ಸಾರಾಂಶ
ಈ ಎಲ್ಲ ವಾಹನಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ನಗರದ ಸ್ವಚ್ಛತೆಯನ್ನು ಕಾಪಾಡುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕನ್ನಡಪ್ರಭ ವಾರ್ತೆ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ೧೮ ಲಕ್ಷ ರು. ವೆಚ್ವದ ೨ ನೂತನ ವಾಹವನ್ನು ಖರೀದಿ ಮಾಡಲಾಗಿದ್ದು, ಮಂಗಳವಾರ ಸಂಜೆ ಶಾಸಕ ಅಶೋಕ್ ಕುಮಾರ್ ರೈ ಅವರು ಪೌರಾಯುಕ್ತ ಮಧು ಎಸ್. ಮನೋಹರ್ ಅವರಿಗೆ ವಾಹನಗಳ ಕೀಲಿಕೈ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಸವಿಲೇವಾರಿಗೆಂದು ಈಗಾಗಲೇ ೧೮ ವಾಹನಗಳನ್ನು ಬಳಕೆ ಮಾಡಲಾಗುತ್ತಿದ್ದು, ಇದೀಗ ಸಿಎನ್‌ಜಿ ಗ್ಯಾಸ್ ಬಳಕೆಯ ಎರಡು ನೂತನ ವಾಹನಗಳನ್ನು ಖರೀದಿ ಮಾಡಲಾಗಿದೆ. ಈ ಎಲ್ಲ ವಾಹನಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ನಗರದ ಸ್ವಚ್ಛತೆಯನ್ನು ಕಾಪಾಡುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಯಾಗಿ ಕಸಸಂಗ್ರಹಣೆ ಮಾಡಿ ಅದರಿಂದ ಸಿಎನ್‌ಜಿ ಗ್ಯಾಸ್ ಉತ್ಪಾದನೆ ಮಾಡುವ ಕಾರ್ಯ ಪುತ್ತೂರು ನಗರಸಭಾ ವ್ಯಾಪ್ತಿಯ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ನಡೆಯಲಿದ್ದು, ಪ್ರಸ್ತುತ ಈ ಗ್ಯಾಸ್ ಉತ್ಪಾದನೆಯ ಕಾರ್ಯ ಪರೀಕ್ಷಾ ಹಂತದಲ್ಲಿದೆ. ಮುಂದೆ ನಗರಸಭೆಯ ಈ ಎರಡು ವಾಹನಗಳಿಗೆ ಇದೇ ಗ್ಯಾಸ್ ಬಳಕೆ ಮಾಡಲಾಗುವುದು. ಉಳಿದಂತೆ ಗ್ಯಾಸ್ ಮುಕ್ತ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡುವ ಕೆಲಸ ನಡೆಯಲಿದೆ ಎಂದು ತಿಳಿಸಿದರು.ಪೌರಾಯುಕ್ತ ಮಧು ಎಸ್. ಮನೋಹರ್ ಸ್ವಾಗತಿಸಿದರು. ನಗರಸಭಾ ಸದಸ್ಯರಾದ ಬಾಲಚಂದ್ರ ಕೆ., ಮಹಮ್ಮದ್ ರಿಯಾಝ್ ಪರ್ಲಡ್ಕ, ಶೈಲಾ ಪೈ ಮೊಟ್ಟೆತ್ತಡ್ಕ, ರಾಬಿನ್ ತಾವ್ರೋ ಸಾಲ್ಮರ, ದಿನೇಶ್ ಶೇವಿರೆ, ನಗರಸಭಾ ಅಧಿಕಾರಿಗಳಾದ ಶಬರೀನಾಥ್, ರಾಮಚಂದ್ರ, ಶ್ವೇತಾ ಕಿರಣ್, ಜಯಲಕ್ಷ್ಮೀ ಬೇಕಲ್ ಮತ್ತಿತರರು ಉಪಸ್ಥಿತರಿದ್ದರು.