ಶಿವರಾತ್ರಿಯಂದು ಮುರ್ಡೇಶ್ವರಕ್ಕೆ 15ನೇ ವರ್ಷದ ಪಾದಯಾತ್ರೆ

| Published : Feb 21 2025, 12:51 AM IST

ಸಾರಾಂಶ

ಫೆ. 26ರಂದು ಮಹಾಶಿವರಾತ್ರಿಯ ಅಂಗವಾಗಿ ಪಂಚ ಶಿವಕ್ಷೇತ್ರಗಳಲ್ಲೊಂದಾದ ಮುರ್ಡೇಶ್ವರಕ್ಕೆ ೧5ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ರಂಜನ್ ಇಂಡೇನ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ ಹೇಳಿದರು.

ಭಟ್ಕಳ: ಫೆ. 26ರಂದು ಮಹಾಶಿವರಾತ್ರಿಯ ಅಂಗವಾಗಿ ಪಂಚ ಶಿವಕ್ಷೇತ್ರಗಳಲ್ಲೊಂದಾದ ಮುರ್ಡೇಶ್ವರಕ್ಕೆ ೧5ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ರಂಜನ್ ಇಂಡೇನ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧4 ವರ್ಷಗಳಿಂದ ಮಹಾಶಿವರಾತ್ರಿ ದಿನದಂದು ಈ ಪಾದಯಾತ್ರೆಯನ್ನು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಯ ಅಡಿಯಲ್ಲಿ ಮಾಡಿಕೊಂಡು ಬರಲಾಗಿದೆ. ಪಟ್ಟಣದ ಚೋಳೇಶ್ವರ ದೇವಸ್ಥಾನದಿಂದ ಮುರುಡೇಶ್ವರ ದೇವಸ್ಥಾನದ ತನಕ ಪಾದಯಾತ್ರೆ ಹಮ್ಮಿಕೊಂಡು ದೇವರ ದರ್ಶನ ಮಾಡುತ್ತಿದ್ದೇವೆ. ಫೆ. 26ರಂದು ಬೆಳಗಿನ ಜಾವ ೪ ಗಂಟೆಗೆ ಚೋಳೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಹೊರಡಲಿದೆ. ಪಾದಯಾತ್ರೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದ ಅವರು, ಈ ಸಂದರ್ಭದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ವರ್ಷವೂ ಪೊಲೀಸ್‌ ಇಲಾಖೆ ಹಾಗೂ ಆರೋಗ್ಯ ಇಲಾಖೆ, ಕ್ರಿಯಾಶೀಲ ಗೆಳೆಯರ ಬಳಗದ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪಾದಯಾತ್ರೆ ನಡೆಸುವ ನಮಗೆ ಸಹಕಾರ ನೀಡಲಿದ್ದಾರೆ. ಈ ಸಲವೂ ದೇವರ ದರ್ಶನ ಮುಗಿಸಿಕೊಂಡು ವಾಪಸ್ ಬರಲು ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೂ ಮುರ್ಡೇಶ್ವರದಲ್ಲಿ ಶಿವನ ದರ್ಶನದೊಂದಿಗೆ ದೇವಸ್ಥಾನದ ವತಿಯಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆ ಹೋಗುವ ಭಕ್ತರಿಗೆ ಮುರುಡೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ತ್ವರಿತ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ದೇವಸ್ಥಾನದ ಆಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಲಾಗಿದೆ. ಪಾದಯಾತ್ರೆಯಲ್ಲಿ ಈ ಸಲವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಯಶಸ್ವಿಗೊಳಿಸುವಂತೆ ಅವರು ಕೋರಿದರು.

ಶಾಂತಾರಾಮ ಭಟ್ಕಳ, ಗುರುಕೃಪಾ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕುಮಾರ ನಾಯ್ಕ, ಕಿರಣ ಚಂದಾವರಕರ, ದೀಪಕ ನಾಯ್ಕ ಮುಂತಾದವರಿದ್ದರು.