ಸರ್ಕಾರಕ್ಕೆ ವನ್ಯಜೀವಿ ಅಂಗಾಂಗ ಒಪ್ಪಿಸಿದ 192 ಜನ!

| Published : May 17 2024, 12:35 AM IST / Updated: May 17 2024, 08:37 AM IST

ಸರ್ಕಾರಕ್ಕೆ ವನ್ಯಜೀವಿ ಅಂಗಾಂಗ ಒಪ್ಪಿಸಿದ 192 ಜನ!
Share this Article
  • FB
  • TW
  • Linkdin
  • Email

ಸಾರಾಂಶ

ಅನಧಿಕೃತವಾಗಿ ಸಂಗ್ರಹಿಸಿಟ್ಟುಕೊಂಡಿರುವ ವನ್ಯಜೀವಿಗಳ ಅಂಗಾಂಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಅರಣ್ಯ ಇಲಾಖೆ ನೀಡಿದ್ದ ಮೂರು ತಿಂಗಳ ಗಡುವಿನಲ್ಲಿ ಕೇವಲ 192 ಅರ್ಜಿ ಸಲ್ಲಿಕೆಯಾಗಿದ್ದು, ಜನರು ಅನಧಿಕೃತವಾಗಿ ಇಟ್ಟುಕೊಂಡಿದ್ದ ವನ್ಯಜೀವಿಗಳ ಅಂಗಾಂಗಳನ್ನು ಒಪ್ಪಿಸಿದ್ದಾರೆ.

ಗಿರೀಶ್‌ ಗರಗ

 ಬೆಂಗಳೂರು : ಅನಧಿಕೃತವಾಗಿ ಸಂಗ್ರಹಿಸಿಟ್ಟುಕೊಂಡಿರುವ ವನ್ಯಜೀವಿಗಳ ಅಂಗಾಂಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಅರಣ್ಯ ಇಲಾಖೆ ನೀಡಿದ್ದ ಮೂರು ತಿಂಗಳ ಗಡುವಿನಲ್ಲಿ ಕೇವಲ 192 ಅರ್ಜಿ ಸಲ್ಲಿಕೆಯಾಗಿದ್ದು, ಜನರು ಅನಧಿಕೃತವಾಗಿ ಇಟ್ಟುಕೊಂಡಿದ್ದ ವನ್ಯಜೀವಿಗಳ ಅಂಗಾಂಗಳನ್ನು ಒಪ್ಪಿಸಿದ್ದಾರೆ.

ವನ್ಯಜೀವಿ ಅಂಗಾಂಗಗಳನ್ನು ಹೊಂದಿರುವವರು ಅರಣ್ಯ ಇಲಾಖೆಗೆ ಅದನ್ನು ಒಪ್ಪಿಸುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಜನವರಿಯಲ್ಲಿ ಅಧಿಸೂಚನೆ ಹೊರಡಿಸಿ ಏ.10ರ ಒಳಗೆ ಅನಧಿಕೃತವಾಗಿ ಸಂಗ್ರಹಿಸಿಡಲಾದ ವನ್ಯಜೀವಿ ಅಂಗಾಂಗಗಳನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು. ಅದರಂತೆ ಅರಣ್ಯ ಇಲಾಖೆಯ ಎಲ್ಲ 21 ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 192 ಅರ್ಜಿಗಳು ಸಲ್ಲಿಕೆಯಾಗಿವೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ ಹೆಚ್ಚು

ಬೆಂಗಳೂರು ನಗರ ವಿಭಾಗ ವ್ಯಾಪ್ತಿಯಲ್ಲೇ ಅತಿಹೆಚ್ಚು ವನ್ಯಜೀವಿ ಪರಿಕರಗಳು ಸಲ್ಲಿಕೆಯಾಗಿವೆ.192ರ ಪೈಕಿ ಬೆಂಗಳೂರು ನಗರ ವಿಭಾಗ ವ್ಯಾಪ್ತಿಯಲ್ಲಿ 110, ಶಿರಸಿ ವಿಭಾಗ 13, ಶಿವಮೊಗ್ಗ ವಿಭಾಗ 9, ಧಾರವಾಡ ವಿಭಾಗ 8, ಹಾಸನ, ಶಿವಮೊಗ್ಗ ವನ್ಯಜೀವಿ ವಿಭಾಗ ತಲಾ 6, ಮೈಸೂರು, ತುಮಕೂರು, ಬೆಳಗಾವಿ ತಲಾ 5, ಹೊನ್ನಾವರ 4, ಹುಣಸೂರು, ಮಂಗಳೂರು ತಲಾ 3, ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ, ಚಿತ್ರದುರ್ಗ ತಲಾ 2, ಬಾಗಲಕೋಟೆ, ಚಿಕ್ಕಮಗಳೂರು, ಚಿತ್ರದುರ್ಗ ಭದ್ರಾ ವನ್ಯಜೀವಿ, ಹಾವೇರಿ, ಕಾರವಾರ, ಗೋಕಾಕ ವಿಭಾಗ ವ್ಯಾಪ್ತಿಯಲ್ಲಿ ತಲಾ ಒಂದು ಅರ್ಜಿ ಸಲ್ಲಿಸಿ, ಸಾರ್ವಜನಿಕರು ತಮ್ಮಲ್ಲಿನ ವನ್ಯಜೀವಿ ಅಂಗಾಂಗಗಳನ್ನು ಅರಣ್ಯ ಇಲಾಖೆಗೆ ಸಲ್ಲಿಸಿದ್ದಾರೆ.

ಪರಿಶೀಲನೆ ನಂತರ ಸ್ವೀಕಾರ

ಅನಧಿಕೃತ ವನ್ಯಜೀವಿ ಅಂಗಾಂಗಗಳನ್ನು ನೀಡುವ ಸಂದರ್ಭದಲ್ಲಿ ನಿಗದಿತ ಅರಣ್ಯಾಧಿಕಾರಿಗಳು ಹಾಗೂ ವನ್ಯಜೀವಿ ವಾರ್ಡನ್‌ಗಳು ಆ ಅಂಗಾಂಗಳನ್ನು ಪ್ರಾಣಿ ಬೇಟೆಯಿಂದ ಪಡೆದಿದ್ದಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ನಂತರವೇ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅಂಗಾಂಗಳನ್ನು ಪರಿಶೀಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಪರಿಶೀಲನೆ ವೇಳೆ ಅಂಗಾಂಗದ ಸಂಪೂರ್ಣ ವಿವರವನ್ನು ಪಡೆದುಕೊಳ್ಳಲಾಗಿದೆ. ಯಾವ ಪ್ರಾಣಿಯ ಯಾವ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ, ಅದರ ಉದ್ದ, ಅಗಲ, ತೂಕ ಎಷ್ಟೆಂಬುದನ್ನು ಅಳತೆ ಮಾಡಿದ ನಂತರ ಅದನ್ನು ಪಡೆಯಲಾಗಿದೆ. ಜತೆಗೆ ಆ ಬಗ್ಗೆ ದಾಖಲೆಗಳಲ್ಲಿ ನಮೂದಿಸಲಾಗಿದೆ. ಅಂಗಾಂಗ ನೀಡಿದವರ ಪ್ರತಿ ಮಾಹಿತಿಯನ್ನೂ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಅವರು ನೀಡಿದ ವನ್ಯಜೀವಿಗಳ ಅಂಗಾಂಗ ಬೇಟೆ ಅಥವಾ ಬೇರೆ ಮಾರ್ಗದಿಂದ ಪಡೆದಿದ್ದು ಎಂಬುದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರಿಯಾಗುವಂತೆ ಮಾಡಲಾಗಿದೆ.

ಶೇ.60ರಷ್ಟು ಹುಲಿ ಉಗುರು

ಸಲ್ಲಿಕೆಯಾಗಿರುವ ಅಂಗಾಂಗಗಳ ಪೈಕಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹುಲಿ ಉಗುರು ಹೆಚ್ಚಿನ ಪ್ರಮಾಣದಲ್ಲಿವೆ. ಶೇ. 60ಕ್ಕಿಂತ ಹೆಚ್ಚು ಹುಲಿ ಉಗುರಾಗಿದ್ದು, ಅದರ ಜತೆಗೆ ಜಿಂಕೆಯ ಕೊಂಬು, ಚರ್ಮಗಳನ್ನೂ ನೀಡಲಾಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ವಿಭಾಗ ವ್ಯಾಪ್ತಿಯಲ್ಲಿ ಹುಲಿ ಉಗುರಿಗಿಂತ ಜಿಂಕೆ, ಕಾಡೆಮ್ಮೆ ಸೇರಿದಂತೆ ಇನ್ನಿತರ ವನ್ಯಜೀವಿಗಳ ಕೊಂಬು, ಚರ್ಮಗಳನ್ನು ಜನರು ಅರಣ್ಯ ಇಲಾಖೆಗೆ ನೀಡಿದ್ದಾರೆ.--

ಅನಧಿಕೃತ ಪತ್ತೆಯಾದರೆ ಕಠಿಣ ಕ್ರಮ:

ಅರಣ್ಯ ಇಲಾಖೆ ನೀಡಿರುವ ಗಡುವು ಇದೀಗ ಮುಕ್ತಾಯವಾಗಿದ್ದು, ಒಂದು ವೇಳೆ ಯಾವುದೇ ದಾಖಲೆಗಳಿಲ್ಲದೆ, ಪೂರ್ವಜರಿಂದ ಬಳುವಳಿಯಾಗಿ ಬರದೆ ಬೇರೆ ಮೂಲದಿಂದ ಪಡೆದಿರುವ ವನ್ಯಜೀವಿ ಅಂಗಾಂಗ ಪತ್ತೆಯಾದರೆ ಅಂತಹವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸದ್ಯಕ್ಕೆ ಯಾವುದೇ ಪರಿಶೀಲನಾ ಕಾರ್ಯ ಮಾಡದಿದ್ದರೂ, ಮುಂದಿನ ದಿನಗಳಲ್ಲಿ ಆ ಕುರಿತು ಅಭಿಯಾನ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.