ಒಂದು ಸುಪಾರಿಯಿಂದ ಬಯಲಾದ್ವು 2 ಹತ್ಯೆ ಕೇಸ್‌ಗಳು

| Published : Jan 16 2025, 12:48 AM IST

ಸಾರಾಂಶ

ಕಿರುಕುಳ ನೀಡುತ್ತಿರುವುದಕ್ಕೆ ಬೇಸತ್ತು ಸುಪಾರಿ ನೀಡಿ ತನ್ನ ಗಂಡನನ್ನೇ ಹತ್ಯೆ ಮಾಡಿಸಿದ ಘಟನೆ ಹತ್ತು ತಿಂಗಳ ನಂತರ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಕಿರುಕುಳ ನೀಡುತ್ತಿರುವುದಕ್ಕೆ ಬೇಸತ್ತು ಸುಪಾರಿ ನೀಡಿ ತನ್ನ ಗಂಡನನ್ನೇ ಹತ್ಯೆ ಮಾಡಿಸಿದ ಘಟನೆ ಹತ್ತು ತಿಂಗಳ ನಂತರ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ ಈ ಒಂದು ಪ್ರಕರಣ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರಿಂದ ಚೈನ್‌ ಲಿಂಕ್‌ನಂತೆ ಒಂದೊಂದೇ ಪ್ರಕರಣಗಳು ಬಯಲಾಗುತ್ತಾ ಹೋಗಿವೆ. ಹೀಗಾಗಿ ಪೊಲೀಸರು ಹಳೆಯ ಒಟ್ಟು 3 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಕರಣ 1:

2024ರ, ಏಪ್ರಿಲ್‌ನಲ್ಲಿ ಹುಕ್ಕೇರಿ ತಾಲೂಕಿನ ರಾಮಗೋನಟ್ಟಿ (ಹಟ್ಟಿಆಲೂರ)ಯ ಮಹಾಂತೇಶ ಭೀಮಪ್ಪಾ ಸುಟಗನ್ನವರ (38) ಎಂಬಾತ ಆತನ ಪತ್ನಿಯ ತವರೂರು ಹಟ್ಟಿ ಆಲೂರಲ್ಲಿ ರಾತ್ರಿ ಮಲಗಿದಾಗ ಏಕಾಏಕಿ ಅಸುನೀಗಿದ್ದ. ಮದ್ಯ ಸೇವಿಸಿ ಆತ ಮೃತಪಟ್ಟಿದ್ದಾನೆಂದು ಆತನ ಪತ್ನಿ ಮಾಲಾ ಎಲ್ಲರನ್ನು ನಂಬಿಸಿ ಅಂತ್ಯಕ್ರಿಯೆ ಕೂಡ ನಡೆಸಿದ್ದಳು. ಆದರೆ, ಇದರಿಂದ ಅನುಮಾನಗೊಂಡ ಮೃತ ಮಹಾಂತೇಶನ ಅಣ್ಣ ಕಲ್ಲಪ್ಪಾ ಭೀಮಪ್ಪಾ ಸುಟಗನ್ನವರ ಹುಕ್ಕೇರಿ ಠಾಣೆಯಲ್ಲಿ 2025, ಜ.10ರಂದು ಆತನ ಪತ್ನಿ ಮತ್ತು ಇತರರ ಮೇಲೆ ಸಂಶಯಗೊಂಡು ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ ಮೃತಪಟ್ಟ ಮಹಾಂತೇಶನ ಪತ್ನಿ ಮಾಲಾಳನ್ನು ಜ.11ರಂದೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಗಂಡನ ಕಿರುಕುಳಕ್ಕೆ ಬೇಸತ್ತು ಹಟ್ಟಿಆಲೂರಿನ ಆಕಾಶ ಬಸಲಿಂಗಪ್ಪ ಗೋಕಾವಿ ಎಂಬಾತನಿಗೆ ₹70,000 ನೀಡಿ ಕೊಲೆಗೆ ಸುಪಾರಿ ನೀಡಿದ್ದೇನೆ ಎಂದು ಸತ್ಯ ಒಪ್ಪಿಕೊಂಡಿದ್ದಾಳೆ. ಅಲ್ಲದೆ, ಮದ್ಯ ಸೇವಿಸಿ ನಶೆಯಲ್ಲಿ ಅಸುನೀಗಿದ್ದಾನೆಂದು ಜನರನ್ನು ನಂಬಿಸಿ ಹುಕ್ಕೇರಿಯ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಪ್ರಮುಖ ಆರೋಪಿಯಿಂದ ಹೊರಬಿತ್ತು ಮತ್ತೊಂದು ಕೃತ್ಯ:

ಮಹಾಂತೇಶ ಸುಟಗನ್ನವರ ಕೊಲೆಯ ಪ್ರಮುಖ ಆರೋಪಿ ಆಕಾಶ ಗೋಕಾವಿಯನ್ನು ಜ.11ರಂದು ವಿಚಾರಣೆಗೆ ಒಳಪಡಿಸಿದಾಗ ಮತ್ತೊಂದು ಕೊಲೆಯ ಕೃತ್ಯ ಬಯಲಾಗಿದೆ. ತಾನು ಮತ್ತು ಸ್ನೇಹಿತರಾದ ರಮೇಶ ಲಗಮಪ್ಪಾ ಮಾಳಗಿ, ಪಾಶ್ಚಾಪೂರದ ಅಪಣ್ಣಾ ಮುಶಪ್ಪಾ ನಾಯಿಕ ಜತೆಗೂಡಿ ಹಣದ ಆಸೆಗಾಗಿ 2022ರಲ್ಲಿ ಹಟ್ಟಿ ಆಲೂರದ ನಾಗಪ್ಪಾ ವಿಠ್ಠಲ ಮರೆಪ್ಪಗೋಳ (34) ಎಂಬಾತನ ಹತ್ಯೆ ಮಾಡಿರುವ ಕೃತ್ಯ ಕೂಡ ಬಯಲಾಗಿದೆ.

ಮೃತ ನಾಗಪ್ಪಾ ಮರೆಪ್ಪಗೋಳನ ಪತ್ನಿ ಜತೆಗೆ ನಾಗಪ್ಪಾ ಸಿದ್ದಪ್ಪಾ ಮಾಳಗಿ ಎಂಬಾತ ಅನೈತಿಕ ಸಂಬಂಧ ಹೊಂದಿದ್ದ. ಹೀಗಾಗಿ ಹತ್ಯೆಯಾದ ನಾಗಪ್ಪಾ ಮರೆಪ್ಪಗೋಳ ಪತ್ನಿ ಯಲ್ಲವ್ವ ಮತ್ತು ನಾಗಪ್ಪಾ ಮಾಳಗಿಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಯಲ್ಲವ್ವ ಮತ್ತು ನಾಗಪ್ಪಾ ಮಾಳಗಿ ನಮಗೆ ₹3 ಲಕ್ಷ ಹಣ ಕೊಟ್ಟು ಮರೆಪ್ಪಗೋಳ ಹತ್ಯೆಗೆ ಸುಪಾರಿ ನೀಡಿದ್ದರು. ಅದರಂತೆ ಆಕೆಯ ಪತಿ ಮರೆಪ್ಪಗೋಳನನ್ನು ಸಾವಳಗಿ ಜಾತ್ರೆಗೆ ಹೋಗಿ ಪಾರ್ಟಿ ಮಾಡೋಣ ಎಂದು ಮದ್ಯ ಕುಡಿಸಿದ್ದೆವು. ನಂತರ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದೆವು. ಅಲ್ಲದೆ, ಆತನ ಹೆಣವನ್ನು ಪರಕನಟ್ಟಿಯ ಸಮೀಪ ರೈಲ್ವೆ ಹಳಿಯ ಮೇಲೆ ಮಲಗಿಸಿ, ಆತನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬು ಬಿಂಬಿಸಿದ್ದರು.

ತನ್ನ ಸಹೋದರರನ್ನೇ ಕೊಂದ ದುರುಳ

ಎರಡನೇ ಪ್ರಕರಣದ ಆರೋಪಿ ರಮೇಶ ಲಗಮಪ್ಪಾ ಮಾಳಗಿಯು ತನ್ನ ಅಣ್ಣನನ್ನೇ ಹತ್ಯೆ ಮಾಡಿರುವ ಕೃತ್ಯ ಬಯಲಾಗಿದೆ.

2023ರಲ್ಲಿ ನಡೆದ ಈ ಕೃತ್ಯ ಈಗ ಬೆಳಕಿಗೆ ಬಂದಿದೆ. ಆರೋಪಿ ರಮೇಶ ಲಗಮಪ್ಪಾ ಮಾಳಗಿ ತನ್ನ ಅಣ್ಣನಾದ ವಿಠ್ಠಲ ಮಾಳಗಿ ಎಂಬಾತನನ್ನು ಸ್ನೇಹಿತರೊಟ್ಟಿಗೆ ಸೇರಿ ಹತ್ಯೆ ಮಾಡಿದ್ದಾನೆ. ವಿಠ್ಠಲ ಮದ್ಯ ಚಟಕ್ಕೆ ಬಿದ್ದು ತನ್ನ ಜಮೀನನ್ನು ₹22 ಲಕ್ಷಕ್ಕೆ ಅಡವಿಟ್ಟಿದ್ದ. ಇದರಿಂದ ನನ್ನ ಮುಂದಿನ ಜೀವನ ಹಾಳು ಮಾಡುತ್ತಾನೆಂದು ತನ್ನ ಗೆಳೆಯರಾದ ಆಕಾಸ ಬಸಲಿಂಗಪ್ಪಾ ಗೋಕಾವಿ, ಅಪ್ಪಣ್ಣಾ ಜತೆಗೆ ಸಂಚು ರೂಪಿಸಿದೆವು.

ಮೃತ ವಿಠ್ಠಲನನ್ನು ಪಾಶ್ಚಾಪೂರದ ಕುಂದರಗಿಯ ಗುಡ್ಡಕ್ಕೆ ರಾತ್ರಿವೇಳೆ ಕರೆದುಕೊಂಡು ಹೋಗಿ ಕಂಠಪೂರ್ತಿ ಮದ್ಯ ಕುಡಿಸಿ, ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಹೆಣವನ್ನು ಮೋಟಾರ ಸೈಕಲ್ ಮೇಲೆ ತೆಗೆದುಕೊಂಡು ಬಂದು ಅವರ ಮನೆಯ ಹತ್ತಿರ ರಸ್ತೆಯಲ್ಲಿ ದ್ವಿಚಕ್ರ ವಾಹನದ ಸಮೇತ ಕೆಡವಿ ಹೋಗಿದ್ದಾರೆ. ನಂತರ ಇದು ಅಪಘಾತವಾಗಿದೆ ಎಂದು ಬಿಂಬಿಸಿದ್ದರು. ಜತೆಗೆ ಪೊಲೀಸ್‌ ಕೇಸ್‌ ಕೂಡ ದಾಖಲಿಸದೇ ತಮ್ಮ ಜಮೀನಿನಲ್ಲೇ ಸುಟ್ಟಿದ್ದರು. ಅಲ್ಲದೆ, ಪುರಾವೆಗಳನ್ನು ನಾಶಪಡಿಸಿದ್ದರು. ಹೀಗಾಗಿ ಆರೋಪಿ ಆಕಾಶನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.