ನಾಳೆಯಿಂದ 2 ದಿನ ಗುತ್ತಿಗೆದಾರರ ಸಮ್ಮೇಳನ: ಕೋಟೆ ಮಂಜುನಾಥ್

| Published : Mar 03 2024, 01:33 AM IST

ನಾಳೆಯಿಂದ 2 ದಿನ ಗುತ್ತಿಗೆದಾರರ ಸಮ್ಮೇಳನ: ಕೋಟೆ ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

1948 ರಿಂದ ಪ್ರಾರಂಭವಾದ ಸಂಘವನ್ನು ಹಲವಾರು ಅಧ್ಯಕ್ಷರು ಮುನ್ನಡೆಸುತ್ತಾ ಬಂದಿದ್ದಾರೆ, ಈಗ ಕೆಂಪಯ್ಯನವರು ಅಧ್ಯಕ್ಷರಾಗಿದ್ದು, ಗುತ್ತಿಗೆದಾರರ ಸಮಸೈಗಳಿಗೆ ಸ್ಪಂದಿಸುತ್ತಿದ್ದಾರೆ. ಗುತ್ತಿಗೆದಾರರ ಸಮಸ್ಯೆಗಳಾದ ಜಿಎಸ್ಟಿ , ಪ್ಯಾಕೇಜ್ ಗುತ್ತಿಗೆಯ ಬಗ್ಗೆ ಚರ್ಚೆ ನಡೆಯಲಿದೆ. ಜಿಎಸ್ಟಿಯಿಂದ ಗುತ್ತಿಗೆದಾರರಿಗೆ ವಿವಿಧ ರೀತಿಯ ಸಮಸ್ಯೆ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯ ಸಮ್ಮೇಳನ ಮಾ.4 ಮತ್ತು 5ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಸಂಘದ ಕಾರ್ಯದರ್ಶಿ ಕೋಟೆ ಮಂಜುನಾಥ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಗುತ್ತಿಗೆದಾರರ ಸಮಸ್ಯೆಗಳಿಗೆ ಸಂಬಂಧಿಸಿ ಎರಡು ದಿನ ಗಂಭೀರ ಚರ್ಚೆ ನಡೆಯಲಿದೆ. ಸಚಿವ ಸಂಪುಟದ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.

1948 ರಿಂದ ಪ್ರಾರಂಭವಾದ ಸಂಘವನ್ನು ಹಲವಾರು ಅಧ್ಯಕ್ಷರು ಮುನ್ನಡೆಸುತ್ತಾ ಬಂದಿದ್ದಾರೆ, ಈಗ ಕೆಂಪಯ್ಯನವರು ಅಧ್ಯಕ್ಷರಾಗಿದ್ದು, ಗುತ್ತಿಗೆದಾರರ ಸಮಸೈಗಳಿಗೆ ಸ್ಪಂದಿಸುತ್ತಿದ್ದಾರೆ. ಗುತ್ತಿಗೆದಾರರ ಸಮಸ್ಯೆಗಳಾದ ಜಿಎಸ್ಟಿ , ಪ್ಯಾಕೇಜ್ ಗುತ್ತಿಗೆಯ ಬಗ್ಗೆ ಚರ್ಚೆ ನಡೆಯಲಿದೆ. ಜಿಎಸ್ಟಿಯಿಂದ ಗುತ್ತಿಗೆದಾರರಿಗೆ ವಿವಿಧ ರೀತಿಯ ಸಮಸ್ಯೆ ಉಂಟಾಗಿದೆ. ಇದೇ ರೀತಿ ನಾವು ಮಾಡಿದ ಕೆಲಸಕ್ಕೆ ಸರ್ಕಾರ ಇದುವರೆವಿಗೂ ಹಣವನ್ನು ಬಿಡುಗಡೆ ಮಾಡಿಲ್ಲ. ಪ್ಯಾಕೇಜ್ ಗುತ್ತಿಗೆ ನೀಡುವಲ್ಲಿ ಅಧಿಕಾರಿಗಳು ಶಾಮೀಲು ಆಗಿ ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ. ಇದರಿಂದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ಜಿಲ್ಲೆಯಿಂದ 350ಕ್ಕೂ ಹೆಚ್ಚು ಮಂದಿ ಭಾಗಿ:

ಚಿತ್ರದುರ್ಗ ಜಿಲ್ಲೆಯಲ್ಲಿ ವಿವಿಧ ಇಲಾಖೆ ಹಾಗೂ ನಗರಸಭೆಯಿಂದ ಸುಮಾರು 380 ಮಂದಿ ಗುತ್ತಿಗೆದಾರರಿದ್ದು ಇದರಲ್ಲಿ 350 ಮಂದಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಂಘದಿಂದ ಸಮ್ಮೇಳನಕ್ಕೆ ಹೋಗಿ ಬರಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಸಂಘದ ಸದಸ್ಯರು ಸಮಾವೇಶದ ಸ್ಥಳದಲ್ಲಿಯೇ ಹೆಸರನ್ನು ನೋಂದಾಯಿಸಬಹುದಾಗಿದೆ. ಸಮ್ಮೇಳನಕ್ಕೆ ಬರುವವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ.ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಇತ್ತು. ಈಗಿನ ಸರ್ಕಾರದಲ್ಲಿಯೂ ಭ್ರಷ್ಠಾಚಾರವಿಲ್ಲವೆಂದು ಹೇಳುವುದಿಲ್ಲ.ಆದರೆ ಇಲ್ಲಿ ನೇರವಾಗಿ ಮಂತ್ರಿಗಳು ಭಾಗಿಯಾಗದೇ ಅಧಿಕಾರಿಗಳ ಮೂಲಕ ಪಡೆಯುತ್ತಿದ್ದಾರೆ. ಇದು ತಪ್ಪಬೇಕಿದೆ ಎಂದರು.

ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಮಲ್ಲೇಶಪ್ಪ, ರಾಜ್ಯ ನಿರ್ದೇಶಕರಾದ ಕುಮಾರ್, ಹೇಮಂತ್, ಡಿಸಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಅಜಯ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ಡಿವೈಡರ್ ಬೇಡ ಅಂದಿದ್ದೆವು

ಚಿತ್ರದುರ್ಗ ನಗರದಲ್ಲಿ ಡಿವೈಡರ್ ಗಳ ನಿರ್ಮಾಣ ಬೇಡವೆಂದು ಗುತ್ತಿಗೆದಾರರು ಮೊದಲೇ ತಿಳಿಸಿದ್ದೆವು. ಈ ಬಗ್ಗೆ ಸಂಬಂಧಿಸಿದವರಿಗೆ ಪತ್ರ ಕೂಡ ಬರೆದಿದ್ದೆವು. ಆದರೆ ಅಧಿಕಾರಿಗಳು ನಮ್ಮ ಮಾತನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಯಾರ ಮಾತನ್ನು ಕೇಳದೆ ರಸ್ತೆ ಮಧ್ಯದಲ್ಲಿ ಅವೈಜ್ಞಾನಿಕವಾಗಿ ಡಿವೈಡರ್‌ಗಳ ನಿರ್ಮಾಣ ಮಾಡಿದ್ದಾರೆ. ಈಗ ಅವುಗಳ ಒಡೆಯಲಾಗುತ್ತಿದೆ. ಕಟ್ಟವುದು, ನಂತರ ಕೆಡವಿದರೆ ಅದರಿಂದಾಗುವ ನಷ್ಟಕ್ಕೆ ಯಾರು ಹೊಣೆ. ಕೆಲ ಗುತ್ತಿಗೆದಾರರಿಗೆ ಈಗಲೂ ಹಣ ಪಾವತಿ ಮಾಡಿಲ್ಲ. ಅಧಿಕಾರಿಗಳು ಸೂಚಿಸಿದ ಅನುಸಾರ ಡಿವೈಡರ್ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಗುತ್ತಿಗೆದಾರರ ತಪ್ಪೇನೂ ಇಲ್ಲ. ಡಿವೈಡರ್ ಗಳು ಅಧಿಕಾರಿಗಳಿಂದ ಆದ ಪ್ರಮಾದವಾಗಿದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಸಂಘದ ಕಾರ್ಯದರ್ಶಿ ಕೋಟೆ ಮಂಜುನಾಥ್ ಹೇಳಿದರು.