ಅಂಜಲಿ ಹಂತಕನಿಗೆ 16 ದಿನ ನ್ಯಾಯಾಂಗ ಬಂಧನ

| Published : Jun 01 2024, 12:47 AM IST

ಸಾರಾಂಶ

ಆರೋಪಿಯನ್ನು ಮೇ 23ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಎಸ್ಪಿ ವೆಂಕಟೇಶ ನೇತೃತ್ವದ ತನಿಖಾ ತಂಡ 8 ದಿನ ಸಿಐಡಿ ಕಸ್ಟಡಿ ಪಡೆದುಕೊಂಡಿತ್ತು.

ಹುಬ್ಬಳ್ಳಿ:

ಇಲ್ಲಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಆರೋಪಿ ಗಿರೀಶ ಅಲಿಯಾಸ್‌ ವಿಶ್ವನಾಥ ಸಾವಂತ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಐಡಿ ತಂಡ ಆರೋಪಿಯನ್ನು ಶುಕ್ರವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಿತು. ಜೂ. 16ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಯನ್ನು ಮೇ 23ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಎಸ್ಪಿ ವೆಂಕಟೇಶ ನೇತೃತ್ವದ ತನಿಖಾ ತಂಡ 8 ದಿನ ಸಿಐಡಿ ಕಸ್ಟಡಿ ಪಡೆದುಕೊಂಡಿತ್ತು. ಇಷ್ಟು ದಿನ ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿದ ಸಿಐಡಿ ತಂಡ, ಶುಕ್ರವಾರ ಇಲ್ಲಿಯ 3ನೇ ಹೆಚ್ಚುವರಿ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ಅಂಜಲಿ ಕೊಲೆಗೈದು ತಲೆ ಮರೆಸಿಕೊಂಡಿದ್ದ ಆರೋಪಿ ಗಿರೀಶ ಸಾವಂತನನ್ನು ಮೇ 17ರಂದು ದಾವಣಗೆರೆಯಲ್ಲಿ ಬಂಧಿಸಲಾಗಿತ್ತು. ಪೊಲೀಸರಿಗೆ ಸೆರೆ ಸಿಕ್ಕ ಸಂದರ್ಭದಲ್ಲಿ ಆತನ ಮುಖ ಹಾಗೂ ತಲೆಗೆ ತೀವ್ರ ತರವಾದ ಗಾಯವಾದ ಹಿನ್ನೆಲೆಯಲ್ಲಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ನಂತರ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳು ಫಿಟ್ನೆಸ್‌ ವರದಿ ನೀಡಿದ್ದರು. ಬಳಿಕ ಮೇ 22ರಂದು ಆರೋಪಿಯನ್ನು ಸಿಐಡಿ ತಂಡ ವಶಕ್ಕೆ ಪಡೆದು, ಇಲ್ಲಿಯ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಇಡೀ ದಿನ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.