ಅವಳಿ ತಾಲೂಕುಗಳಲ್ಲಿ 18 ಸಾವಿರ ಸದಸ್ಯತ್ವ ನೋಂದಣಿ

| Published : Oct 21 2024, 12:33 AM IST

ಅವಳಿ ತಾಲೂಕುಗಳಲ್ಲಿ 18 ಸಾವಿರ ಸದಸ್ಯತ್ವ ನೋಂದಣಿ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ದೇಶದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ವ್ಯಾಪಕವಾಗಿ ನಡೆಯುತ್ತಿದ್ದು, ದೇಶದಲ್ಲಿ 9 ಕೋಟಿ ಬಿಜೆಪಿ ಕಾರ್ಯಕರ್ತರು ಹಾಗೂ ಹಿತೈಷಿಗಳು ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನ್ಯಾಮತಿಯಲ್ಲಿ ಹೇಳಿದ್ದಾರೆ.

- ನ್ಯಾಮತಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಇಡೀ ದೇಶದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ವ್ಯಾಪಕವಾಗಿ ನಡೆಯುತ್ತಿದ್ದು, ದೇಶದಲ್ಲಿ 9 ಕೋಟಿ ಬಿಜೆಪಿ ಕಾರ್ಯಕರ್ತರು ಹಾಗೂ ಹಿತೈಷಿಗಳು ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನ್ಯಾಮತಿ ಪಟ್ಟಣದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಇಲ್ಲಿಯವರೆಗೆ 56 ಲಕ್ಷ ಮಂದಿ ಸದಸ್ಯತ್ವ ಪಡೆದುಕೊಂಡಿದ್ದರೆ, ಅವಳಿ ತಾಲೂಕಿನಲ್ಲಿ 18 ಸಾವಿರ ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಅ.30 ರವರೆಗೆ ಸಮಯ ಇದೆ. ಅವಳಿ ತಾಲೂಕಿಗೆ 60 ಸಾವಿರ ಸದಸ್ಯತ್ವ ಟಾರ್ಗೆಟ್ ನೀಡಿದ್ದಾರೆ. ನಾವು ಅಲ್ಲಿಯವರೆಗೂ ವಿಶ್ರಮಿಸದೇ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ, ಬಿಜೆಪಿ ಸದಸ್ಯತ್ವ ಮಾಡಿಸಿ, ರಾಜ್ಯ ಮುಖಂಡರು ನೀಡಿರುವ ಗುರಿ ತಲುಪಬೇಕಿದೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆ:

ರಾಜ್ಯದ ಜನತೆಗೆ ನೂರಾರು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇಂದು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ, ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಚುನಾವಣೆಗೂ ಮುಂಚೆ ನೀಡಿದ್ದ ಐದು ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಸಮರ್ಪಕವಾಗಿ ತಲುಪಿಸದೇ ಕಾಂಗ್ರೆಸ್ ಸರ್ಕಾರ ಜನರಿಗೆ ಮೋಸ ಮಾಡಿದೆ, ಗೃಹಲಕ್ಷ್ಮಿ ಯೋಜನೆಯಲ್ಲಿ ಒಂದು ತಿಂಗಳು ಕೊಟ್ಟರೆ ಮತ್ತೆ ಮೂರು ತಿಂಗಳು ಹಣ ಕೊಟ್ಟಿಲ್ಲ. ಶಕ್ತಿ ಯೋಜನೆಯನ್ನು ಜಾರಿಗೆ ತಂದ ಸರ್ಕಾರ ಹೊಸ ಬಸ್‍ಗಳನ್ನು ಸಂಚಾರಕ್ಕೆ ಬಿಡದೇ ಕೆಲವು ರಿಪೇರಿ ಇರುವ ಹಳೇ ಬಸ್‍ಗಳನ್ನು ಬಿಟ್ಟಿದ್ದಾರೆ. ಹಳೆಯ ಬಸ್‍ಗಳು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡುತ್ತಿದ್ದ ವಿಡಿಯೋ ವೈರಲ್ ಆಗಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಮುಖಂಡರಾದ ಅರಕೆರೆ ನಾಗರಾಜ್, ಶಿವಾನಂದ್, ನ್ಯಾಮತಿ ನಗರ ಘಟಕ ಅಧ್ಯಕ್ಷ ವಿರೂಪಾಕ್ಷಪ್ಪ, ನ್ಯಾಮತಿ ತಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ, ನ್ಯಾಮತಿ ತಾಪಂ ಮಾಜಿ ಸದಸ್ಯ ರವಿಕುಮಾರ್ ಹಾಗೂ ಇನ್ನಿತರ ಮುಖಂಡರು ಇದ್ದರು.

- - -

ಕೋಟ್‌ ಮುಡಾ ನಿವೇಶನ ಹಗರಣ ಇಷ್ಟೊಂದು ದೊಡ್ಡದಾಗಿ ನಡೆಯಲು ಸಚಿವ ಬೈರತಿ ಸುರೇಶ್ ಅವರೇ ಕಾರಣ. ಅವರನ್ನು ವಿಚಾರಣೆಗೆ ಒಳಪಡಿಸಿ, ಮುಡಾ ಹಗರಣ ಬೆಳಕಿಗೆ ಬಂದ ನಂತರ ಏಕಾಏಕಿ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಬಂದ ಬೈರತಿ ಸುರೇಶ್ ಮುಡಾ ಸಂಬಂಧ ಎಲ್ಲ ಫೈಲ್‍ಗಳನ್ನು ತಂದಿದ್ದಾರೆ. ಆದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸಿ ಎಂದ ಅವರು, ಕಾಂಗ್ರೆಸ್‍ನವರು ಸುಖಾಸುಮ್ಮನೆ ಬಿಜೆಪಿ ಮೇಲೆ ಆರೋಪ ಮಾಡುವುದು ಸರಿಯಲ್ಲ

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

- - - -20ಎಚ್.ಎಲ್.ಐ1:

ನ್ಯಾಮತಿ ಪಟ್ಟಣದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.