ಕಾರಟಗಿಯಲ್ಲಿ ವಿಜೃಂಭಣೆಯಿಂದ ಹುಲಿಗೆಮ್ಮ ದೇವಿ ಜಾತ್ರೆ

| Published : Jun 01 2024, 12:47 AM IST

ಕಾರಟಗಿಯಲ್ಲಿ ವಿಜೃಂಭಣೆಯಿಂದ ಹುಲಿಗೆಮ್ಮ ದೇವಿ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರಟಗಿಯ ಆರಾಧ್ಯ ದೇವತೆ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಕಾರಟಗಿ: ಇಲ್ಲಿನ ಆರಾಧ್ಯ ದೇವತೆ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ಜಾತ್ರೆ ನಿಮಿತ್ತ ಬೆಳಗ್ಗೆ ಹುಲಿಗೆಮ್ಮ ದೇವಿಗೆ ಸುಪ್ರಭಾತ, ಪಂಚಾಮೃತ ಅಭಿಷೇಕ, ದೇವಿಗೆ ಅಷ್ಟೋತ್ತರ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಅಲಂಕಾರ, ಮಹಾ ನೈವೇದ್ಯ, ಮಹಾ ಮಂಗಳಾರತಿ ನಡೆಸಲಾಯಿತು.

ಆನಂತರ ಉತ್ಸವ ಮೂರ್ತಿಯೊಂದಿಗೆ ಡೊಳ್ಳು ಸೇರಿದಂತೆ ವಿವಿಧ ವಾದ್ಯ ಮೇಳಗಳೊಂದಿಗೆ ಕುಂಭ ಕಳಸ ಹೊತ್ತ ಮಹಿಳೆಯರು ಆರ್.ಜಿ. ರಸ್ತೆಯ ಆರ್.ಕೆ. ಮಿಲ್‌ ಬಳಿ ಗಂಗೆಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಬರಲಾಯಿತು. ಕುಂಭ ಮೆರವಣಿಗೆಯ ವೇಳೆ ಡೊಳ್ಳು ಕುಣಿತ ನೋಡುಗರನ್ನು ಕಣ್ಮನ ಸೆಳೆಯುತ್ತಿತ್ತು.

ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಮಹಿಳೆಯರು, ಮಕ್ಕಳು ದೇವಿಗೆ ಕಾಯಿ ಕರ್ಪೂರ ನೈವೇದ್ಯ ಸಮರ್ಪಿಸಿದರು. ದೇಗುಲದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಜಾತ್ರೆ ನಿಮಿತ್ತ ಗುರುವಾರ ಸಂಜೆಯೇ ದೇವಸ್ಥಾನದಲ್ಲಿ ನೇತೃತ್ವದಲ್ಲಿ ನವಗ್ರಹ ಶಾಂತಿ, ಗಣಪತಿ ಹೋಮ-ಹವನಾದಿಗಳು, ಅಷ್ಟದಿಕ್ಪಾಲಕ ಪೂಜಾ ಹಾಗೂ ಜೋಗತಿಯರಿಗೆ ಹಡ್ಡಲಿಗೆ ತುಂಬುವ ಕಾರ್ಯಕ್ರಮಗಳು ನಡೆದವು. ಗುರುವಾರ ಮತ್ತು ಶುಕ್ರವಾರದ ವಿಧಿ-ವಿಧಾನದ ಪೂಜೆಗಳು, ಹೋಮಗಳು ಮತ್ತು ಪಲ್ಲಕ್ಕಿ, ಕುಂಭ ಉತ್ಸವಗಳೆಲ್ಲ ಆಚಾರ್ಯ ಸಂತೋಷ್ ಆಚಾರ್ ನೇತೃತ್ವದಲ್ಲಿ ಸಾಂಗೋಪವಾಗಿ ನಡೆದವು.

ಪಟ್ಟಣದ ನಿವಾಸಿಗಳು ದೇವಸ್ಥಾನಕ್ಕೆ ತೆರಳಿ ಹುಲಿಗೆಮ್ಮ ದೇವಿ ದರ್ಶನ ಪಡೆದು ಭಕ್ತಿ ಅರ್ಪಿಸಿದರು.

ಹುಲಿಗೆಮ್ಮ ದೇವಿ ದೇವಸ್ಥಾನ ಸಮಿತಿ ಸದಸ್ಯರು, ಶ್ರೀ ಕನಕದಾಸ ಯುವಕ ಸಂಘದ ಪದಾಧಿಕಾರಿಗಳು ಮತ್ತು ಹುಲಿಗೆಮ್ಮ ದೇವಿ ಮಹಿಳಾ ಸಂಘದ ಪದಾಧಿಕಾರಿಗಳು ಇದ್ದರು.