ಸಾರಾಂಶ
ಕಾರವಾರ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲೆಯ ಯುವ ಜನತೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಲು ಹೆಚ್ಚಿನ ಉತ್ಸಾಹ ತೋರಿಸಿದ್ದಾರೆ. ವಿಶೇಷ ನೋಂದಣಿ ಅಭಿಯಾನದ ಅವಧಿಯಲ್ಲಿ 2,796 ಮತದಾರರು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ.
ಮತದಾರರ ಪಟ್ಟಿಯ ಪರಿಷ್ಕರಣೆಯ ಅರ್ಹತಾ ದಿನವಾದ ಜ. 1, 2025ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಅವಧಿಯಲ್ಲಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ, ತೆಗೆದು ಹಾಕುವಿಕೆ, ತಿದ್ದುಪಡಿ ಮಾಡುವ ಕುರಿತಂತೆ ನ. 9 ಮತ್ತು 10 ಹಾಗೂ 23 ಮತ್ತು 24ರಂದು ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮ ಆಯೋಜಸಿದ್ದು, ಈ ಅವಧಿಯಲ್ಲಿ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳು ಹಾಜರಿದ್ದು, ಸಾರ್ವಜನಿಕರಿಂದ ನಮೂನೆ 6, ನಮೂನೆ 7 ಮತ್ತು ನಮೂನೆ 8ರಲ್ಲಿ ಅರ್ಜಿಗಳನ್ನು ಸ್ವೀಕರಿಸಿದ್ದಾರೆ.ವಿಶೇಷ ನೋಂದಣಿ ಅಭಿಯಾನದ ಅವಧಿಯಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 422 ಹೊಸ ಮತದಾರರು ಸೇರ್ಪಡೆಗೆ ಅರ್ಜಿ ನೀಡಿದ್ದು, 258 ಜನ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಾರವಾರದಲ್ಲಿ ಹೊಸ ಸೇರ್ಪಡೆಗೆ 333 , ತಿದ್ದುಪಡಿಗಾಗಿ 332, ಕುಮಟಾದಲ್ಲಿ ಹೊಸ ಸೇರ್ಪಡೆಗೆ 263, ತಿದ್ದುಪಡಿಗಾಗಿ 223, ಭಟ್ಕಳದಲ್ಲಿ ಹೊಸ ಸೇರ್ಪಡೆಗೆ 254, ತಿದ್ದುಪಡಿಗಾಗಿ 250, ಶಿರಸಿಯಲ್ಲಿ ಹೊಸ ಸೇರ್ಪಡೆಗೆ 476, ತಿದ್ದುಪಡಿಗಾಗಿ 327, ಯಲ್ಲಾಪುರದಲ್ಲಿ ಹೊಸ ಸೇರ್ಪಡೆಗೆ 1048, ತಿದ್ದುಪಡಿಗಾಗಿ 865 ಅರ್ಜಿ ಸ್ವೀಕರಿಸಲಾಗಿದೆ.
ವಿಶೇಷ ನೋಂದಣಿ ಅಭಿಯಾನದ ಈ ಅವಧಿಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಒಟ್ಟು 2,796 ಜನ ನಮೂನೆ 6ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದ್ದು, 2027 ಜನ ಮತದಾರರ ಪಟ್ಟಿಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲು ನಮೂನೆ 8ರಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಅವಕಾಶ ಬಳಕೆಗೆ ಸೂಚನೆ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ. 1-1-2025 ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭವಾಗಿದ್ದು, ಯುವ ಮತದಾರರು ಹಾಗೂ ಸಾರ್ವಜನಿಕರು ಹೊಸದಾಗಿ ಹೆಸರು ಸೇರ್ಪಡೆಗಾಗಿ, ಹೆಸರು ಕಡಿಮೆಗೊಳಿಸಲು, ವರ್ಗಾವಣೆ, ಹೆಸರಿನಲ್ಲಿ ತಿದ್ದುಪಡಿಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗೆ(ಬಿಎಲ್‌ಒ) ಅಥವಾ VHA(voter helpline mobile app) ಮೂಲಕವೂ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು.ಇಂದು ಅಳ್ವೆಕೋಡಿಯಲ್ಲಿ ಪ್ರತಿಭಾ ಪುರಸ್ಕಾರ
ಭಟ್ಕಳ: ತಾಲೂಕಿನ ಅಳ್ವೆಕೋಡಿಯ ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ ಡಿ. 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ 12ನೇ ವರ್ಷದ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ.ಕಾರ್ಯಕ್ರಮದಲ್ಲಿ ಗೋಕರ್ಣ ಪರ್ತಗಾಳಿ ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಉಪಸ್ಥಿತಿ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಸುನೀಲ ನಾಯ್ಕ, ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಹನುಮಂತ ನಾಯ್ಕ, ನಾರಾಯಣ ದೈಮನೆ, ಮಾರಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮ ಎಂ. ಮೊಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ ಪಾಲ್ಗೊಳ್ಳಲಿದ್ದಾರೆ ಎಂದು ದುರ್ಗಾದೇವಿ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ ತಿಳಿಸಿದ್ದಾರೆ.