಬ್ಬಂದಿ ಹಾಗೂ ಮಂಗ ಹಿಡಿಯುವವರ ಸಹಾಯ ಪಡೆದು ಮಂಗ ಹಿಡಿಯಲು ಮುಂದಾಗಿದ್ದೇವೆ. ಮಂಗ ಕಚ್ಚಿ ಗಾಯಕ್ಕೆ ತುತ್ತಾದವರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುತ್ತದೆ ಎಂದು

ಅರಣ್ಯ ಇಲಾಖೆಯ ಅಧಿಕಾರಿ ರಿಯಾಜ್‌ ತಿಳಿಸಿದ್ದಾರೆ.ಮಂಗ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು:ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಸುಮಾರು 15 ಜನರಿಗೆ ಕಚ್ಚಿ ಗಂಭೀರ ಗಾಯ ಮಾಡಿದ್ದ ಮಂಗವನ್ನು ಕೋತಿ ಹಿಡಿಯುವವರು ಹಾಗೂ ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದು, ನಿರ್ಜನ ಪ್ರದೇಶಕ್ಕೆ ಸಾಗಿಸಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.