ಕುಷ್ಟಗಿಯಲ್ಲಿ ಎರಡು ತಿಂಗಳಲ್ಲಿ 19 ಅಗ್ನಿ ಅವಘಡ

| Published : Mar 06 2024, 02:22 AM IST

ಸಾರಾಂಶ

ಕೆಲವೆಡೆ ಜಲವಾಹನ ಹೋಗದ, ಇಕ್ಕಟ್ಟು ಜಾಗಗಳಲ್ಲಿ ಗಿಡ, ಮರಗಳ ಕೊಂಬೆಗಳಿಂದ, ಹಸಿರೆಲೆಯಿಂದ, ಹಳೆಯ ಗೋಣಿಚೀಲಗಳಿಂದ ಬೆಂಕಿ ನಂದಿಸುತ್ತಿದ್ದಾರೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಬೇಸಿಗೆಕಾಲ ಆರಂಭದಲ್ಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಳೆದ ಎರಡು ತಿಂಗಳಿನಲ್ಲಿ ಸುಮಾರು 19 ಅಗ್ನಿ ಅವಘಡಗಳು ಸಂಭವಿಸಿವೆ.

ಹೌದು. ಕುಷ್ಟಗಿಯ ಅಗ್ನಿಶಾಮಕ ಠಾಣೆಯಲ್ಲಿ ಸುಮಾರು 27 ಮಂದಿ ಸಿಬ್ಬಂದಿ ಇದ್ದು, ಬೆಂಕಿಯ ಅವಘಡಗಳ ಸುದ್ದಿ ಬಂದ ತಕ್ಷಣವೇ ಸಕಾಲಕ್ಕೆ ಹೋಗಿ ಬೆಂಕಿ ನಂದಿಸಲಾಗುತ್ತದೆ. ಕೆಲವೆಡೆ ಜಲವಾಹನ ಹೋಗದ, ಇಕ್ಕಟ್ಟು ಜಾಗಗಳಲ್ಲಿ ಗಿಡ, ಮರಗಳ ಕೊಂಬೆಗಳಿಂದ, ಹಸಿರೆಲೆಯಿಂದ, ಹಳೆಯ ಗೋಣಿಚೀಲಗಳಿಂದ ಬೆಂಕಿ ನಂದಿಸುತ್ತಿದ್ದಾರೆ.

ಒಂದೇ ಜಲವಾಹನ: ಕುಷ್ಟಗಿ ತಾಲೂಕಿನಲ್ಲಿ ಸುಮಾರು 173 ಹಳ್ಳಿಗಳು ಬರುತ್ತವೆ. ಇಲ್ಲಿ ಒಂದೇ ಜಲವಾಹನ ಇದ್ದು, ಏಕಾಏಕಿ ಎರಡು-ಮೂರು ಕಡೆ ಬೆಂಕಿ ಅವಘಡಗಳು ಕಾಣಿಸಿಕೊಂಡರೆ ತೊಂದರೆಯಾಗಬಹುದು. ಸರ್ಕಾರವು ಕುಷ್ಟಗಿ ಠಾಣೆಗೆ ಇನ್ನೊಂದು ಜಲವಾಹನ ನೀಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ಕಳೆದ ವರ್ಷ 127 ಅವಘಡಗಳು: ಕಳೆದ ವರ್ಷ 2022-23ನೇ ಸಾಲಿನಲ್ಲಿ ರೈತರ ಬಣವೆಗಳು, ಎಲೆಕ್ಟ್ರಿಕಲ್, ಗ್ಯಾಸ್ ಸಿಲಿಂಡರ್ ಸೋರಿಕೆ, ಪ್ರಾಣ ರಕ್ಷಣೆ ಸೇರಿದಂತೆ ನಾನಾ ವಿಧದ ಒಟ್ಟು 127 ಕಡೆ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ಲಕ್ಷಾಂತರ ಬೆಲೆಬಾಳುವ ಆಸ್ತಿ-ಪಾಸ್ತಿ, ವಸ್ತುಗಳನ್ನು ಬೆಂಕಿಯಿಂದ ರಕ್ಷಿಸಲಾಗಿದೆ. ಕಳೆದ ವರ್ಷದಲ್ಲಿ ಜನವರಿ, ಫೆಬ್ರವರಿ ತಿಂಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಕಡಿಮೆಯಾಗಿದೆ.

ಪ್ರಾತ್ಯಕ್ಷಿಕೆ ಮತ್ತು ತರಬೇತಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಗ್ನಿ ನಂದಿಸುವ ಪ್ರಾತ್ಯಕ್ಷಿಕೆ ಮತ್ತು ತರಬೇತಿ, ಜನಜಾಗೃತಿ ಮೂಡಿಸಲಾಗುತ್ತಿದೆ.

ಠಾಣೆಯಲ್ಲೇ ಬೋರ್‌ವೆಲ್: ಠಾಣಾ ಆವರಣದಲ್ಲಿ ಕೊಳವೆಬಾವಿ ಇದ್ದು, ಸಾಕಷ್ಟು ನೀರು ಲಭ್ಯವಿದೆ. ದಿನದ 24 ಗಂಟೆ ನೀರು ಸಂಗ್ರಹವಿದೆ. ಇಲ್ಲಿರುವ ಟ್ಯಾಂಕ್‌ನಲ್ಲಿ ಸುಮಾರು 20 ಸಾವಿರ ಲೀಟರ್ ನೀರಿನ ಸಾಮರ್ಥ್ಯ ಹೊಂದಿದೆ.

ವಾಹನಗಳು: ಅಗ್ನಿಶಾಮಕ ಠಾಣೆಯಲ್ಲಿ ಎರಡು ವಾಹನಗಳಿವೆ. ಈ ಪೈಕಿ ಒಂದು ವಾಹನ ಮಾತ್ರ ಕಾರ್ಯಾಚರಿಸುತ್ತಿದೆ. ಅದು 5000 ಲೀಟರ್ ಸಾಮರ್ಥ್ಯ ಹೊಂದಿದೆ. ಇನ್ನೊಂದು 15 ವರ್ಷಕ್ಕಿಂತ ಹಳೆಯ ವಾಹನ. ಪ್ರಯೋಜನಕ್ಕೆ ಬಾರದು. ಇನ್ನೊಂದು ಹೊಸ ಜಲವಾಹನ ಅವಶ್ಯಕತೆ ಇದ್ದು, ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈತರು ವಿದ್ಯುತ್ ಪರಿವರ್ತಕ, ವಿದ್ಯುತ್ ತಂತಿಯ ಕೆಳಗೆ ಬಣವೆ ಹಾಕಬಾರದು. ಬೆಂಕಿ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಅಗ್ನಿ ಅವಘಡಗಳು ಕಂಡು ಬಂದ ತಕ್ಷಣ ನಮಗೆ ಮಾಹಿತಿ ನೀಡುವ ಮೂಲಕ ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಕುಷ್ಟಗಿ ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಹೇಳಿದರು.