ಅಜಾತಶತ್ರು ಸಂಗನಗೌಡರಿಗೆ ಸತತ 4ನೇ ಗೆಲವು

| Published : Apr 05 2024, 01:10 AM IST

ಸಾರಾಂಶ

ಅಂದು ವಿಜಯಪುರ ದಕ್ಷಿಣ ಲೋಕಸಭೆಗೆ ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ, ಬಾದಾಮಿ, ಹುನಗುಂದ, ಗುಳೇದಗುಡ್ಡ ಅಂದಿನ ಧಾರವಾಡ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರಗಳು ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳು ವಿಜಯಪುರ ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಿದ್ದವು.

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ರಾಜಕೀಯ ಇತಿಹಾಸದಲ್ಲಿ ಸಂಸದ ಸಂಗನಗೌಡರ ಹೆಸರು ಅಜರಾಮರವಾಗಿ ಉಳಿದಿದೆ. ವಿಜಯಪುರ ದಕ್ಷಿಣ ಲೋಕಸಭೆಯಿಂದ ಸತತ ಮೂರು ಬಾರಿ ಆಯ್ಕೆಯಾಗಿದ್ದ ಅವರಿಗೆ ಅಜಾತಶತ್ರು ಎನ್ನುವ ಬಿರುದು ಅನಾಯಾಸವಾಗಿ ಸಿಕ್ಕಿತ್ತು. ದೆಹಲಿ ಮಟ್ಟದಲ್ಲೂ ಉತ್ತಮ ಬಾಂಧವ್ಯ ಹೊಂದಿದ್ದ ಗೌಡರಿಗೆ, 1977ರ ಲೋಕಸಭೆ ಚುನಾವಣೆಗೆ ಯಾವುದೇ ಅಡೆತಡೆ ಇಲ್ಲದೆ ಟಿಕೆಟ್ ಸಿಕ್ಕಿತ್ತು.

ವಿಜಯಪುರ ದಕ್ಷಿಣ ಲೋಕಸಭೆಯ ಸ್ವಾತಂತ್ರ್ಯದ ನಂತರದ 6ನೇ ಲೋಕಸಭೆ ಚುನಾವಣೆಯು ಅನೇಕ ಘಟನಾವಳಿಗಳಿಗೆ ಕಾರಣವಾಯಿತು. ಅದರಲ್ಲೂ ರಾಷ್ಟ್ರ ಹಾಗೂ ರಾಜ್ಯದಲ್ಲಿ ಅತ್ಯಂತ ಮಹತ್ವದ ಚುನಾವಣೆಗೆ ಸಾಕ್ಷಿ ಆಯಿತು. ಲೋಕಸಭೆಯ ಅವಧಿ 1976ರಲ್ಲಿಯೆ ಮುಕ್ತಾಯವಾಗಬೇಕಿತ್ತು. ಆದರೆ, ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ದೇಶದೆಲ್ಲೆಡೆ ತುರ್ತು ಪರಸ್ಥಿತಿ ಹೇರಿದ್ದರಿಂದ ಅನಿವಾರ್ಯವಾಗಿ 1ವರ್ಷದ ಅವಧಿಗೆ ಲೋಕಸಭೆಯನ್ನು ವಿಸ್ತರಿಸಿತ್ತು. ಇದರಿಂದ 1976ರಲ್ಲಿ ನಡೆಯಬೇಕಿದ್ದ ಚುನಾವಣೆ 1977ರಲ್ಲಿ ನಡೆಯಿತು.

ಅಂದು ವಿಜಯಪುರ ದಕ್ಷಿಣ ಲೋಕಸಭೆಗೆ ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ, ಬಾದಾಮಿ, ಹುನಗುಂದ, ಗುಳೇದಗುಡ್ಡ ಅಂದಿನ ಧಾರವಾಡ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರಗಳು ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳು ವಿಜಯಪುರ ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಿದ್ದವು.

ರಾಜಕೀಯ ಧ್ರುವೀಕರಣ: ಕಾಂಗ್ರೆಸ್ ಪಕ್ಷದ ವಿರುದ್ಧ ದೇಶದೆಲ್ಲೆಡೆ ವಿವಿಧ ರಾಜಕೀಯ ಪಕ್ಷಗಳು ಒಂದಾಗಲೂ ಪ್ರೇರೆಪಿಸಿದ್ದು ಸಹ 77ರ ಲೋಕಸಭೆ ಚುನಾವಣೆ. ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನಸಂಘ, ಸಮಾಜವಾದಿ ಪಕ್ಷ, ಸ್ವತಂತ್ರ ಪಕ್ಷ ಸೇರಿದಂತೆ ವಿವಿಧ ಪಕ್ಷಗಳು ಸೇರಿ ಜನತಾ ಪಕ್ಷ ಎಂಬ ನೂತನ ಪಕ್ಷವನ್ನು ರಚಿಸಿದವು. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಸ್ಪರ್ಧೆ ನೀಡಲು ಮುಂದಾದವು. ಅಂದು ಲೋಕದಳದಲ್ಲಿದ್ದ ಕೆ.ಕೆ.ತುಂಗಳ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ, ಸೋಲಿಲ್ಲದ ಸರದಾರ ಸಂಗನಗೌಡರ ವಿರುದ್ಧ ಇವರು ಸೋಲು ಕಾಣಬೇಕಾಯಿತು. 1962, 1967, 1971ರ ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಭರ್ಜರಿ ಗೆಲವು ಸಾಧಿಸಿದ್ದ ಸುನಗದ ಸಂಗನಗೌಡರು 77ರಲ್ಲಿಯೂ ಸಹ ದಾಖಲೆ ಮತಗಳ ಅಂತರದಿಂದ ಗೆಲವು ಸಾಧಿಸಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಕೈಬಲ ಪಡಿಸಿದ್ದರು. ಪ್ರತಿಪಕ್ಷಗಳು ಹೆಣೆದ ಕಾರ್ಯತಂತ್ರ 77ರ ಚುನಾವಣೆಯಲ್ಲಿಯೂ ಸಹ ಕಾರ್ಯರೂಪಕ್ಕೆ ಬರಲಿಲ್ಲ ಎನ್ನುವುದು ಸಹ ವಿಶೇಷ.

ಅಂದು ನಡೆದ ಚುನಾವಣೆಯಲ್ಲಿ ಒಟ್ಟು ಮತದಾನವಾದ ಮತಗಳು 3,66,290. ಶೇಕಡಾ (58.49)ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಸ್.ಬಿ.ಪಾಟೀಲ 2,12,393 ಮತಗಳನ್ನು ಪಡೆದು ಆಯ್ಕೆಯಾದರು. ಅವರ ಪ್ರತಿ ಸ್ಪರ್ಧಿ ಭಾರತೀಯ ಲೋಕದಳದ ಅಭ್ಯರ್ಥಿ ಕೃಷ್ಣಪ್ಪ ಕೇಶವರಾವ್ ತುಂಗಳ ಅವರು 1,40,295 ಮತಗಳನ್ನು ಮಾತ್ರ ಪಡೆದು ಪರಾಭವಗೊಂಡಿದ್ದರು. ಗೆಲವಿನ ಅಂತರ 72,098 ರಷ್ಟಿತ್ತು.

--

ಬಾಕ್ಸ್ :

ಅಜಾತ ಶತ್ರು: ಸುನಗದ ಸಂಗನಗೌಡರು ಅಂದಿನ ದಿನಗಳಲ್ಲಿ ಸತತ 4 ಬಾರಿ ಗೆಲ್ಲಲು ಅವರಲ್ಲಿದ್ದ ಸರಳತೆ ಮತ್ತು ಪ್ರಾಮಾಣಿಕತೆ ಬಹುಮುಖ್ಯವಾಗಿತ್ತು. ಇಂದಿರಾಗಾಂಧಿ, ಬಿ.ಡಿ.ಜತ್ತಿ, ವಿರೇಂದ್ರ ಪಾಟೀಲ ಅವರಂತಹ ನಾಯಕರ ಜೊತೆಗಿನ ಒಡನಾಟ, ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆ, ತಮ್ಮ ಆಸ್ತಿಯನ್ನು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಬಿಟ್ಟುಕೊಟ್ಟಿದ್ದು ಅವರಲ್ಲಿನ ಸರಳ ಬದುಕಿಗೆ ಹಿಡಿದ ಕನ್ನಡಿಯಾಗಿತ್ತು. ಎಂದೂ ಐಷಾರಾಮಿ ಜೀವನಕ್ಕೆ ಹಾತೊರೆಯದೆ ಸರಳ ಬದುಕು ನಡೆಸಿದ್ದರು. ಸಂಗನಗೌಡರಲ್ಲಿದ್ದ ನಿಜವಾದ ಗಾಂಧಿ ತತ್ವ ಅವರನ್ನು ಅಖಂಡ ವಿಜಯಪುರ ಜಿಲ್ಲೆಯಲ್ಲಿಯೆ ಅಜಾತಶತ್ರುವನಾಗಿ ಮಾಡಿತ್ತು.