ಹೊಸ ಪಡಿತರ ಕಾರ್ಡ್ ಗೆ 2.90 ಲಕ್ಷ ಅರ್ಜಿ
KannadaprabhaNewsNetwork | Published : Nov 04 2023, 12:31 AM IST
ಹೊಸ ಪಡಿತರ ಕಾರ್ಡ್ ಗೆ 2.90 ಲಕ್ಷ ಅರ್ಜಿ
ಸಾರಾಂಶ
ನಮ್ಮ ಸರ್ಕಾರ ನುಡಿದ್ದಂತೆ ನಡೆಯುತ್ತಿದೆ. 5 ಗ್ಯಾರಂಟಿ ಯೋಜನೆ ಘೋಷಣೆ ಮಾಡಲಾಗಿತ್ತು. ಅದರಲ್ಲಿ ನಾಲ್ಕು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ನಮ್ಮ ಸರ್ಕಾರ ನುಡಿದ್ದಂತೆ ನಡೆಯುತ್ತಿದೆ. 5 ಗ್ಯಾರಂಟಿ ಯೋಜನೆ ಘೋಷಣೆ ಮಾಡಲಾಗಿತ್ತು. ಅದರಲ್ಲಿ ನಾಲ್ಕು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಮುಂಬರುವ ದಿನಗಳಲ್ಲಿ 5ನೆಯ ಗ್ಯಾರಂಟಿಯನ್ನೂ ಜಾರಿಗೊಳಿಸುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. ಶುಕ್ರವಾರ ಇಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಬಳಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಈಗಾಗಲೇ ಹೊಸ ಪಡಿತರ ಕಾರ್ಡ್ ಗಾಗಿ 2.90 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಷ್ಕರಣೆ ಮಾಡಿ ಅರ್ಹರಿಗೆ ಹೊಸ ಪಡಿತರ ಕಾರ್ಡ್ ವಿತರಿಸಲಾಗುವುದು. ಅನರ್ಹರೂ ಪಡಿತರ ಕಾರ್ಡ್ ಹೊಂದಿರುವುದು ಕಂಡು ಬಂದಿದ್ದು, ಆದಷ್ಟು ಬೇಗನೆ ಗುರುತಿಸಿ ಕಾರ್ಡ್ ಗಳನ್ನು ರದ್ದು ಪಡಿಸಲಾಗುತ್ತದೆ. ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿರುವುದರ ಬಗ್ಗೆ ದೂರು ಬಂದಿವೆ. ಈ ಕುರಿತು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಪಡಿತರ ಕಾರ್ಡ್ ಹೊಂದಿದ್ದರೂ ಸರ್ಕಾರದ ಬೇರೆ ಬೇರೆ ಯೋಜನೆ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಕೆಲವರ ಪಡಿತರ ಕಾರ್ಡ್ ರದ್ದು ಪಡಿಸುವುದಿಲ್ಲ ಎಂದರು. ತೆಲಂಗಾಣ, ಆಂಧ್ರಪ್ರದೇಶ ಹಾಗೂ ಛತ್ತಿಸಗಡ ರಾಜ್ಯಗಳಿಂದ ಅಕ್ಕಿಯನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಮರ್ಪಕ ಅಕ್ಕಿ ದೊರೆತ ನಂತರ ಹಣ ಸಂದಾಯದ ಬದಲಾಗಿ ಮೊದಲಿನಂತೆ ಅಕ್ಕಿ ವಿತರಿಸಲಾಗುವುದು. ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲಾಗುತ್ತದೆ. ಸರ್ಕಾರ ಸಮರ್ಥವಾಗಿ ಬರ ಪರಿಸ್ಥಿತಿಯನ್ನು ನಿರ್ವಹಿಸಲಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎನ್.ಎಚ್. ಕೋನರೆಡ್ಡಿ, ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಸೇರಿದಂತೆ ಇತರರು ಹಾಜರಿದ್ದರು.