ಸಾರಾಂಶ
ಪ್ರೌಢಶಾಲಾ ಶಿಕ್ಷಕರ ಸಭೆ । ಬಿಇಒ ಜವರೇಗೌಡ । ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ಅರಸೀಕೆರೆಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ನೀಡುವಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪರಿಶ್ರಮ ಶ್ಲಾಘನೀಯ. ಮುಂದಿನ ವರ್ಷ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸುವ ಗುರಿ ನಮ್ಮದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ ಜವರೇಗೌಡ ಹೇಳಿದರು
ನಗರದಲ್ಲಿನ ತರಳಬಾಳು ಅನುಭವ ಮಂಟಪ ಶಾಲಾ ಸಭಾಂಗಣದಲ್ಲಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದ ನಾಲ್ಕನೇ ಸ್ಥಾನ ಗಳಿಸಿದ ಶ್ರೀ ಚಂದ್ರಶೇಖರ ಭಾರತಿ ಇಂಟರ್‌ನ್ಯಾಷನಲ್ ಶಾಲೆಯ ಹಂಸಿತ ಮೌದ್ಗಿಲ್ ಮತ್ತು ಸಂತ ಮೇರಿ ಶಾಲೆಯ ವಿದ್ಯಾರ್ಥಿಗಳಾದ ಜುಡಿತ್ ಜೆಸ್ಸಿಕಾ ಮತ್ತು ಧನುಶ್ರೀ ಹಾಗೂ ಗಂಡಸಿ ಅಂಬಿಕಾ ವಿದ್ಯಾರ್ಥಿನಿಯರನ್ನು ಅಭಿನಂದಿಸಿ ಮಾತನಾಡಿದರು.‘ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಮ್ಮ ಜಿಲ್ಲೆಯನ್ನು ರಾಜ್ಯಕ್ಕೆ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯನ್ನು ನಾನು ಹೊಂದಿದ್ದೇನೆ. ಇದಕ್ಕೆ ಶಿಕ್ಷಕರ ಸಹಕಾರ ಬಹಳ ಅಗತ್ಯ. ಈ ನಿಟ್ಟಿನಲ್ಲಿ ನಾನು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಮುಖ್ಯ ಶಿಕ್ಷಕರ ಸಭೆಯನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು, ಅವರಲ್ಲಿ ಪರೀಕ್ಷಾ ಭೀತಿಯನ್ನು ನಿವಾರಣೆ ಮಾಡಿ ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸುವಂತೆ ಸಿದ್ದಗೊಳಿಸಲು ಮಾರ್ಗದರ್ಶನ ನೀಡಲು ಪ್ರಾರಂಭಿಸಿದ್ದೇನೆ. ಈಗಾಗಲೇ ಆಲೂರು ತಾಲೂಕಿನಲ್ಲಿ ಈ ಸಭೆಯನ್ನು ನಡೆಸಲಾಗಿದೆ. ಇತರ ತಾಲೂಕಿನಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ನಡೆಸಲಾಗುವುದು, ವಿಶೇಷವೆಂದರೆ ಸಭೆಗಳನ್ನು ನಡೆಸುತ್ತಿರುವುದು ಬಹುತೇಕ ರಾಜ್ಯದಲ್ಲಿ ನಮ್ಮ ಜಿಲ್ಲೆ ಪ್ರಥಮ’ ಎಂದು ಹೇಳಿದರು.
‘2024- 25ನೇ ಸಾಲಿನ ಪರೀಕ್ಷೆ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಇದ್ದರೂ ಸಹ ನಮ್ಮ ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಪರೀಕ್ಷೆಯನ್ನು ಎದುರಿಸುವಂತೆ ತಯಾರು ಮಾಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಒತ್ತನ್ನು ಕೊಡಿ. ಅವರು ಸ್ಪರ್ಧಾ ಪರೀಕ್ಷೆಗೆ ಅನುವಾಗಲು ಸಹಕಾರಿಯಾಗುವಂತೆ ತಯಾರು ಮಾಡಿ. ಕೆಎಎಸ್, ಐಎಎಸ್ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಮಕ್ಕಳಾಗಬೇಕು. ಆ ನಿಟ್ಟಿನಲ್ಲಿ ಅವರನ್ನು ಪ್ರೋತ್ಸಾಹಿಸಬೇಕು, ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿ. ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಇದಕ್ಕಾಗಿ ನಾನು ನಿಮ್ಮ ಶಿಕ್ಷಕ ವೃಂದವನ್ನ ಅಭಿನಂದಿಸುತ್ತೇನೆ. ಇನ್ನೂ ಹೆಚ್ಚಿನ ಪ್ರಗತಿಯನ್ನು ನಿಮ್ಮಿಂದ ನಾನು ನಿರೀಕ್ಷಿಸುತ್ತೇನೆ’ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಮಾತನಾಡಿ, ‘ಇದೇ ತಿಂಗಳ 31 ರಿಂದ ಶಾಲೆ ಪ್ರಾರಂಭವಾಗುತ್ತದೆ. ಶಿಕ್ಷಕರು ಅಗತ್ಯ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ದಾಖಲಾತಿಗಳು ಮತ್ತು ಇತರ ದಾಖಲೆಗಳನ್ನು ಸಿದ್ಧಗೊಳಿಸಿಕೊಳ್ಳಿ. ಶಾಲಾ ಕೊಠಡಿ ಸ್ವಚ್ಛತೆ ಮತ್ತು ಅಡಿಗೆ ಕೋಣೆ ಮತ್ತು ಅಡಿಗೆ ಕೋಣೆಯಲ್ಲಿನ ಪಾತ್ರಗಳು ಮೊದಲಾದವನ್ನು ಶುಚಿಗೊಳಿಸಿಕೊಳ್ಳಿ’ ಎಂದರು.
ಶಿಕ್ಷಣಾಧಿಕಾರಿ ತಮ್ಮಣ್ಣಗೌಡ, ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್, ಬಿಸಿ ಊಟ ಯೋಜನೆ ಸಹಾಯಕ ನಿರ್ದೇಶಕ ಯೋಗೇಶ್, ಶ್ಶಿಕ್ಷಣ ಸಂಯೋಜಕ ಗಿರೀಶ್, ಹೊಯ್ಸಳೇಶ್ವರ ಪಿಯು ಕಾಲೇಜು ಪ್ರಾಂಶುಪಾಲ ಅಶೋಕ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರ ಸ್ವಾಮಿ ಇದ್ದರು.ಫೋಟೋ: ಅರಸೀಕೆರೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದ ನಾಲ್ಕನೇ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಶಿಕ್ಷಣಾಧಿಕಾರಿ ತಮ್ಮಣ್ಣಗೌಡ, ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್, ಬಿಸಿ ಊಟ ಯೋಜನೆ ಸಹಾಯಕ ನಿರ್ದೇಶಕ ಯೋಗೇಶ್, ಶ್ಶಿಕ್ಷಣ ಸಂಯೋಜಕ ಗಿರೀಶ್, ಹೊಯ್ಸಳೇಶ್ವರ ಪಿಯು ಕಾಲೇಜು ಪ್ರಾಂಶುಪಾಲ ಅಶೋಕ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರ ಸ್ವಾಮಿ ಇದ್ದರು.