ಬ್ಯಾಡಗಿ ಮಾರ್ಕೆಟ್‌ಗೆ ಬಂತು 18.38 ಲಕ್ಷ ಕ್ವಿಂಟಲ್ ಮೆಣಸಿನಕಾಯಿ

| Published : Apr 28 2025, 12:50 AM IST

ಬ್ಯಾಡಗಿ ಮಾರ್ಕೆಟ್‌ಗೆ ಬಂತು 18.38 ಲಕ್ಷ ಕ್ವಿಂಟಲ್ ಮೆಣಸಿನಕಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷ (2023- 24) ಒಟ್ಟು 17.9 ಲಕ್ಷ ಕ್ವಿಂಟಲ್ ಮೆಣಸಿನಕಾಯಿ ಆವಕವಾಗಿದ್ದರೆ, ಪ್ರಸಕ್ತ (2024-25) ವರ್ಷ 18.38 ಲಕ್ಷ ಕ್ವಿಂಟಲ್ ಆವಕವಾಗಿದೆ.

ಶಿವಾನಂದ ಮಲ್ಲನಗೌಡ್ರಬ್ಯಾಡಗಿ: ಬ್ಯಾಡಗಿ ಮಾರುಕಟ್ಟೆಗೆ 18.38 ಲಕ್ಷ ಕ್ವಿಂಟಲ್‌ ಮೆಣಸಿನಕಾಯಿ ಆವಕವಾಗಿದೆ.

ಕಳೆದ ವರ್ಷ (2023- 24) ಒಟ್ಟು 17.9 ಲಕ್ಷ ಕ್ವಿಂಟಲ್ ಮೆಣಸಿನಕಾಯಿ ಆವಕವಾಗಿದ್ದರೆ, ಪ್ರಸಕ್ತ (2024-25) ವರ್ಷ 18.38 ಲಕ್ಷ ಕ್ವಿಂಟಲ್ ಆವಕವಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಬೆಳೆದ ಮೆಣಸಿನಕಾಯಿ ಇನ್ನೂ ಕೂಡ ಮಾರುಕಟ್ಟೆಗೆ (ಅಂಕಿ ಅಂಶಗಳು 01-04-2024ರಿಂದ 31-03-2025ರ ವರೆಗೆ ಮಾತ್ರ) ಆಗಮಿಸುತ್ತಿದ್ದು, ಮಾರ್ಚ್ ಬಳಿಕವೇ ಸುಮಾರು 5 ಲಕ್ಷಕ್ಕೂ (ಸುಮಾರು 17 ಸಾವಿರ ಕ್ವಿಂಟಲ್) ಅಧಿಕ ಚೀಲಗಳು ಮಾರುಕಟ್ಟೆಗೆ ಬಂದಿದೆ.

ಕಳೆದ ವರ್ಷ ರೈತರು ನಡೆಸಿದ ಗಲಭೆ ಹಾಗೂ ಪ್ರಸಕ್ತ ವರ್ಷದ ಅಸಮರ್ಪಕ ಮಳೆಯಿಂದ ಬ್ಯಾಡಗಿ ಮಾರುಕಟ್ಟೆಗೆ ಬರುವ ದಿನಗಳಲ್ಲಿ ಭವಿಷ್ಯವಿಲ್ಲ ಎಲ್ಲವೂ ಮುಗಿದೇ ಹೋಯಿತು ಎಂಬ ತಿರಸ್ಕಾರದ ಮಾತುಗಳ ನಡುವೆಯೂ ಪ್ರಸಕ್ತ ವರ್ಷ ಅಧಿಕ ಮೆಣಸಿನಕಾಯಿ ಆವಕವಾಗುವ ಮೂಲಕ ಮಾರುಕಟ್ಟೆ ವಿರುದ್ಧ ನಕಾರಾತ್ಮಕ ಹೇಳಿಕೆಗಳಿಗೆ ಉತ್ತರ ನೀಡಿದೆ.

ವಹಿವಾಟಿನಲ್ಲಿ ಇಳಿಕೆ: ಕಳೆದ ವರ್ಷ ಅಂದರೆ 2023-24ರಲ್ಲಿ ₹3187 ಕೋಟಿ ವಹಿವಾಟು ಆಗಿದೆ. ₹19.1 ಕೋಟಿ ಮಾರುಕಟ್ಟೆ ಶುಲ್ಕ ಸಂಗ್ರಹವಾಗಿತ್ತು. ಆದರೆ ಪ್ರಸಕ್ತ ವರ್ಷ ದರ ಕುಸಿತದ ಪರಿಣಾಮವಾಗಿ ಕೇವಲ ₹2067 ಕೋಟಿ ವಹಿವಾಟು ನಡೆದಿದ್ದು, ₹12.4 ಕೋಟಿ ಮಾರುಕಟ್ಟೆ ಶುಲ್ಕ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ₹1120 ಕೋಟಿ ಅಂದರೆ ಶೇ. 35ರಷ್ಟು ವಹಿವಾಟಿನಲ್ಲಿ ಇಳಿಕೆ ಕಂಡುಬಂದಿದೆ.

ಮುಂಚೂಣಿಯಲ್ಲಿ ಬ್ಯಾಡಗಿ: ಕಳೆದ ವರ್ಷ ಒಟ್ಟು 68.36 ಲಕ್ಷ ಚೀಲ ಆವಕವಾಗಿದ್ದರೆ, ಅಸಮರ್ಪಕ ಮಳೆ, ರೈತರ ಗಲಭೆ ಇನ್ನಿತರ ಕಾರಣಗಳ ಹೊರತಾಗಿಯೂ ಪ್ರಸಕ್ತ ವರ್ಷ ಒಟ್ಟು 72.72 ಲಕ್ಷ ಚೀಲಗಳು ಮಾರುಕಟ್ಟೆಗೆ ಆವಕಾಗಿದೆ. ಇದನ್ನು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 4.36 ಲಕ್ಷ (ಶೇ.10 ರಷ್ಟು) ಚೀಲಗಳು ಹೆಚ್ಚಾಗಿದ್ದು, ಇದರಿಂದ ಅಂತಾರಾಷ್ಟ್ರೀಯ ವಲಯದಲ್ಲಿ ಬ್ಯಾಡಗಿ ಮಾರುಕಟ್ಟೆ ತನ್ನ ಸ್ಥಾನವನ್ನು ಮತ್ತೊಮ್ಮೆ ಭದ್ರಪಡಿಸಿಕೊಂಡಿದೆ ಎನ್ನಬಹುದು.

ಸೀಡ್ ವೆರೈಟಿ ಹೆಚ್ಚು: ಪ್ರಸಕ್ತ ವರ್ಷ ಬ್ಯಾಡಗಿ ಮೂಲತಳಿ (ಕಡ್ಡಿ ಮತ್ತು ಡಬ್ಬಿ) ಮೆಣಸಿನಕಾಯಿಗಿಂತ ಹೈಬ್ರಿಡ್ ತಳಿ (ಸೀಡ್ ವೆರೈಟಿ) ಮೆಣಸಿನಕಾಯಿಯನ್ನೇ ರೈತರು ಹೆಚ್ಚಾಗಿ ಬೆಳೆದಿದ್ದಾರೆ. ಕರ್ನಾಟಕದ ಬಳ್ಳಾರಿ, ಧಾರವಾಡ, ಗದಗ, ರಾಯಚೂರು, ಕಲಬುರಗಿ ಸೇರಿದಂತೆ ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶದ ರೈತರು ಬೆಳೆದ ಮೆಣಸಿನಕಾಯಿ ಇಲ್ಲಿನ ಮಾರುಕಟ್ಟೆಗೆ ಬರುತ್ತಿದ್ದು, ಕೇವಲ ಶೇ. 10ಕ್ಕಿಂತ ಕಡಿಮೆ ಲೋಕಲ್ ಮೆಣಸಿನಕಾಯಿ ಮಾರಾಟವಾಗಿದೆ.

ಓಲಿಯೋರಿಸಿನ್ ನಿರಾಸಕ್ತಿ: ಒಟ್ಟು ಬೆಳೆದಂತಹ ಶೇ. 70ರಷ್ಟು ಮೆಣಸಿನಕಾಯಿ ಖರೀದಿಸುತ್ತಿದ್ದ ಓಲಿಯೋರಿಸನ್ (ಮೆಣಸಿನಕಾಯಿಯಿಂದ ಎಣ್ಣೆ ತೆಗೆಯುವ ಫ್ಯಾಕ್ಟರಿ) ಉದ್ಯಮವು ದರ ಸಮರದಿಂದ ಕಳೆದ ವರ್ಷ ಮೆಣಸಿನಕಾಯಿ ಖರೀದಿಗೆ ಮಾರುಕಟ್ಟೆಗೆ ಇಳಿಯಲಿಲ್ಲ. ಇದರಿಂದ ಕಳೆದ ವರ್ಷವೇ ಸುಮಾರು 34 ಲಕ್ಷ ಚೀಲ ಮಾರಾಟವಾಗದೇ ಹಾಗೆ ಉಳಿದಿದ್ದು, ಸುಮಾರು ₹400 ಕೋಟಿಗೂ ಅಧಿಕ ನಷ್ಟವನ್ನು ಮಾರುಕಟ್ಟೆ ವರ್ತಕರು ಅನುಭವಿಸಬೇಕಾಯಿತು. ಪ್ರಸಕ್ತ ವರ್ಷವೂ ಓಲಿಯೋರಿಸಿನ್ ಫ್ಯಾಕ್ಟರಿಗಳು ಮೆಣಸಿನಕಾಯಿ ಖರೀದಿಯಲ್ಲಿ ಅಷ್ಟೊಂದು ಆಸಕ್ತಿ ತೋರಿಲ್ಲ. ಹೀಗಾಗಿ ಪ್ರಸಕ್ತ ವರ್ಷವೂ ಬೆಳೆದ ಮೆಣಸಿನಕಾಯಿ ಉಳಿಯುವ ಸಾಧ್ಯತೆ ದಟ್ಟವಾಗಿದೆ.

ಕೈಹಿಡಿದ ಮಸಾಲೆ: ಪ್ರಸಕ್ತ ದಿನಗಳಲ್ಲಿ ಮೆಣಸಿನಕಾಯಿಗೆ ಸಾಂಬಾರ ಹಾಗೂ ಮಸಾಲ ಕಂಪನಿಗಳೇ ಜೀವಾಳವಾಗಿವೆ. ಬ್ಯಾಡಗಿ ಮಾರುಕಟ್ಟೆ ಸುತ್ತಲೂ ತಲೆ ಎತ್ತಿರುವ ಕೋಲ್ಡ್ ಸ್ಟೋರೇಜ್‌ಗಳಿಂದ ಸುಮಾರು 40 ಲಕ್ಷ ಚೀಲ ಕೆಡದಂತೆ ಸಂಗ್ರಹಿಸುವ ಜತೆಗೆ ವರ್ಷವಿಡೀ ಬಳಕೆಗೆ ಮೆಣಸಿನಕಾಯಿ ಸಿಗಲಾರಂಭಿಸಿದೆ. ಇದರಿಂದ ಪ್ರಸಿದ್ದ ಮಸಾಲ ಕಂಪನಿಗಳು ಮೆಣಸಿನಕಾಯಿ ಖರೀದಿಗೆ ಮುಂದಾಗಿದ್ದು, ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ವಹಿವಾಟು ತೃಪ್ತಿ: ಸರ್ಕಾರಕ್ಕೆ ನೂರಾರು ಕೋಟಿ ಆದಾಯ ನೀಡುತ್ತಿರುವ ಬ್ಯಾಡಗಿ ಮಾರುಕಟ್ಟೆ ರೈತರ ಜೀವನಾಡಿ. ಪ್ರಸಕ್ತ ವರ್ಷ ಶುಲ್ಕ ಸಂಗ್ರಹದಲ್ಲಿ ಹಿಂದೆ ಬಿದ್ದರೂ ರೈತರಿಗೆ ಸ್ಪರ್ಧಾತ್ಮಕ ದರ ನೀಡುವಲ್ಲಿ ಮೆಣಸಿನಕಾಯಿ ಖರೀದಿಸುವಲ್ಲಿ ಇಲ್ಲಿನ ವರ್ತಕರು ಹಿಂದೆ ಬಿದ್ದಿಲ್ಲ. ವಹಿವಾಟು ತೃಪ್ತಿ ತಂದಿದೆ ಎಂದು ಎಪಿಎಂಸಿ ಯಾರ್ಡ್‌ನ ಆಡಳಿತಾಧಿಕಾರಿ(ಸರ್ಕಾರದ ಪರವಾಗಿ) ಎಸ್.ಜಿ. ನ್ಯಾಮಗೌಡ್ರ ತಿಳಿಸಿದರು.

ಶೇ. 70ರಷ್ಟು ಮೆಣಸಿನಕಾಯಿ ಖರೀದಿಸುತ್ತಿದ್ದ ಓಲಿಯೋರಿಸನ್ ಹಿಂದೆ ಸರಿದಿದ್ದರೂ ಇಲ್ಲಿನ ವರ್ತಕರು ಮಾತ್ರ ಹಿಂದೆ ಸರಿದಿಲ್ಲ. ₹500 ಕೋಟಿ ನಷ್ಟದಲ್ಲಿದ್ದರೂ ರೈತರಿಗೆ ಸ್ಪರ್ಧಾತ್ಮಕ ದರ (ಇ- ಟೆಂಡರ್), ತೂಕದಲ್ಲಿ ಪಾರದರ್ಶಕತೆ, ಮಾರಾಟದ ದಿನವೇ ಹಣ.. ಇನ್ನಿತರ ಸೌಲಭ್ಯ ಕಲ್ಪಿಸುವ ಮೂಲಕ ರೈತಸ್ನೇಹಿ ಮಾರುಕಟ್ಟೆಯಾಗಿದೆ ಎಂದು ಮೆಣಸಿನಕಾಯಿ ವರ್ತಕರ ಸಂಘ ಅಧ್ಯಕ್ಷ ಸುರೇಶಗೌಡ ಪಾಟೀಲ ತಿಳಿಸಿದರು.