ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಕುಟುಂಬದ ವಿರುದ್ಧವೂ ಇದೀಗ ಮುಡಾ ನಿವೇಶನ ಹಂಚಿಕೆ ಆರೋಪ

| Published : Nov 17 2024, 01:15 AM IST / Updated: Nov 17 2024, 07:31 AM IST

GT Devegowda
ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಕುಟುಂಬದ ವಿರುದ್ಧವೂ ಇದೀಗ ಮುಡಾ ನಿವೇಶನ ಹಂಚಿಕೆ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಕುಟುಂಬದ ವಿರುದ್ಧವೂ ಇದೀಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಆರೋಪ ಕೇಳಿಬಂದಿದೆ.

 ಮೈಸೂರು : ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಕುಟುಂಬದ ವಿರುದ್ಧವೂ ಇದೀಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಆರೋಪ ಕೇಳಿಬಂದಿದೆ. ಜಿ.ಟಿ.ದೇವೇಗೌಡರ ಸ್ವಗ್ರಾಮದಲ್ಲಿರುವ ಅವರ ಸೋದರಿ ಪುತ್ರ ಮಹೇಂದ್ರ ಎಂಬುವರಿಗೆ 50:50ರ ಅನುಪಾತದಲ್ಲಿ ಮುಡಾದಿಂದ 19 ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಈ ಪ್ರಕರಣದಲ್ಲಿ ಭೂ ಮಾಲೀಕನೇ ಅಲ್ಲದ ವ್ಯಕ್ತಿಗೆ ಅಕ್ರಮವಾಗಿ ನಿವೇಶನ ನೀಡಲಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಪ್ರಕರಣವನ್ನು ಬೇನಾಮಿ ಕಾಯ್ದೆಯಡಿ ತನಿಖೆ ನಡೆಸಬೇಕು. ಇದರ ಬಗ್ಗೆಯೂ ಮುಡಾ ಸಂಬಂಧ ನೀಡಿದ ನನ್ನ ದೂರಿನಲ್ಲಿ ಉಲ್ಲೇಖ ಮಾಡಿದ್ದೇನೆ. ಎಲ್ಲದರ ಬಗ್ಗೆ ತನಿಖೆ ನಡೆದಾಗ ಮಹೇಂದ್ರ ಅವರು ಶಾಸಕ ಜಿ.ಟಿ.ದೇವೇಗೌಡರ ಬೇನಾಮಿ ಹೌದೋ, ಅಲ್ಲವೋ ಎಂಬುದು ಗೊತ್ತಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ದೇವನೂರು ಗ್ರಾಮದ ಗುಂಗ್ರಾಲ್ ಛತ್ರದ ಸರ್ವೆ ನಂ.81/2 ರಲ್ಲಿದ್ದ ಮಹೇಂದ್ರಗೆ ಸೇರಿದ 2.22 ಎಕರೆ ಭೂಮಿಯನ್ನು ಉಪಯೋಗಿಸಿಕೊಂಡಿರುವುದಾಗಿ ಮುಡಾ ಹೇಳಿಕೊಂಡಿದೆ. ಆದರೆ ಯಾವಾಗ ಆ ಭೂಮಿ ವಶಪಡಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ ಎನ್ನುವ ಮಾಹಿತಿ ಮಾತ್ರ ಇಲ್ಲ. ಅಷ್ಟೆ ಅಲ್ಲದೆ, ದೇವನೂರು ಗ್ರಾಮದ ಭೂಮಿಗೆ ವಿಜಯನಗರ 3ನೇ ಹಂತದಲ್ಲಿ ಬದಲಿ ನಿವೇಶನ ಮಂಜೂರು ಕೂಡ ಮಾಡಲಾಗಿದೆ.

ಪ್ರೋತ್ಸಾಹದಾಯಕ ಯೋಜನೆಯಲ್ಲಿ ಸ್ವಇಚ್ಛೆಯಿಂದ ಭೂಮಿ ಬಿಟ್ಟುಕೊಟ್ಟಿದ್ದಾರೆ ಎಂದು ಕ್ರಯ ಪತ್ರದಲ್ಲಿ ನಮೂದು ಆಗಿದ್ದು, ಈ ಯೋಜನೆಗೆ ನೀಡಬೇಕಿರುವುದು ಕೇವಲ 2 ಸೈಟ್ ಗಳು ಮಾತ್ರ. ಅದರಂತೆ 40x60 ಮತ್ತು 40x30ರ 3600 ಚದರ ಅಡಿ ಮಾತ್ರ ಪರಿಹಾರವಾಗಿ ಸಿಗಬೇಕಾಗಿತ್ತು. ಆದರೆ, ಅವರಿಗೆ ಪರಿಹಾರವಾಗಿ 19 ನಿವೇಶನಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.