ಮಂಡ್ಯ ಜಿಲ್ಲೆಯಲ್ಲಿ ೧೮೯ ಡೆಂಘೀ ಪ್ರಕರಣಗಳು ದಾಖಲು..!

| Published : Jul 03 2024, 12:24 AM IST

ಸಾರಾಂಶ

ಮಂಡ್ಯ ತಾಲೂಕಿನಲ್ಲಿ ಅತಿ ಹೆಚ್ಚು ೮೯ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದರೆ, ಕೆ.ಆರ್.ಪೇಟೆ-೯, ನಾಗಮಂಗಲ-೯, ಶ್ರೀರಂಗಪಟ್ಟಣ-೧೬, ಮದ್ದೂರು-೩೪, ಮಳವಳ್ಳಿ-೧೪, ಪಾಂಡವಪುರ-೧೮ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದುವರೆಗೆ ೧೮೯ ಪ್ರಕರಣಗಳು ಪತ್ತೆಯಾಗಿವೆ. ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ನಾನಾ ರೀತಿಯ ಕಾರ್ಯಕ್ರಮ ರೂಪಿಸಲಾಗುತ್ತಿದ್ದರೂ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ.

ಮಂಡ್ಯ ತಾಲೂಕಿನಲ್ಲಿ ಅತಿ ಹೆಚ್ಚು ೮೯ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದರೆ, ಕೆ.ಆರ್.ಪೇಟೆ-೯, ನಾಗಮಂಗಲ-೯, ಶ್ರೀರಂಗಪಟ್ಟಣ-೧೬, ಮದ್ದೂರು-೩೪, ಮಳವಳ್ಳಿ-೧೪, ಪಾಂಡವಪುರ-೧೮ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

೧೫೦೦ ರಕ್ತ ಮಾದರಿ ಪರೀಕ್ಷೆ:

ಜಿಲ್ಲೆಯ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಸಂಗ್ರಹಿಸಲಾಗುವ ಡೆಂಘೀ ಶಂಕಿತ ವ್ಯಕ್ತಿಗಳ ರಕ್ತದ ಸ್ಯಾಂಪಲ್‌ಗಳನ್ನು ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಇಲ್ಲಿ ರಕ್ತಪರೀಕ್ಷೆ ನಡೆಸಿ ವರದಿಯನ್ನು ನೀಡಲಾಗುತ್ತಿದೆ. ಇದುವರೆಗೆ ೧೫೦೦ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ನಿತ್ಯ ೧೫ ರಿಂದ ೨೦ ರಕ್ತ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಐದು ದಿನಗಳ ಒಳಗೆ ಜ್ವರ ಇರುವವರಿಗೆ ಎನ್‌ಎಸ್-೧ ಪರೀಕ್ಷೆ ಹಾಗೂ ಐದು ದಿನಗಳಿಗಿಂತ ಹೆಚ್ಚು ದಿನಗಳಿಂದ ಜ್ವರ ಇರುವವರಿಗೆ ಐಜಿಎಂ ಪರೀಕ್ಷೆ ನಡೆಸಲಾಗುತ್ತಿದ್ದು, ೨೪ ರಿಂದ ೪೮ ಗಂಟೆಯೊಳಗೆ ರಕ್ತ ಪರೀಕ್ಷಾ ವರದಿಯನ್ನು ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಕಾಂತರಾಜು ಮಾಹಿತಿ ನೀಡಿದರು.

ಡೆಂಘೀ ಡ್ರೈವ್ ಕಾರ್ಯಕ್ರಮ:

ನಗರ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯಿಂದ ಪ್ರತಿ ಮೊದಲನೇ ಮತ್ತು ಎರಡನೇ ಶುಕ್ರವಾರ ಡೆಂಘೀ ಡ್ರೈವ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದೊಳಗೆ ಸಿಬ್ಬಂದಿ ಕೊರತೆ ಇರುವ ಕಾರಣದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂರಕ್ಷಣಾಧಿಕಾರಿ, ಆರೋಗ್ಯ ಸಹಾಯಕಿಯರ ನೆರವಿನೊಂದಿಗೆ ಕೊಳಚೆ ಪ್ರದೇಶಗಳಿಗೆ ತೆರಳಿ ಲಾರ್ವಾ ಸರ್ವೇ ನಡೆಸಲಾಗುತ್ತಿತ್ತು. ಡೆಂಘೀ ಪ್ರಕರಣಗಳು ಈಗ ಹೆಚ್ಚಾಗಿರುವುದರಿಂದ ಪ್ರತಿ ಶುಕ್ರವಾರ ಅಲ್ಲಿಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಅಲ್ಲದೇ, ಅಲ್ಲಿನ ಜನರಿಗೆ ಡೆಂಘೀ ಕುರಿತು ಅರಿವು, ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಶೇ.೮೫ರಷ್ಟು ಮನೆಗಳಲ್ಲಿ ಸರ್ವೇ:

ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ತೆರಳಿ ಮನೆಯ ಸುತ್ತಮುತ್ತ, ಮನೆಯೊಳಗೆ ಎಲ್ಲಿಯೂ ನೀರು ಸಂಗ್ರಹವಾಗಿರದಂತೆ ತಿಳಿವಳಿಕೆ ಹೇಳುತ್ತಿರುವುದಲ್ಲದೇ, ಲಾರ್ವಾ ಸಂಗ್ರಹವಾಗಿರುವ ಸ್ಥಳಗಳನ್ನು ಗುರುತಿಸಿ ನಾಶಪಡಿಸುತ್ತಿದ್ದಾರೆ. ಫ್ರಿಡ್ಜ್, ನೀರು ತುಂಬಿರುವ ತೊಟ್ಟಿಗಳು, ಡ್ರಮ್‌ಗಳು, ಪಾತ್ರೆಗಳು ಹೀಗೆ ಸ್ವಚ್ಛ ನೀರಿರುವ ಕಡೆಗಳಲ್ಲಿ ಡೆಂಘೀ ಲಾರ್ವಾಗಳು ಉತ್ಪತ್ತಿಯಾಗುತ್ತಿದ್ದು, ಅಂತಹ ಸ್ಥಳಗಳನ್ನು ಗುರುತಿಸಿ ಲಾರ್ವಾ ನಾಶಪಡಿಸುವ ಕಾರ್ಯ ನಡೆದಿದೆ. ಅಂತಹುಗಳನ್ನು ಸ್ವಚ್ಛವಾಗಿ ಉಜ್ಜಿ ತೊಳೆದಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಮೊಟ್ಟೆಗಳು ಅಲ್ಲಿಯೇ ಉಳಿದಿರುತ್ತವೆ. ಮತ್ತೆ ನೀರು ಸಂಗ್ರಹಗೊಂಡಾಗ ಅವು ಜೀವ ಪಡೆದುಕೊಳ್ಳುತ್ತವೆ. ಇದನ್ನು ಜನರು ತಿಳಿದುಕೊಳ್ಳಬೇಕಿದೆ. ಈವರೆಗೆ ಜಿಲ್ಲೆಯ ಶೇ.೮೫ರಷ್ಟು ಮನೆಗಳನ್ನು ತಲುಪಿರುವ ಆಶಾ ಕಾರ್ಯಕರ್ತೆಯರು ಡೆಂಘೀ ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜನರನ್ನು ಎಚ್ಚರಿಸುತ್ತಿದ್ದಾರೆ.

ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರ ಜೊತೆಗೆ ಕೆಲವೊಮ್ಮೆ ನರ್ಸಿಂಗ್ ವಿದ್ಯಾರ್ಥಿಗಳನ್ನೂ ಡೆಂಘೀ ನಿಯಂತ್ರಣ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಡೆಂಘೀ ಜ್ವರ ಬಂದು ಗುಣಮುಖರಾದವರ ಮೇಲೂ ನಿಗಾ ವಹಿಸಲಾಗುತ್ತಿದೆ. ಇದರ ನಡುವೆಯೂ ಜ್ವರ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಜನರು ಡೆಂಘೀ ಬಗ್ಗೆ ನಿರ್ಲಕ್ಷ್ಯ ವಹಿಸದೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅವಶ್ಯವಾಗಿದೆ.ಜಿಲ್ಲೆಯಲ್ಲಿ ಈವರೆಗೆ ೧೮೯ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಯಾವುದೇ ಸಾವು ಸಂಭವಿಸಿಲ್ಲ. ಆರೋಗ್ಯ ಇಲಾಖೆಯಿಂದ ಲಾರ್ವಾ ಸಮೀಕ್ಷೆ ನಡೆಸುತ್ತಾ, ಶಂಕಿತರ ರಕ್ತ ಮಾದರಿ ಪರೀಕ್ಷೆಯನ್ನು ತಪಾಸಣೆಗೊಳಪಡಿಸಿ ಶೀಘ್ರ ವರದಿ ನೀಡಲಾಗುತ್ತಿದೆ. ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಪ್ರಯತ್ನದ ಜೊತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಮನೆಯೊಳಗೆ, ಮನೆಯ ಸುತ್ತಮುತ್ತ ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ತೀವ್ರ ಜ್ವರ, ಕಣ್ಣಿನ ಒಳಭಾಗದಲ್ಲಿ ನೋವಿನ ಲಕ್ಷಣಗಳಿರುವವರು ಕೂಡಲೇ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಬೇಕು.

- ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ, ಮಂಡ್ಯ