ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಅಂದು ಬೆ.11ಕ್ಕೆ ದಿಲ್ಲಿಯಿಂದ ಆಗಮಿಸಲಿರುವ ಮೋದಿಯವರು ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. ಇದಕ್ಕಾಗಿ ಕಲಬುರಗಿಯಲ್ಲಿ ಸಿದ್ಧತೆಗಳು ಶುರುವಾಗಿದ್ದು ಅಂತಿಮ ಹಂತ ತಲುಪಿವೆ.ಏತನ್ಮಧ್ಯೆ ಮೋದಿ ಸಮಾರಂಭಕ್ಕೆ ವ್ಯವಸ್ಥೆ ಮಾಡಲಾಗಿರುವ ಎನ್‌ವಿ ಮೈದಾನದಲ್ಲಿ 1 ಲಕ್ಷ ಜನರಿಗೆ ಆಸನ ಸವಲತ್ತು ಕಲ್ಪಿಸಲಾಗಿದೆ. ಒಂದು ವೇಳೆ ಹೆಚ್ಚಿಗೆ ಜನ ಬಂದಲ್ಲಿ ಅವರನ್ನು ಪಕ್ಕದಲ್ಲೇ ಇರುವ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಟೆಂಟ್ ಹಾಕಿ ಆಸನ ವ್ಯವಸ್ಥೆ ಮಾಡಿ ಅಲ್ಲೇ ದೊಡ್ಡ ಸ್ಕ್ರೀನ್ ಹಾಕಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡುವ ಚಿಂತನೆಯೂ ಸಾಗಿದೆ. ಆದಾಗ್ಯೂ ಈ ಬಗ್ಗೆ ಯಾವುದೇ ಅಂತಿಮ ನಿರ್ಣಯ ಕೈಗೊಂಡಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.
ಈಚೆಗಷ್ಟೇ ಮಾ.13ರಂದು ಎನ್‌ವಿ ಮೈದಾನದಲ್ಲೇ ಕಾಂಗ್ರೆಸ್ ಪಂಚ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗಿತ್ತು. ಇದಕ್ಕಾಗಿಯೇ ಹಾಕಲಾಗಿದ್ದ ದೊಡ್ಡದಾದ ವೇದಿಕೆಯನ್ನೇ ಮೋದಿಯವರ ಸಮಾರಂಭಕ್ಕೆ ತಕ್ಕಂತೆ ಬದಲಿಸಲಾಗಿದೆ.ಭದ್ರತೆ ಕಾರಣಗಳಿಂದ ವೇದಿಕೆಯನ್ನು ದೊಡ್ಡದು ಮಾಡಲಾಗಿದೆಯಲ್ಲದೆ ಸುತ್ತಮುತ್ತ ಹೆಚ್ಚಿನ ಸ್ಥಳ ಅವಕಾಶ ನೀಡಲಾಗಿದೆ.
ವಾಹನ ನಿಲುಗಡೆಗೆ ವ್ಯವಸ್ಥೆ: ನಗರ ಪೊಲೀಸರು ಪ್ರಧಾನಿ ಭೇಟಿ ಹಿನ್ನೆಲೆ ನಗರಕ್ಕೆ ಬೇರೆಡಿಯಿಂದ ಬರುವ ವಾಹನಗಳ ನಿಲುಗಡೆ, ರಸ್ತೆ ಬಳಕೆ ವಿಚಾರದಲ್ಲಿ ಹಲವು ವ್ಯವಸ್ಥೆಗಳನ್ನು ಮಾಡಿ ಪ್ರಕಟಣೆ ನೀಡಿದ್ದಾರೆ.ಕಾರು, ದ್ವಿಚಕ್ರ ವಾಹನಗಳ ನಿಲುಗಡೆಗಾಗಿ ಆಳಂದ ಕಡೆಯಿಂದ ಬರುವ ವಾಹನಗಳಿಗೆ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ನಿಲುಗಡೆಗೆ ಸವಲತ್ತು ಕಲ್ಪಿಸಲಾಗಿದೆ. ಹುಮ್ನಾಬಾದ್‌ನಿಂದ ಬುರವ ವಾಹನಗಳಿಗೆ ಅಪ್ಪಾ ಪಬ್ಲಿಕ್ ಶಾಲೆ, ಕೋಟೆ ಮೈದಾನದಲ್ಲಿ ನಿಲುಗಡೆಗೆ, ಸೇಡಂ, ಚಿಂಚೋಳಿ, ಕಾಳಗಿಯಿಂದ ಬರುವ ವಾಹನಗಳಿಗೆ ವೀರಶೈವ ಕಲ್ಯಾಣ ಮಂಟಪ ಆವರಣ, ಚಿತ್ತಾಪುರ, ಶಹಾಬಾದ್‌ನಿಂದ ಬರುವ ವಾಹನಗಳಿಗೆ ವಿಜಯ ವಿದ್ಯಾಲಯ ಆವರಣದಲ್ಲಿ, ಅಫಜಲ್ಪುರದಿಂದ ಬರುವ ವಾಹನಗಳಿಗೆ ಎಸ್‌ಬಿ ಕಾಲೇಜು ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ರಾಷ್ಟ್ರಪತಿ ವೃತ್ತದಿಂದ ಬಸ್ ಡಿಪೋ 3ರ ಮಾರ್ಗವಾಗಿ ಶರಣಬಸವೇಶ್ವರ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಶನಿವಾರ ಏಕಮುಖ ಸಂಚಾರ ರಸ್ತೆಯಾಗಿಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮೀಷನರ್ ಚೇತನ್ ತಿಳಿಸಿದ್ದಾರೆ.