ಪರಂಪರೆಯಂತೆ ತಾಲೂಕಿನ ಬಿನ್ನಾಳ ಗ್ರಾಮದ ನಂದಿಕೋಲು ಆಗಮಿಸಿತು

ಕುಕನೂರು: ಪಟ್ಟಣದ ಗುದ್ನೇಪ್ಪನಮಠದ ಶ್ರೀಗುದ್ನೇಶ್ವರ ಮಹಾ ಪಂಚಕಳಸ ರಥೋತ್ಸವ ಗುರುವಾರ ಸಂಜೆ ಸುಮಾರು 2 ಲಕ್ಷ ಭಕ್ತಗಣದ ಮಧ್ಯೆ ಅದ್ಧೂರಿಯಿಂದ ಜರುಗಿತು.

ಕಳೆದ ಐದಿನೈದು ದಿನಗಳಿಂದ ಗುದ್ನೇಶ್ವರ ರಥೋತ್ಸವ ಕಣ್ತುಂಬಿಕೊಳ್ಳಲು ಜನರು ಕಾತರಾಗಿದ್ದರು. ಗುದ್ನೇಪ್ಪನಮಠದ ಶ್ರೀಗುದ್ನೇಶ್ವರ ದೇವಸ್ಥಾನದಲ್ಲಿ ನಾನಾ ಧಾರ್ಮಿಕ ಕಾರ್ಯಗಳು ಕಳೆದ ಹತ್ತಾರು ದಿನಗಳಿಂದ ಜರುಗಿದ್ದವು. ಈ ಭಾಗದ ಅತ್ಯಂತ ದೊಡ್ಡ ಹಾಗೂ ಐತಿಹ್ಯವುಳ್ಳ ಮಹಾರಥೋತ್ಸವದಲ್ಲಿ ಒಂದಾದ ಗುದ್ನೇಶ್ವರ ರಥೋತ್ಸವಕ್ಕೆ ಜನ ಕಿಕ್ಕೀರಿದು ಆಗಮಿಸಿತು. ಗುದ್ನೇಪ್ಪನಮಠದ ಮೊರಾರ್ಜಿ ಶಾಲೆ ಮುಂದೆ,ರಥದ ಬೀದಿಗಳಲ್ಲಿ ಜನದಟ್ಟಣೆ ಅತ್ಯಧಿಕ ಆಗಿತ್ತು.

ಪರಂಪರೆಯಂತೆ ತಾಲೂಕಿನ ಬಿನ್ನಾಳ ಗ್ರಾಮದ ನಂದಿಕೋಲು ಆಗಮಿಸಿತು. ಗುದ್ನೇಪ್ಪನಮಠ ಶ್ರೀಪ್ರಭುಲಿಂಗದೇವರು, ಅನ್ನದಾನೀಶ್ವರ ಶಾಖಾಮಠದ ಶ್ರೀಮಹಾದೇವ ಸ್ವಾಮೀಜಿ,ಯಲಬುರ್ಗಾ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು, ಇಟಗಿ ಭೂ ಕೈಲಾಸ ಮೇಲುಗದ್ದುಗೆಯ ಶ್ರೀಗುರುಶಾಂತವೀರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.

ರಥ ಸಾಗುತ್ತಿದ್ದಂತೆ ಭಕ್ತರು ಜಯಘೋಷ ಕೂಗಿದರು. ರಥದ ಮುಂದೆ ದಿವಟಗಿ ಹಿಡಿದು ಭಕ್ತರು ಸಾಗಿದರು. ಹೂವಿನ ಅಲಂಕಾರದಿಂದ ಶೋಭಾಮಾನವಾಗಿದ್ದ ರಥೋತ್ಸವಕ್ಕೆ ದಿವಟಗಿಯ ಬೆಳಕು ಮೆರಗು ನೀಡಿದವು. ರಥದ ಮುಂದೆ ನಂದಿಕೋಲು ಹಾಗೂ ಕಕ್ಕಿಹಳ್ಳಿ ಗ್ರಾಮದ ಹಾಗೂ ಗುದ್ನೇಪ್ಪನಮಠದ ಅಡ್ಡಪಲ್ಲಕ್ಕಿ ಸಾಗಿದವು. ವಿರಾಜಮಾನವಾಗಿ ಸಾಗಿದ ಗುದ್ನೇಶ್ವರ ರಥೋತ್ಸವಕ್ಕೆ ಭಕ್ತರು ಉತ್ತತ್ತಿ, ಬಾಳೆ ಹಣ್ಣು ಸಮರ್ಪಿಸಿ ಭಕ್ತಿ ಮೆರೆದರು. ಗುದ್ನೇಶ್ವರ ಮಹಾರಾಜಕೀ ಜೈ ಎಂಬ ಜಯಘೋಷ ಮುಗಿಲು ಮುಟ್ಟಿದ್ದವು. ಸುಮಾರು ಒಂದು ಕಿಮೀ ದೂರ ಇರುವ ಪಾದಗಟ್ಟೆ ತಲುಪಿ ರಥ ಮರಳಿ ಸ್ಥಾನಕ್ಕೆ ತಲುಪಿತು. ನಾನಾ ಹಳ್ಳಿಗಳಿಂದ ಜನರು ಅಪಾರ ಪ್ರಮಾಣದಲ್ಲಿ ಆಗಮಿಸಿ ರಥೋತ್ಸವ ಕಣ್ತುಂಬಿಕೊಂಡರು.

ಹರಕೆ ತೀರಿಸಿದ ಭಕ್ತರು:

ಗುದ್ನೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ನಾನಾ ಧಾರ್ಮಿಕ ಕಾರ್ಯ ಹಾಗೂ ಪೂಜೆ ಜರುಗಿದವು. ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೀಡ್ ನಮಸ್ಕಾರ ಹಾಕಿ ಹಾಗೂ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.ಜಾತ್ರೋತ್ಸವದಲ್ಲಿ ಪಪಂ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ಗುದ್ನೇಪ್ಪನಮಠದ ಸ್ಥಳೀಯ ಯುವಕರು, ಮುಖಂಡರು ಜಾತ್ರೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಶ್ರಮಿಸಿದ್ದು ಕಂಡು ಬಂದಿತು.

ಬುತ್ತಿ ಹೊತ್ತ ತಂದ ಭಕ್ತರು:

ರಥೋತ್ಸವ ಪ್ರಯುಕ್ತ ಮಡಿಯಿಂದ ಮನೆಯಲ್ಲಿ ನಾನಾ ತರಹದ ತಿನಿಸಿ, ರೊಟ್ಟಿ, ಪಲ್ಯೆ ಮಾಡಿಕೊಂಡು ಭಕ್ತರು ಗುದ್ನೇಶ್ವರ ದೇವರಿಗೆ ಬುತ್ತಿಯ ಗಂಟನ್ನು ಹೊತ್ತು ತಂದರು. ಬುತ್ತಿ ತಂದು ದೇವರಿಗೆ ನೈವೆದ್ಯ ಸಮರ್ಪಿಸಿ ದೇವಸ್ಥಾನಕ್ಕೆ ಬುತ್ತಿ ಸಮರ್ಪಿಸಿದರು.

ನಂದಿಕೋಲು ಆಗಮನ:

ಗುದ್ನೇಪ್ಪನಮಠದಿಂದ ಸುಮಾರು 20 ಕಿಮೀ ದೂರ ಇರುವ ತಾಲೂಕಿನ ಬಿನ್ನಾಳ ಗ್ರಾಮದಿಂದ ರಥೋತ್ಸವಕ್ಕೆ ನಂದಿಕೋಲು ಆಗಮಿಸಿತು. ಬೆಳಗ್ಗೆ ಬಿನ್ನಾಳ ಗ್ರಾಮದಲ್ಲಿ ಬಿನ್ನಾಳ ಗ್ರಾಮಸ್ಥರು ಭಕ್ತಿಯಿಂದ ನಂದಿಕೋಲು ಪೂಜಿಸಿ ಗುದ್ನೇಪ್ಪನಮಠಕ್ಕೆ ಆಗಮಿಸಿದರು. ದಾರಿಯೂದ್ದಕ್ಕೂ ನಂದಿಕೋಲಿಗೆ ಭಕ್ತರು ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.

ಮಹಾಪ್ರಸಾದ: ಗುದ್ನೇಪ್ಪನಮಠದ ನೀಲಗುಂದ ಮಠದಲ್ಲಿ ಗುದ್ನೇಶ್ವರ ಜಾತ್ರೆ ನಿಮಿತ್ತ ಪ್ರಸಾದ ಸೇವೆ ಜರುಗಿತು. ನಾನಾ ಕಡೆಯಿಂದ ಆಗಮಿಸಿದ ಭಕ್ತರು ಗುದ್ನೇಶ್ವರ ಸ್ವಾಮೀಯ ಪ್ರಸಾದ ಸ್ವೀಕರಿಸಿದರು. ಗೋಧಿ ಹುಗ್ಗಿ, ಅನ್ನಸಾಂಬಾರ್ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ ನಾಲ್ಕು ದಿನಗಳ ಕಾಲ ಪ್ರಸಾದ ಜರುಗಲಿದೆ. ಅನ್ನಪ್ರಸಾದಕ್ಕೆ ಭಕ್ತರು ಧಾನ್ಯ ಹಾಗೂ ಬೆಲ್ಲ, ಸಕ್ಕರೆ ಸಮರ್ಪಿಸಿದರು.

ನವದಂಪತಿ ಕಣ್ತುಂಬಿಕೊಳ್ಳುವ ರಥೋತ್ಸವ:

ಗುದ್ನೇಶ್ವರ ಪಂಚಕಳಸ ರಥೋತ್ಸವ ನೋಡಲೆಂದು ನವದಂಪತಿಗಳು ಆಗಮಿಸುತ್ತಾರೆ.ಮದುವೆಯಾದ ಮೊದಲ ವರ್ಷದಲ್ಲಿ ಬರುವ ಗುದ್ನೇಶ್ವರ ರಥೋತ್ಸವವನ್ನು ದಂಪತಿಗಳು ಇಬ್ಬರೂ ಸೇರಿ ನೋಡಬೇಕು ಎಂಬುದು ಇಲ್ಲಿನ ಸಂಪ್ರದಾಯ. ಗುರುವಾರ ಜರುಗಿದ ಗುದ್ನೇಶ್ವರ ರಥೋತ್ಸವದಲ್ಲಿ ನವಜೋಡಿಗಳು ರಥೋತ್ಸವ ಕಣ್ತುಂಕೊಳ್ಳಲು ನಾನಾ ಕಡೆಯಿಂದ ಆಗಮಿಸಿದ್ದರು. ಭಕ್ತರು ಎತ್ತಿನ ಬಂಡಿ ಹಾಗೂ ನಾನಾ ವಾಹನಗಳಿಂದ ಜಾತ್ರೆಗೆ ಆಗಮಿಸಿದರು. ವಿಶೇಷವೆಂಬಂತೆ ಇಲ್ಲಿನ ಜಾತ್ರೆಯಲ್ಲಿ ಕಬ್ಬು ಖರೀದಿ ಮಾಡುವುದು ಸಂಪ್ರದಾಯವಾಗಿದ್ದು, ಕಬ್ಬು ಖರೀದಿಸಿ ತೆರಳಿದರು. ಹಾಗೆ ಗುದ್ನೇಶ್ವರ ಜಾತ್ರೆಯಲ್ಲಿ ಮಿರ್ಚಿ,ಬಜಿಗೆ ಪ್ರಸಿದ್ದ ಆಗಿದ್ದು, ಮಿರ್ಚಿ ಹಾಗೂ ಬಜಿಗಳನ್ನು ಜನರು ಸವೆದರು.