ರಟ್ಟಿಹಳ್ಳಿಯ 19 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ

| Published : Mar 16 2024, 01:46 AM IST

ರಟ್ಟಿಹಳ್ಳಿಯ 19 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ವರ್ಷ ಭೀಕರ ಬರಗಾಲದಿಂದಾಗಿ ರಟ್ಟೀಹಳ್ಳಿ ತಾಲೂಕಿನಾದ್ಯಂತ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇದನ್ನು ಸಮರ್ಥವಾಗಿ ಎದುರಿಸಲು ತಾಲೂಕಾಡಳಿತ ಸರ್ವ ಸನ್ನದ್ಧವಾದರೂ ಮುಂದಿನ ೧೫ ದಿನಗಳಲ್ಲಿ ಇರುವ ಕೊಳವೆ ಬಾವಿಗಳಲ್ಲೂ ನೀರು ಬತ್ತಿಹೋಗುವ ಆತಂಕ ಉಂಟಾಗಿದೆ.

ಸತೀಶ ಸಿ.ಎಸ್.

ಕನ್ನಡಪ್ರಭ ವಾರ್ತೆ ರಟ್ಟಿಹಳ್ಳಿ

ಪ್ರಸ್ತುತ ವರ್ಷ ಭೀಕರ ಬರಗಾಲದಿಂದಾಗಿ ರಟ್ಟೀಹಳ್ಳಿ ತಾಲೂಕಿನಾದ್ಯಂತ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇದನ್ನು ಸಮರ್ಥವಾಗಿ ಎದುರಿಸಲು ತಾಲೂಕಾಡಳಿತ ಸರ್ವ ಸನ್ನದ್ಧವಾದರೂ ಮುಂದಿನ ೧೫ ದಿನಗಳಲ್ಲಿ ಇರುವ ಕೊಳವೆ ಬಾವಿಗಳಲ್ಲೂ ನೀರು ಬತ್ತಿಹೋಗುವ ಆತಂಕ ಉಂಟಾಗಿದೆ.ಬೇಸಿಗೆ ಮುನ್ನವೆ ತಾಲೂಕಿನ ಸುಮಾರು ೧೯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ದಿನದಿಂದ ದಿನಕ್ಕೆ ಗ್ರಾಮಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಜನ-ಜಾನುವಾರುಗಳ ಮೂಕರೋದನ ನೋಡಲಾಗುತ್ತಿಲ್ಲ. ನೀರಿನ ಮೂಲಗಳಾದ ಕೊಳವೆಬಾವಿ, ಕೆರೆ ಕಟ್ಟೆಗಳು ಅವಧಿಗೂ ಮುನ್ನ ಬತ್ತಿ ಬರಿದಾಗಿವೆ. ಅಲ್ಲದೆ ತಾಲೂಕಿನಾದ್ಯಂತ ಇರುವ ಶುದ್ಧ ನೀರಿನ ಘಟಕಗಳು ಕೆಟ್ಟು ಹೋಗಿದ್ದು, ಸಂಬಂಧಪಟ್ಟವರು ದುರಸ್ತಿಗೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದರಿಂದ ಸಾರ್ವಜನಿಕರು ಕುಡಿಯುವ ನೀರಿಗಾಗಿ ತಳ್ಳು ಗಾಡಿಗಳಲ್ಲಿ ಮೈಲುಗಟ್ಟಲೆ ಕ್ರಮಿಸಿ ನೀರು ತರುವ ಪರಿಸ್ಥಿತಿ ಉಂಟಾಗಿದೆ. ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣವಾಗಬಹುದು ಎಂದು ಅಂದಾಜಿಸಲಾಗಿದೆ.ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಸುಮಾರು ಆರು ಸಾವಿರ ಜನಸಂಖ್ಯೆಗೆ ಕೇವಲ ೪ ನಲ್ಲಿಗಳಲ್ಲಿ ನೀರು ಪೂರೈಸಲಾಗುತ್ತಿದೆ. ಹೀಗಾಗಿ, ಪ್ರತಿದಿನ ಜನ ನೀರಿಗಾಗಿ ಗಂಟೆ ಗಟ್ಟಲೆ ಕಾಯುವಂತಾಗಿದೆ. ಮನೆಯಲ್ಲಿನ ಒಂದಿಬ್ಬರು ಸದಸ್ಯರಿಗೆ ನೀರು ತರುವುದೇ ಕಾಯಕವಾಗಿದೆ. ಗ್ರಾಮ ಪಂಚಾಯಿತಿಯವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಮಕರಿ, ಇಂಗಳಗೊಂದಿ, ಕುಂಚೂರ, ಚಿಕ್ಕಯಡಚಿ, ಮಾಸೂರ, ಹಿರೇಮಾದಾಪುರ, ಗುಂಡಗಟ್ಟಿ, ರಾಮತೀರ್ಥ, ಮೇದೂರ, ಸಣ್ಣಗುಬ್ಬಿ, ರಟ್ಟೀಹಳ್ಳಿ ಪಟ್ಟಣ ಸೇರಿದಂತೆ ಇನ್ನೂ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಉಲ್ಬಣವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ತಾಲೂಕಿನಲ್ಲಿ ಸುಮಾರು ೩೪೬ ನೀರಿನ ಕೊಳವೆಬಾವಿಗಳಿದ್ದು, ೨೩೨ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ೧೨೦ ಕೊಳವೆಬಾವಿಗಳಲ್ಲಿ ಈಗಾಗಲೇ ನೀರಿನ ಮಟ್ಟ ಕಡಿಮೆಯಾಗಿದ್ದು, ೧೧೪ ಕೊಳವೆ ಬಾವಿಗಳು ಬತ್ತಿವೆ. ಸಮಸ್ಯೆ ಹೆಚ್ಚಿರುವ ಹಳ್ಳಿಗಳಿಗೆ ಖಾಸಗಿಯವರ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಪೂರೈಸಲಾಗುತ್ತಿದೆ. ತಾಲೂಕಿನಾದ್ಯಂತ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಅಧಿಕಾರಿ ದೇವರಾಜ ಸಣ್ಣಕಾರಗಿ ತಿಳಿಸಿದ್ದಾರೆ.

ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ: ರಾಜ್ಯದಲ್ಲಿ ಅವಧಿಗೂ ಮುನ್ನ ಕೆರೆ ಕಟ್ಟೆಗಳು, ಕೊಳವೆಬಾವಿಗಳು ಹಾಗೂ ನೀರಿನ ಮೂಲಗಳು ಬತ್ತುತ್ತಿವೆ. ಜಲ ಮೂಲಗಳನ್ನು ಸಂರಕ್ಷಿಸಿ ಹೆಚ್ಚು ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಅವಶ್ಯಕತೆಗೆ ತಕ್ಕಂತೆ ನೀರಿನ ಬಳಕೆ ಮಾಡಿಕೊಳ್ಳಬೇಕು. ಅನಗತ್ಯ ನೀರಿನ ಸೋರುವಿಕೆಯನ್ನು ತಡೆಗಟ್ಟಬೇಕು. ಕೈತೋಟ, ಅಂಗಳಕ್ಕೆ ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಬೇಕು. ವಾಹನಗಳನ್ನು ತೊಳೆಯುವ ವಿಧಾನದಲ್ಲಿ ಬದಲಾವಣೆ ಅಗತ್ಯ. ಮಕ್ಕಳು, ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ನೀರಿನ ಸಂರಕ್ಷಣೆ ಮುಂದಾಗಬೇಕಿದೆ.ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಉಂಟಾದ್ದರಿಂದ ಖಾಸಗಿಯವರ ಬೋರ್‌ವೆಲ್‌ಗಳನ್ನ ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ನೂರಾರು ಕೊಳವೆ ಬಾವಿಗಳು ಬತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಕಾರಣ ಸಾರ್ವಜನಿಕರು ಅಗತ್ಯಕ್ಕೆ ತಕ್ಕಂತೆ ನೀರಿನ ಬಳಕೆ ಮಾಡಬೇಕು ಎಂದು ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕ ದೇವರಾಜ ಸಣ್ಣಕಾರಗಿ ಹೇಳಿದರು.ರಟ್ಟಿಹಳ್ಳಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತಾಲೂಕಾಡಳಿತ, ಟಾಸ್ಕ್‌ಫೋರ್ಸ್‌ನವರೊಂದಿಗೆ ನಾಳೆ ಸಭೆ ಮಾಡಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ರೈತರ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ಪೂರೈಸಲಾಗುವುದು. ಅಗತ್ಯ ಬಿದ್ದರೆ ಹೊಸದಾಗಿ ಕೊಳವೆಬಾವಿ ಕೊರೆಸಲಾಗುವುದು. ಎಲ್ಲಿಯೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದಿಲ್ಲ. ರೈತರಿಂದಲೇ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.