ಕನ್ನಡಪ್ರಭ ವಾರ್ತೆ ಭಟ್ಕಳ

ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ರಂಜನ್ ಇಂಡೇನ್ ಗ್ಯಾಸ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತರಾಮ ನೇತೃತ್ವದಲ್ಲಿ 16 ವರ್ಷಗಳಿಂದ ಚೋಳೇಶ್ವರದಿಂದ-ಮುರುಡೇಶ್ವರ ಪಾದಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.

ಭಾನುವಾರ ಬೆಳಗಿನ ಜಾವ ೪ ಗಂಟೆಗೆ ಪಟ್ಟಣದ ಚೊಳೇಶ್ವರದ ದೇವಸ್ಥಾನದಿಂದ ಪಾದಯಾತ್ರಿಗಳು ಶಿವನ ನಾಮಸ್ಮರಣೆ ಮಾಡುತ್ತಾ ಮುಖ್ಯ ರಸ್ತೆಯ ಮಾರ್ಗವಾಗಿ ಹೆದ್ದಾರಿ ಮೂಲಕ ೧೮ ಕಿಮೀ ದೂರ ಮುರ್ಡೇಶ್ವರಕ್ಕೆ ತೆರಳಿ ದೇವರ ದರ್ಶನ ಪಡೆದರು. ಹಲವು ಭಕ್ತರು ಬೈಂದೂರು, ಶಿರೂರು ಸೇರಿದಂತೆ ಭಟ್ಕಳದಿಂದಲೂ ಕೂಡಾ ತಡರಾತ್ರಿಯೇ ಪಾದಯಾತ್ರೆ ಆರಂಭಿಸಿ ದೇವರ ಬಾಗಿಲು ತೆಗೆಯುವ ಸಮಯಕ್ಕಾಗಲೇ ಮುರುಡೇಶ್ವರ ತಲುಪಿ ದೇವರ ದರ್ಶನ ಪಡೆದಿದ್ದು ವಿಶೇಷ. ಪಾದಯಾತ್ರೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು, ಮಹಿಳೆಯರು ಹಾಗೂ ವೃದ್ದರು ಭಕ್ತಿಯಿಂದ ಭಾಗವಹಿಸಿರುವುದು ವಿಶೇಷವಾಗಿತ್ತು. ಪಾದಯಾತ್ರೆಯ ಮೂಲಕ ಬರುವ ಭಕ್ತಾದಿಗಳಿಗೆ ಭಟ್ಕಳದ ಕ್ರೀಯಾಶೀಲ ಗೆಳೆಯರ ಬಳಗದ ವತಿಯಿಂದ ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಈ ಸಲವೂ ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕಳೆದ ೧6 ವರ್ಷಗಳಿಂದ ಭಟ್ಕಳದಿಂದ ಮುರುಡೇಶ್ವರಕ್ಕೆ ಪಾದಯಾತ್ರೆ ಆಯೋಜಿಸುತ್ತಿರುವ ರಂಜನ್ ಇಂಡೇನ್ ಏಜೆನ್ಸಿಯ ಮಾಲಕಿ ಶಿವಾನಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮತ್ತು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದು, ಮುಂದಿನ ವರ್ಷವೂ ಸಹ ಇದೇ ರೀತಿಯ ಸಹಕಾರ ನೀಡುವಂತೆ ಕೋರಿದ್ದಾರೆ.

ಭಟ್ಕಳ ತಹಸೀಲ್ದಾರ, ಕಂದಾಯ ಸಿಬ್ಬಂದಿಗಳಿಂದ ಮುರುಡೇಶ್ವರಕ್ಕೆ ಪಾದಯಾತ್ರೆ

ಮಹಾಶಿವರಾತ್ರಿ ಪ್ರಯುಕ್ತ ಭಟ್ಕಳ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭಾನುವಾರ ಬೆಳಗಿನ ಜಾವ ಶ್ರೀ ಮುರುಡೇಶ್ವರಕ್ಕೆ ಪಾದಯಾತ್ರೆ ನಡೆಸಿ ಮುರುಡೇಶ್ವರನ ದರ್ಶನ ಪಡೆದರು.


ಬೆಳಗಿನ ಜಾವ 4 ಗಂಟೆಗೆ ಪಟ್ಟಣದಿಂದ ಪಾದಯಾತ್ರೆಯ ಮೂಲಕ ಹೊರಟ ಇವರು ಬೆಳಗ್ಗೆ 7 ಗಂಟೆಗೆ ಮುರುಡೇಶ್ವರ ತಲುಪಿ ದೇವರ ದರ್ಶನ ಪಡೆದರು. ಕಂದಾಯ ಅಧಿಕಾರಿಗಳ ಈ ಧಾರ್ಮಿಕ ಹೆಜ್ಜೆಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು. ಈ ಕುರಿತು ಮಾತನಾಡಿದ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಶಿವರಾತ್ರಿ ಪ್ರಯುಕ್ತ ಮೊದಲ ಬಾರಿಗೆ ಸಿಬ್ಬಂದಿಗಳೊಂದಿಗೆ ಪಾದಯಾತ್ರೆ ಬಂದು ದರ್ಶನ ಪಡೆದಿದ್ದೇನೆ. ಮುರುಡೇಶ್ವರನು ಎಲ್ಲರಿಗೂ ಆಯುಷ್ಯ, ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು.