19ರಿಂದ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ: ಕಲ್ಯಾಣಶೆಟ್ಟರ

| Published : Feb 17 2025, 12:35 AM IST

ಸಾರಾಂಶ

ಸದ್ಗುರು ಸಿದ್ದಾರೂಢಸ್ವಾಮಿ ಅವರ 190ನೇ ಜಯಂತ್ಯುತ್ಸವ, ಶ್ರೀ ಗುರುನಾಥರೂಢರ 115ನೇ ಜಯಂತ್ಯುತ್ಸವ, ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ಕಾರ್ಯಕ್ರಮ ಫೆ. 19ರಿಂದ 26ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಹುಬ್ಬಳ್ಳಿ: ಇಲ್ಲಿನ ಸದ್ಗುರು ಸಿದ್ದಾರೂಢಸ್ವಾಮಿ ಅವರ 190ನೇ ಜಯಂತ್ಯುತ್ಸವ, ಶ್ರೀ ಗುರುನಾಥರೂಢರ 115ನೇ ಜಯಂತ್ಯುತ್ಸವ, ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ಕಾರ್ಯಕ್ರಮ ಫೆ. 19ರಿಂದ 26ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್‌ ಕಮಿಟಿ ಚೇರ್‌ಮನ್‌ ಬಸವರಾಜ ಕಲ್ಯಾಣಶೆಟ್ಟರ್‌ ಹೇಳಿದರು.

ಶ್ರೀಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಕಳೆದ ಡಿ. 23ರಂದು ಸಿದ್ದಾರೂಢರ ಜನ್ಮಸ್ಥಳ ಚಳಕಾಪುರದಿಂದ ಆರಂಭಗೊಂಡಿರುವ ಆರೂಢಜ್ಯೋತಿ ಮೆರವಣಿಗೆ ಆಂಧ್ರ, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ 16 ಜಿಲ್ಲೆಗಳಲ್ಲಿ ಸಂಚರಿಸಿ ಫೆ. 18ರಂದು ನಗರಕ್ಕೆ ಆಗಮಿಸಲಿದೆ. ಕಥಾಮೃತದ ಮೆರವಣಿಗೆ

ಫೆ. 19ರಂದು ಬೆಳಗ್ಗೆ 9ಕ್ಕೆ ಗಣೇಶಪೇಟೆ ಜಡಿಸಿದ್ದೇಶ್ವರ ಮಠದಿಂದ ಆರಂಭಗೊಳ್ಳುವ ಮೆರವಣಿಗೆ 1008 ಕುಂಭಮೇಳ, 1008 ಆರತಿ, 10 ಸಾವಿರ ಜನರು ಸಿದ್ಧಾರೂಢರ ಚರಿತ್ರೆ ಪುಸ್ತಕವನ್ನು ತಲೆಯ ಮೇಲೆ ಹೊತ್ತು ಓಂ ನಮಃ ಶಿವಾಯ ಪಠಣದೊಂದಿಗೆ ವಿವಿಧ ವಾಧ್ಯಮೇಳದೊಂದಿಗೆ ಸಾಗುವರು. ಆನೆ ಅಂಬಾರಿ ಮೇಲೆ ಸಿದ್ಧಾರೂಢರು, ಗುರುನಾಥರೂಢರ ಭವ್ಯ ಮೂರ್ತಿಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಸಂಜೆ 5ಕ್ಕೆ ಶ್ರೀಮಠಕ್ಕೆ ಆಗಮಿಸಲಿದೆ ಎಂದರು.

ವಿಶ್ವ ವೇದಾಂತ ಪರಿಷತ್ ಕಾರ್ಯಕ್ರಮ

ವಿಶ್ವವೇದಾಂತ ಪರಿಷತ್‌ ಸಮಿತಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ ಮಾತನಾಡಿ, ಫೆ. 20ರಿಂದ 26ರ ವರೆಗೆ ಶ್ರೀಮಠದ ಆವರಣದಲ್ಲಿ ವಿಶ್ವ ಶಾಂತಿಗಾಗಿ ವಿಶ್ವ ವೇದಾಂತ ಪರಿಷತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 20ರಂದು ಬೆಳಗ್ಗೆ 9.30ಕ್ಕೆ ಹರಿದ್ವಾರದ ಬಾಬಾ ರಾಮದೇವ ಕಾರ್ಯಕ್ರಮ ಉದ್ಘಾಟಿಸುವರು. ಡಾ. ಶಿವಾನಂದ ಭಾರತಿ ಶ್ರೀಗಳು, ಬಸವರಾಜ ದೇಶಿಕೇಂದ್ರ ಶ್ರೀಗಳು, ಡಾ. ಶಿವಕುಮಾರ ಶ್ರೀಗಳು, ಡಾ. ಷಡಕ್ಷರಿ ಮುರುಘರಾಜೇಂದ್ರ ಶ್ರೀಗಳು ಸೇರಿದಂತೆ ಇನ್ನೂ ಹಲವಾರು ಮಠಾಧೀಶರು ಸಾನ್ನಿಧ್ಯ ವಹಿಸುವರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಕೇಂದ್ರದ ರಾಜ್ಯ ಖಾತೆ ಸಚಿವರಾದ ಶ್ರೀಪಾದ ನಾಯಕ, ವಿ. ಸೋಮಣ್ಣ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹ ಸಚಿವ ಜಿ. ಪರಮೇಶ್ವರ, ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಸೇರಿದಂತೆ ಹಲವು ಗಣ್ಯರಿಂದ 54 ಗ್ರಂಥಗಳ ಲೋಕಾರ್ಪಣೆ ಜರುಗಲಿದೆ.

ಅನುಭಾವಮೃತ

ಅಂದು ಸಂಜೆ 6.30ಕ್ಕೆ ಶ್ರೀ ಗುರು ವಚನದಿಂದಧಿಕ ಸುಧೆಯುಂಟೆ ಕಾರ್ಯಕ್ರಮ ನಡೆಯಲಿದೆ. ಶ್ರೀ ಡಾ. ಶಿವಾನಂದ ಭಾರತಿ ಶ್ರೀಗಳು, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳರು, ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು, ಡಾ. ವೀರೇಂದ್ರ ಹೆಗ್ಗಡೆ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದರು.

ಫೆ. 21ರಂದು ಬೆಳಗ್ಗೆ 9ಕ್ಕೆ ಈಶಾವಾಸ್ಯಮಿದಂ ಸರ್ವಂ, ಸಂಜೆ 6.30 ಕ್ಕೆ ಚಿಂತಸದಿರು ಸುಖದುಃಖದೆಡೆಯೊಳು, ಫೆ. 22ರಂದು ಬೆಳಗ್ಗೆ 9 ಕ್ಕೆ ಯೋಗಕ್ಷೇಮಂ ವಹಾಮ್ಯಹಮ್, ಸಂಜೆ 6.30ಕ್ಕೆ ದುರಿತ ಕರ್ಮವನೊಲ್ಲದಿರು ಪುಣ್ಯವನೆಮಾಡು, ಫೆ. 23ರಂದು ಬೆಳಗ್ಗೆ 9ಕ್ಕೆ ಚತುರ್ವಿಧಾ ಭಜಂತೆ ಮಾ ಜನಾಃ, ಸಂಜೆ 6.30ಕ್ಕೆ ಕ್ಷಣಮಪಿ ಸಜ್ಜನ ಸಂಗತಿರೇಖಾ, ಫೆ. 24ರಂದು ಬೆಳಗ್ಗೆ 9ಕ್ಕೆ ಬ್ರಹ್ಮಸತ್ಯಂ ಜಗನ್ಮಿಥ್ಯಾ, ಸಂಜೆ 6.30ಕ್ಕೆ ವಿಮಲ ಮಾನಸದಿಂದೆ ಶುಭತೀರ್ಥಮುಂಟೆ, 25ರಂದು ಬೆಳಗ್ಗೆ 9ಕ್ಕೆ ಯದ್ಯದಾಚರತಿ ಶ್ರೇಷ್ಠಃ, ಸಂಜೆ 6.30ಕ್ಕೆ ತದ್ವಿದ್ಧಿ ಪ್ರಣಿಪಾತೇನ, ಫೆ. 26ರಂದು 9ಕ್ಕೆ ನಾಸತೋ ವಿದ್ಯತೇ ಭಾವಃ, ಸಂಜೆ 6.30ಕ್ಕೆ ಸ್ಥಿತಪ್ರಜ್ಞ ಶ್ರೀ ಸಿದ್ಧಾರೂಢರು ಕುರಿತು ಅನುಭಾವಮೃತ ನಡೆಯಲಿದೆ ಎಂದರು.

ಫೆ. 27ರಂದು ಬೆಳಗ್ಗೆ 9ಕ್ಕೆ ದಾನಿಗಳಿಗೆ, ಗಣ್ಯರಿಗೆ ಹಾಗೂ ಮಾಜಿ ಧರ್ಮದರ್ಶಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ 250ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದು, ಸುಮಾರು 20 ಸಾವಿರ ಜನರಿಗೆ ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಡಾ. ಗೋವಿಂದ ಮಣ್ಣೂರ, ಚನ್ನವೀರಪ್ಪ ಮುಂಗರವಾಡಿ, ವಸಂತ ಸಾಲಗಟ್ಟಿ, ಗೀತಾ ಕಲ್ಬುರ್ಗಿ ಸೇರಿದಂತೆ ಹಲವರಿದ್ದರು.27ರಂದು ಸಿದ್ಧಾರೂಢರ ಮಠದ ಅದ್ಧೂರಿ ರಥೋತ್ಸವ

ಹುಬ್ಬಳ್ಳಿ: ಶಿವರಾತ್ರಿ ಮಹೋತ್ಸವದ ಅಂಗವಾಗಿ ಫೆ. 26ರಿಂದ ಮಾ. 1ರ ವರೆಗೆ ಸಿದ್ಧಾರೂಢ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ. ಫೆ. 27ರಂದು ಸಂಜೆ ಅದ್ಧೂರಿ ರಥೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಶಿವರಾತ್ರಿ ಮಹೋತ್ಸವ ಫೆ. 21ರಿಂದಲೇ ಶಿವನಾಮ ಸಪ್ತಾಹದೊಂದಿಗೆ ಪ್ರಾರಂಭವಾಗಲಿದೆ. ಪ್ರತಿನಿತ್ಯ ಬೆಳಗ್ಗೆ 7.45ಕ್ಕೆ ಶ್ರೀ ಸಿದ್ಧಾರೂಢ ಭಾರತಿ ಕಲ್ಪಧ್ರುಮ ಪುರಾಣ ಪಠಣ, ಬೆಳಗ್ಗೆ 9ಕ್ಕೆ ಮಹಾತ್ಮರು, ಪಂಡಿತರಿಂದ ವೇದಾಂತ ಉಪನ್ಯಾಸಗಳು ಜರುಗಲಿವೆ. ಸಂಜೆ 5 ಗಂಟೆಗೆ ಕೀರ್ತನೆ, ಮಹಾಪೂಜೆ ನಡೆಯಲಿದೆ.

ಫೆ. 26ರಂದು ಮಹಾಶಿವರಾತ್ರಿ ಜಾಗರಣೆ ನಿಮಿತ್ತ ಪಲ್ಲಕ್ಕಿ ಉತ್ಸವ ಗಣೇಶಪೇಟೆಯಲ್ಲಿರುವ ಶ್ರೀ ಜಡಿಸ್ವಾಮಿ ಮಠಕ್ಕೆ ತೆರಳಿ ಮರಳಿ ಶ್ರೀಮಠಕ್ಕೆ ಆಗಮಿಸಲಿದೆ. ಫೆ. 27ರಂದು ಪಲ್ಲಕ್ಕಿ ಉತ್ಸವದ ನಂತರ ಸಂಜೆ 5.30ಕ್ಕೆ ಅದ್ಧೂರಿ ರಥೋತ್ಸವ ಜರುಗಲಿದೆ. ಫೆ. 28ರಂದು ಶಿವರಾತ್ರಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬೆಳಗ್ಗೆ 5ರಿಂದ 6ರ ವರೆಗೆ ಭಸ್ಮಸ್ನಾನ ನೆರವೇರಲಿದೆ. ಮಾ. 1ರಂದು ಸಂಜೆ 6.30ಕ್ಕೆ ಕೌದಿ ಪೂಜೆಯೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ ಎಂದು ಮಾಹಿತಿ ನೀಡಿದರು.