ಹುಲಿಗೆಮ್ಮ ದೇವಸ್ಥಾನಕ್ಕೆ ₹17 ಕೋಟಿ ಆದಾಯ

| Published : Apr 18 2025, 12:31 AM IST / Updated: Apr 18 2025, 12:32 AM IST

ಸಾರಾಂಶ

ಕೊರೋನಾ ಸಂದರ್ಭದಲ್ಲಿ ದೇವಸ್ಥಾನದ ಆದಾಯ ಇಳಿಕೆಯಾಗಿತ್ತು. ಬಳಿಕ ವರ್ಷದಿಂದ ವರ್ಷಕ್ಕೆ ಆದಾಯವು ಏರುಗತಿಯಲ್ಲಿ ಸಾಗಿದೆ. ಇದರೊಂದಿಗೆ ಇದೀಗ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

ಎಸ್. ನಾರಾಯಣ

ಮುನಿರಾಬಾದ್:

ಹುಲಿಗಿಯ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಹುಲಿಗೆಮ್ಮ ದೇವಸ್ಥಾನದ ಆದಾಯವು 2024-25ರಲ್ಲಿ ₹ 17 ಕೋಟಿ ದಾಟಿದೆ. ದೇವಸ್ಥಾನದ 800 ವರ್ಷದ ಇತಿಹಾಸದಲ್ಲಿ ಇದು ದೇವಸ್ಥಾನಕ್ಕೆ ಹರಿದು ಬಂದ ಅತ್ಯಧಿಕ ಪ್ರಮಾಣದ ದಾಖಲೆಯ ಆದಾಯವಾಗಿದೆ.

ಆದಾಯ ಗಳಿಕೆಯಲ್ಲಿ ರಾಜ್ಯದ ಟಾಪ್ 10 ದೇವಸ್ಥಾನಗಳ ಪೈಕಿ ಹುಲಿಗೆಮ್ಮ ದೇವಸ್ಥಾನ 5ನೇ ಸ್ಥಾನ ಪಡೆದಿದೆ. ಕೊರೋನಾ ಬಳಿಕ ಆದಾಯವು ಏರುಗತಿಯಲ್ಲಿ ಸಾಗುತ್ತಿದ್ದು ಮುಂದಿನ ವರ್ಷ ₹20 ಕೋಟಿ ದಾಟಿಲಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ದೇವಸ್ಥಾನಕ್ಕೆ ಹುಂಡಿಯಿಂದ ₹ 7,83,04,770 ಕೋಟಿ, ಮಳಿಗೆಗಳ ಗುತ್ತಿಗೆಯಿಂದ ₹ 2,41,07,189 ಕೋಟಿ, ಅಮ್ಮನವರಿಗೆ ಭಕ್ತರು ನೀಡಿದ ವಿವಿಧ ಸೇವೆಗಳಿಂದ ₹ 1,15,63,278 ಕೋಟಿ, ವಿವಿಧ ಮೂಲಗಳ ಆದಾಯ ಸೇರಿ ಒಟ್ಟು ₹ 17,05,53,507 ಕೋಟಿ ಆದಾಯ ಬಂದಿದೆ ಎಂದು ದೇವಸ್ಥಾನದ ಕಾರ್ಯದರ್ಶಿ ಪ್ರಕಾಶ ರಾವ್‌ ತಿಳಿಸಿದ್ದಾರೆ.

ಲಡ್ಡು ಪ್ರಸಾದ, ತೀರ್ಥ ಬಾಟಲಿಗಳ ಮಾರಾಟದಿಂದ ₹ 1,21,84,970 ಕೋಟಿ, ದವಸ-ಧಾನ್ಯಗಳ ಬಹಿರಂಗ ಹರಾಜಿನಿಂದ ₹ 19,31,000 ಲಕ್ಷ, ವಸತಿ ನಿಲಯ, ಕಾಟೇಜ್‌ಗಳ ಬಾಡಿಗೆಯಿಂದ ₹ 81,21,200 ಲಕ್ಷ, ಸೀರೆ ಮಾರಾಟದಿಂದ ₹ 36,21,660 ಲಕ್ಷ, ಸೀರೆಗಳ ಹರಾಜಿನಿಂದ ₹ 25,50,000 ಲಕ್ಷ, ಉಡಿ ಸಾಮಾನು ಮಾರಾಟದಿಂದ ₹ 15,34,495 ಲಕ್ಷ, ಆಶೀರ್ವಾದ ಹಾಗೂ ರಿಯಾಯಿತಿ ದರದ ಟೆಂಗಿನ ಕಾಯಿ ಮಾರಾಟದಿಂದ ₹ 41,39,037 ಲಕ್ಷ ಆದಾಯ ಬಂದಿದೆ ಎಂದು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

2000ರಿಂದ ದೇವಸ್ಥಾನಕ್ಕೆ ಸರ್ಕಾರವು ಕಾರ್ಯನಿರ್ವಾಹಕ ಅಧಿಕಾರಿಗಳ ನೇಮಿಸಿದ ನಂತರ ದೇವಸ್ಥಾನದ ಆದಾಯದಲ್ಲಿ ಭಾರಿ ಏರಿಕೆ ಆಗಿದೆ. ಕೆಲವು ವರ್ಷಗಳ ಹಿಂದೇ ದೇವಸ್ಥಾನದ ಆದಾಯ ₹5 ಕೋಟಿ ಇತ್ತು. ನಂತರ ₹10 ಕೋಟಿಗೆ ತಲುಪಿತು. ಈಗ ₹17 ಕೋಟಿ ದಾಟಿದೆ. ಶೀಘ್ರವೇ ದೇವಸ್ಥಾನದ ಆದಾಯವು ₹20 ಕೋಟಿ ದಾಟುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಕೊರೋನಾ ಬಳಿಕ ದುಪ್ಪಟ್ಟು:

ಕೊರೋನಾ ಸಂದರ್ಭದಲ್ಲಿ ದೇವಸ್ಥಾನದ ಆದಾಯ ಇಳಿಕೆಯಾಗಿತ್ತು. ಬಳಿಕ ವರ್ಷದಿಂದ ವರ್ಷಕ್ಕೆ ಆದಾಯವು ಏರುಗತಿಯಲ್ಲಿ ಸಾಗಿದೆ. ಇದರೊಂದಿಗೆ ಇದೀಗ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದು ಸಹ ದೇವಸ್ಥಾನದ ಆದಾಯ ಹೆಚ್ಚಳಕ್ಕೆ ಮೂಲ ಕಾರಣವೆಂದು ಹೇಳಲಾಗುತ್ತಿದೆ. 2022-23ರಲ್ಲಿ ಹುಣ್ಣಿಮೆ ದಿನ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಶ್ರೀಕ್ಷೇತ್ರಕ್ಕೆ 3ರಿಂದ 4 ಲಕ್ಷದ ವರೆಗೆ ಭಕ್ತರು ಆಗಮಿಸುತ್ತಿದ್ದರು. ಇದೀಗ ಭಕ್ತರ ಸಂಖ್ಯೆ 7 ಲಕ್ಷಕ್ಕೆ ಏರಿಕೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದು ಹಾಗೂ ದೇವರಿಗೆ ಹರಕೆ ರೂಪದಲ್ಲಿ ವಿವಿಧ ವಸ್ತು ನೀಡುವುದು, ವಸತಿ ನಿಲಯದಲ್ಲಿ ಉಳಿದುಕೊಳ್ಳುವುದರಿಂದ ಆದಾಯ ಹೆಚ್ಚಳವಾಗಿದೆ ಎಂದು ದೇವಸ್ಥಾನದ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.