ಕಿಡಿಗೇಡಿಗಳು ಕರಿಯಪ್ಪರ ಮನೆ ಹಿತ್ತಲಿನಲ್ಲಿ ಇರಿಸಿದ್ದ ಕುಡಿಯುವ ನೀರಿನ ಬಕೆಟ್ ಗೆ ವಿಷ ಹಾಕಿದ್ದು, ಕುರಿಗಳು ಎಂದಿನಂತೆ ಬಕೆಟ್ ನಲ್ಲಿದ್ದ ನೀರನ್ನು ಕುಡಿದ ಕೆಲ ಹೊತ್ತಿನಲ್ಲಿಯೇ ಒದ್ದಾಡಿ ಸಾವನ್ನಪ್ಪಿವೆ ಎನ್ನಲಾಗಿದೆ.
ಮಳವಳ್ಳಿ: ತಾಲೂಕಿನ ಚನ್ನಪಳ್ಳೆಕೊಪ್ಪಲು ಗ್ರಾಮದಲ್ಲಿ ಸೋಮವಾರ ವಿಷ ಪ್ರಾಶನದಿಂದ 16 ಕುರಿಗಳು ಸಾವನ್ನಪ್ಪಿದ್ದು, ಕಿಡಿಗೇಡಿಗಳ ಕೃತ್ಯದ ಶಂಕೆ ವ್ಯಕ್ತವಾಗಿದೆ. ಗ್ರಾಮದ ಸಿದ್ದಯ್ಯನವರ ಪುತ್ರ ರೈತ ಕರಿಯಪ್ಪರಿಗೆ ಸೇರಿದ 15 ಕುರಿ ಹಾಗೂ ಒಂದು ಟಗರು ವಿಷ ಪ್ರಾಶನದಿಂದ ಸಾವನ್ನಪ್ಪಿವೆ. ಕಿಡಿಗೇಡಿಗಳು ಕರಿಯಪ್ಪರ ಮನೆ ಹಿತ್ತಲಿನಲ್ಲಿ ಇರಿಸಿದ್ದ ಕುಡಿಯುವ ನೀರಿನ ಬಕೆಟ್ ಗೆ ವಿಷ ಹಾಕಿದ್ದು, ಕುರಿಗಳು ಎಂದಿನಂತೆ ಬಕೆಟ್ ನಲ್ಲಿದ್ದ ನೀರನ್ನು ಕುಡಿದ ಕೆಲ ಹೊತ್ತಿನಲ್ಲಿಯೇ ಒದ್ದಾಡಿ ಸಾವನ್ನಪ್ಪಿವೆ ಎನ್ನಲಾಗಿದೆ. ತಾವು ಸಾಕಿದ ಕುರಿಗಳು ಸಾಯುತ್ತಿರುವುದನ್ನು ನೋಡಿ ಕರಿಯಪ್ಪರ ಕುಟುಂಬ ದಿಕ್ಕೆ ತೋಚದಂತಾಗಿ ಕಣ್ಣೀರಿಟ್ಟರು. ಲಕ್ಷಾಂತರ ರು .ಮೌಲ್ಯದ ಕುರಿಗಳು ಸಾವು ಕಂಡ ರೈತ ಕರಿಯಪ್ಪ ಸೇರಿದಂತೆ ಗ್ರಾಮಸ್ಥರು ಕೃತ್ಯ ನಡೆಸಿದ ಕಿಡಿಗೇಡಿಗಳ ವಿರುದ್ಧ ಶಾಪ ಹಾಕುತ್ತಾ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಹಾಗೂ ಬಡ ಕುಟುಂಬದ ನೆರವಿಗೆ ಜಿಲ್ಲಾಡಳಿತ ಮುಂದಾಗಿ ಸಂಕಷ್ಟದಲ್ಲಿ ಇರುವ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿದ್ದಾರೆ.