ಅಪ್ಪನ ಕನಸು ನನಸಾಗಿಸಿದ ಭೂಮಿಕಾಗೆ ಐಎಎಸ್ ಆಗುವ ಆಸೆ

| Published : Jan 19 2025, 02:17 AM IST

ಸಾರಾಂಶ

ಮಾನಸಗಂಗೋತ್ರಿ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಯಾದ ಭೂಮಿಕಾ,

ಬಿ. ಶೇಖರ್ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ನನ್ನ ಮಗಳಿಗೆ ಸನ್ಮಾನ ಮಾಡಬೇಕು. ಆ ಮಟ್ಟಿಗೆ ನೀನು ಓದಬೇಕು, ಬೆಳೆಯಬೇಕು ಎಂದು ನಮ್ಮ ಅಪ್ಪ ಕನಸು ಕಂಡಿದ್ದರು. ಈಗ ಅವರ ಕನಸನ್ನು ನನಸು ಮಾಡಿದ್ದೇನೆ. ಆದರೆ, ಅದನ್ನು ನೋಡಲು ಅಪ್ಪ ಇಲ್ಲ. ಈಗಾಗಲೇ ಕೆ- ಸೆಟ್ ಪರೀಕ್ಷೆ ಕ್ಲಿಯರ್ ಮಾಡಿದ್ದೇನೆ. ಮುಂದೆ ಪಿಎಚ್.ಡಿ ಮಾಡುವುದರೊಂದಿಗೆ ಐಎಎಸ್ ಮಾಡಬೇಕೆಂಬ ಆಸೆ ಇದೆ.- ಇದು ಮೈಸೂರು ವಿವಿ 105ನೇ ಘಟಿಕೋತ್ಸವದಲ್ಲಿ ಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ 18 ಚಿನ್ನದ ಪದಕ, 4 ನಗದು ಬಹುಮಾನ ಪಡೆದ ಎಂ.ಆರ್. ಭೂಮಿಕಾ ಅವರ ಮನದಾಳದ ಮಾತುಗಳಿವು.ಮಾನಸಗಂಗೋತ್ರಿ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಯಾದ ಭೂಮಿಕಾ, ಮೈಸೂರಿನ ಹೆಬ್ಬಾಳು 2ನೇ ಹಂತದ ನಿವಾಸಿ ಲೇ.ಬಿ.ಎನ್. ರವಿಕುಮಾರ್ ಮತ್ತು ಎಚ್.ಎ. ನೇತ್ರಾವತಿ ಅವರ ಪುತ್ರಿ. ಇವರಿಗೆ ಸಹೋದರ ಆಕಾಶ್ ಇದ್ದಾರೆ. ಸದ್ಯ ಮನೆಯ ಜವಾಬ್ದಾರಿ ಹೊತ್ತಿರುವ ಭೂಮಿಕಾ, ಕೆ- ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಹಾಯಕ ಪ್ರಾಧ್ಯಾಪಕರಾಗುವ ಅರ್ಹತೆ ಹೊಂದಿದ್ದಾರೆ. ಅಲ್ಲದೆ, ರಸಾಯನಶಾಸ್ತ್ರ ಪಿಎಚ್.ಡಿ ಮಾಡುವುದರ ಜೊತೆಯಲ್ಲಿ ಐಎಎಸ್ ಓದುವ ಆಸೆಯನ್ನು ಸಹ ಹೊಂದಿದ್ದಾರೆ.----- 16 ಚಿನ್ನದ ಪದಕ ಪಡೆದ ಕಾವ್ಯಶ್ರೀ

ಫೋಟೋ- 18ಎಂವೈಎಸ್5

----ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿ ಎಂ.ಟೆಕ್ ಅರ್ಬನ್ ಅಂಡ್ ರೀಜನಲ್ ಪ್ಲಾನಿಂಗ್ ವಿಷಯದಲ್ಲಿ 16 ಚಿನ್ನದ ಪದಕಗಳನ್ನು ಮಂಗಳೂರು ಮೂಲದ ಯು.ಎ. ಕಾವ್ಯಶ್ರೀ ಪಡೆಯುವ ಮೂಲಕ ಗಮನ ಸೆಳೆದರು.ಪದವಿಯಲ್ಲೂ (ನಿಟ್ಟೆ ವಿವಿ) ಚಿನ್ನದ ಪದಕ ಪಡೆದಿದ್ದ ಕಾವ್ಯಶ್ರೀ ಇದೀಗ ಸ್ನಾತಕೋತ್ತರ ಪದವಿಯಲ್ಲೂ ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಚಿನ್ನದ ಬೇಟೆ ಮುಂದುವರೆಸಿದ್ದಾರೆ. ಮಾನಸಗಂಗೋತ್ರಿಯಲ್ಲಿ ಆರ್ಕಿಟೆಕ್ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿರುವ ಕಾವ್ಯಶ್ರೀ ಅವರು, ನಗರಾಭಿವೃದ್ಧಿ ಸಂಬಂಧ ಏನಾದರೂ ಸಾಧಿಸಬೇಕೆಂಬ ಎಂಬ ಹಂಬಲದಿಂದ ಪಿಎಚ್.ಡಿ ಸಹ ಮಾಡುತ್ತಿದ್ದಾರೆ.ನನ್ನ ಸಾಧನೆಗೆ ಕುಟುಂಬದವರು, ಮುಖ್ಯವಾಗಿ ನನ್ನ ಸಾಧನೆ ಹಿಂದೆ ನನ್ನ ಪತಿ (ಡಾ.ಎಸ್.ಎಂ. ಗೌತಮ್ ಕೊನಿಕರ್) ಇದ್ದಾರೆ. ಅವರ ಪರಿಶ್ರಮ ದೊಡ್ಡದು. ನಾನು ಓದಲು ತುಂಬಾ ಸಹಕಾರ ನೀಡಿದ್ದಾರೆ. ಎಲ್ಲಾ ವಿಚಾರದಲ್ಲಿ ಜೊತೆಯಲ್ಲಿದ್ದು ಪ್ರೋತ್ಸಾಹಿಸಿದ್ದಾರೆ ಎಂದು ಕಾವ್ಯಶ್ರೀ ತಿಳಿಸಿದರು.----- ಸಂಸ್ಕೃತದಲ್ಲಿ ಸೀಮಾಗೆ 13 ಚಿನ್ನದ ಪದಕ

ಫೋಟೋ- 18ಎಂವೈಎಸ್6

----ಭಗವದ್ಗೀತೆ ಹಾಡುಗಾರ್ತಿ ಸೀಮಾ ಸಾಂಬ ಹೆಗಡೆ ಅವರು ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿ ಎಂ.ಎ ಸಂಸ್ಕೃತ ಪದವಿಯೊಂದಿಗೆ 13 ಚಿನ್ನದ ಪದಕ ಮತ್ತು 1 ನಗದು ಬಹುಮಾನಕ್ಕೆ ಭಾಜನರಾದರು.ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಕಳಚೆ ಗ್ರಾಮದ ಕೃಷಿಕ ಶ್ಯಾಮ ಹೆಗಡೆ ಮತ್ತು ಶಿಲ್ಪಾ ಹೆಗಡೆ ದಂಪತಿ ಪುತ್ರಿಯಾದ ಸೀಮಾ ಅವರು, ಪ್ರೌಢಶಿಕ್ಷಣದಿಂದಲೂ ಸಂಸ್ಕೃತ ಅಭ್ಯಾಸ ಮಾಡಿ, ಆ ಆಸಕ್ತಿಯಿಂದಲೇ ಎಂ.ಎದಲ್ಲಿ ಸಂಸ್ಕೃತ ಆಯ್ಕೆ ಮಾಡಿಕೊಂಡು ಈ ಸಾಧನೆ ಮಾಡಿದ್ದಾರೆ.ಕೇರಳದ ಕಾಸರಗೋಡಿನ ಪುರೋಹಿತರಾದ ರಂಜಿತ್ ಅವರನ್ನು ಸೀಮಾ ವಿವಾಹವಾಗಿದ್ದು, ಭಗವದ್ಗೀತೆ ಹಾಡುವುದನ್ನು ಕರತಗ ಮಾಡಿಕೊಂಡಿದ್ದಾರೆ. ಶಿಕ್ಷಕಿಯಾಗಿ ಸಮಾಜಕ್ಕೆ ಕೊಡುಗೆ ಸಲ್ಲಿಸುವ ಗುರಿ ಹೊಂದಿದ್ದು, ಮುಂದೆ ಪಿಎಚ್.ಡಿ ಮಾತ್ರವಲ್ಲದೆ ನಿರಂತರವಾಗಿ ಅಧ್ಯಯನ ಮುಂದುವರೆಸುವ ಅಭಿಲಾಸೆ ಹೊಂದಿದ್ದಾರೆ.-----ಎಂ.ಎ ಕನ್ನಡದಲ್ಲಿ ಕಾವ್ಯಾಗೆ 11 ಚಿನ್ನದ ಪದಕ, 5 ನಗದು ಬಹುಮಾನ

ಫೋಟೋ- 18ಎಂವೈಎಸ್7

----1ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೂ ಕನ್ನಡ ಮಾಧ್ಯಮದಲ್ಲೇ ಓದಿರುವ ಸಿ. ಕಾವ್ಯಾ ಅವರು, ಎಂ.ಎ. ಕನ್ನಡದಲ್ಲಿ 11 ಚಿನ್ನದ ಪದಕ ಮತ್ತು 5 ನಗದು ಬಹುಮಾನ ಪಡೆಯುವ ಮೂಲಕ ಗಮನ ಸೆಳೆದರು.ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಕುಣಿಗಲ್ ಗ್ರಾಮದ ಕೂಲಿ ಕೆಲಸಗಾರ ಚಿಕ್ಕನಾಯಕ ಮತ್ತು ದೇವಾಲಮ್ಮ ಪುತ್ರಿಯಾದ ಕಾವ್ಯ ಅವರು, 1 ರಿಂದ 5ನೇ ತರಗತಿ ಕುಣಿಗಲ್, 6 ರಿಂದ 10 ಮಾದಾಪುರ, ಪಿಯುಸಿಯನ್ನು ಎಚ್.ಡಿ. ಕೋಟೆ, ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಬಿ.ಎ, ಮಾನಸಗಂಗೋತ್ರಿಯಲ್ಲಿ ಎಂ.ಎ ಕನ್ನಡ ಓದುವ ಮೂಲಕ ಕನ್ನಡ ಪ್ರೀತಿ ಮೆರೆದಿದ್ದಾರೆ. ಪ್ರಸ್ತುತ ಮೈಸೂರಿನ ಸಿಟಿಇಯಲ್ಲಿ ಬಿ.ಇಡಿ ಓದುತ್ತಿರುವ ಕಾವ್ಯಾ ಅವರು, ಈಗಾಗಲೇ ಕೆ- ಸೆಟ್, ಯುಜಿಸಿ- ನೆಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಮುಂದೆ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುವ ಗುರಿ ಹೊಂದಿದ್ದಾರೆ.----ವಿವಿನಾ ಸ್ವೀಡಲ್ ತೋರಸ್‌ ಗೆ 10 ಚಿನ್ನದ ಪದಕ

ಫೋಟೋ- 18ಎಂವೈಎಸ್8

ಮೈಸೂರಿನ ಟೆರೇಷಿಯನ್ ಕಾಲೇಜಿನಲ್ಲಿ ಎಂ.ಎಸ್ಸಿ ಸಸ್ಯಶಾಸ್ತ್ರ ವಿಭಾಗದಲ್ಲಿ ವಿವಿನಾ ಸ್ವೀಡಲ್ ತೋರಸ್ ಅವರಿಗೆ 10 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ಲಭಿಸಿದೆ.

ಗೋಣಿಕೊಪ್ಪದವರಾದ ವಿವಿನಾ ಅವರು ಸಿಸ್ಟರ್ ಆಗಿ ದೀಕ್ಷೆ ಸ್ವೀಕರಿಸಿದ್ದು, ಸದ್ಯ ಕೇರಳದ ಇರಟ್ಟಿ ಕಾನ್ವೆಂಟ್ ನಲ್ಲಿದ್ದಾರೆ. ಅಲ್ಲಿದ್ದುಕೊಂಡು ಪಿಎಚ್‌.ಡಿ ಜೊತೆಗೆ ನೆಟ್ ಪರೀಕ್ಷೆ ಬರೆದು ಶಿಕ್ಷಕಿಯಾಗಬೇಕು. ಶಿಕ್ಷಣದ ಮೂಲಕ ಬಡ ಮಕ್ಕಳ ಸೇವೆ ಮಾಡುವುದಾಗಿ ಅವರು ತಿಳಿಸಿದರು.----ವಿಶೇಷಚೇತನ ಬಸಮ್ಮಗೆ ಚಿನ್ನದ ಪದಕ

ಫೋಟೋ- 18ಎಂವೈಎಸ್9

----ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಎನ್. ಉಷಾರಾಣಿ ಅವರು ಸ್ಥಾಪಿಸಿರುವ ಪ್ರೊ. ಉಷಾರಾಣಿ ನಾರಾಯಣ ಸೌಮ್ಯನಾಯಕಿ ಚಿನ್ನದ ಪದಕವು ವಿಶೇಷಚೇತನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಮಹಿಳಾ ವಿದ್ಯಾರ್ಥಿನಿಗೆ ನೀಡುವ ಚಿನ್ನದ ಪದಕವನ್ನು ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಸಮ್ಮ ಗುರಯ್ಯ ಮಠದ್ ಪಡೆದರು.ಮೊದಲ ಪ್ರಯತ್ನದಲ್ಲಿಯೇ ಜೆಆರ್‌ಎಫ್ ಹಾಗೂ ಎರಡನೇ ಪ್ರಯತ್ನದಲ್ಲಿ ಕೆ-ಸೆಟ್ ಪರೀಕ್ಷೆಯನ್ನು ಪಾಸ್ ಮಾಡಿರುವ ಬಸಮ್ಮ ಅವರಿಗೆ ಐಎಫ್ಎಸ್ ಮಾಡುವ ಗುರಿ ಇದೆ. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಕವಿತೆಗಳನ್ನು ರಚಿಸುತ್ತಿದ್ದಾರೆ. ಸಂಗೀತದಲ್ಲೂ ಆಸಕ್ತಿ ಹೊಂದಿರುವ ಇವರು, ಗಾಯನ, ಹಾರ್ಮೋನಿಯಂ ಸೇರಿದಂತೆ ನಾನಾ ವಾದ್ಯಗಳನ್ನು ನುಡಿಸುತ್ತಾರೆ.ರಾಷ್ಟ್ರಕವಿ ಕುವೆಂಪು ಅವರ ಪ್ರೇರಣೆಯಿಂದ ಮೈಸೂರು ವಿವಿಯಲ್ಲಿ ಓದಿದೆ. ಕಾರ್ಯಕ್ರಮದಲ್ಲಿ ಪದಕ ಪಡೆಯುವ ಜೊತೆಗೆ ಸುಧಾಮೂರ್ತಿ ಅವರನ್ನು ಭೇಟಿಯಾಗಿದ್ದು ನನಗೆ ಖುಷಿ ನೀಡಿದೆ. ತರಗತಿಗಳಲ್ಲಿ ಗಮನಕೊಟ್ಟು ಪಾಠ ಕೇಳುವ ಜೊತೆಗೆ ಯೂಟೂಬ್‌ ಗಳಲ್ಲೂ ಪಾಠಗಳನ್ನು ಕೇಳಿಸಿಕೊಂಡ ಪರೀಕ್ಷೆಗೆ ಸಿದ್ಧವಾಗಿದೆ. ನನಗೆ ಪರೀಕ್ಷೆ ಬರೆದುಕೊಟ್ಟ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ತಂದೆ ಗುರಯ್ಯ ಮಠದ, ತಾಯಿ ರಾಜೇಶ್ವರಿ ಮಠದ್ ಅವರನ್ನು ನೆನೆಯುವುದಾಗಿ ಅವರು ತಿಳಿಸಿದರು.